More

    ಮೂಲಸ್ಥಳದತ್ತ ಶ್ರೀ ಗಾದ್ರಿಪಾಲ ನಾಯಕನ ಹೆಜ್ಜೆ

    ಚಳ್ಳಕೆರೆ: ಬುಡಕಟ್ಟು ಮ್ಯಾಸನಾಯಕರ ಆರಾಧ್ಯ ದೈವ, ಪಶುಪಾಲಕ ಶ್ರೀ ಗಾದ್ರಿ ಪಾಲನಾಯಕನ ಸ್ವಾಮಿಯ ಗಂಗಾ ಪೂಜೆಯ ಬಳಿಕ ಭಕ್ತರು ದೇವರ ಎತ್ತುಗಳೊಂದಿಗೆ ಮಂಗಳವಾರ ಮೂಲಸ್ಥಳ ಹಾಯ್ಕಲ್‌ನತ್ತ ಹೆಜ್ಜೆ ಹಾಕಿದರು.

    ಹಾಯ್ಕಲ್ ಕೋಟೆಹಟ್ಟಿ ಗ್ರಾಮದ ಗಾದ್ರಿಪಾಲನಾಯಕ ಸ್ವಾಮಿಯನ್ನು 66 ವರ್ಷಗಳ ಬಳಿಕ ಆಚರಿಸುತ್ತಿರುವ ಗುಗ್ಗರಿ ಹಬ್ಬಕ್ಕಾಗಿ ಹೊಳೆಪೂಜೆಗೆ ಕರೆತರಲಾಗಿತ್ತು. ತಾಲೂಕಿನ ದೊಡ್ಡೇರಿ ಸಮೀಪದ ಹೊಳೆಯಲ್ಲಿ ಸೋಮವಾರ ಗಂಗಾಪೂಜೆ ನೆರವೇರಿಸಲಾಯಿತು. ನಂತರ ವಾದ್ಯಮೇಳದೊಂದಿಗೆ ಭಕ್ತರು ಬರಿಗಾಲಲ್ಲಿ ಚಳ್ಳಕೆರೆ, ಕುರುಡಿಹಳ್ಳಿ, ಬಂಡೆಹಟ್ಟಿ ಮಾರ್ಗವಾಗಿ ಹಾಯ್ಕಲ್‌ಗೆ ತೆರಳಿದರು.

    ಮಾರ್ಗದಲ್ಲಿ ಕುರುಡಿಹಳ್ಳಿ ಸಮೀಪದ ಕಾವಲಿನ ಹಳ್ಳಕ್ಕೆ ಪೂಜೆಗೆ ಇಳಿಸಲಾಗುತ್ತದೆ. ಇಲ್ಲಿ ಗಂಗಾಪೂಜೆ ಪೂರೈಸಿಕೊಂಡು ಬುಧವಾರ ಬೆಳಗ್ಗೆ ಸೋಮಲಬಂಡೆ ಹತ್ತಿರದ ಶ್ರೀ ಬೋರೆದೇವರ ಗುಡಿ ಬಳಿ ದೇವರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಗುರುವಾರ ಬೆಳಗಿನ ಜಾವ ಪೂಜೆ ಪೂರೈಸಿ ಮೂಲಗ್ರಾಮ ಹಾಯ್ಕಲ್ ಕೋಟೆ ಹಟ್ಟಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

    ಶ್ರೀ ಗಾದ್ರಿ ಪಾಲನಾಯಕನ ಸ್ವಾಮಿಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ, ಮೊಳಕಾಲ್ಮೂರು, ಜಗಳೂರು, ಕೂಡ್ಲಿಗಿ ಭಾಗದಲ್ಲಿಯೂ ಭಕ್ತರಿದ್ದಾರೆ. ಮೆರವಣಿಗೆಯಲ್ಲಿ ಕ್ಯಾಸಕ್ಕಿ ಪಾಪಯ್ಯ, ನಾಮಲ ಪಾಲಯ್ಯ, ಸಂಗೇನಹಳ್ಳಿ ಓಬಯ್ಯ, ಕಾಕಿ ಓಬಯ್ಯ ಸೇರಿದಂತೆ ಪೂಜಾರಿ, ಕಿಲಾರಿಗಳು ಮತ್ತಿತರರು ಇದ್ದರು.

    ದೊಡ್ಡೇರಿ ಗ್ರಾಮದ ಆರ್. ಓಬಯ್ಯ ಮಾತನಾಡಿ, ಹಾಯ್ಕಲ್ ಸಮೀಪದ ಕೋಟೆಹಟ್ಟಿಯಲ್ಲಿ ನೆಲೆಸಿರುವ ಶ್ರೀಗಾದ್ರಿ ಪಾಲನಾಯಕ ದೊಡ್ಡೇರಿಯ ಅಲಕಿ ವಂಶಸ್ಥರ ಮೂಲ ದೇವ. ಇದೇ ಗ್ರಾಮದಲ್ಲಿ ಅಣ್ಣ ತಮ್ಮಂದಿರು ಮತ್ತು ನೆಂಟರು ಒಟ್ಟಿಗೆ ವಾಸವಾಗಿದ್ದ ಕಾಲದಲ್ಲಿ ಗಾದ್ರಿ ಪಾಲನಾಯಕನನ್ನು ಬುಡಕಟ್ಟು ಸಂಸ್ಕೃತಿ ಪದ್ಧತಿಯಲ್ಲಿ ಪೂಜಾ ಕಾರ್ಯ ಮಾಡಲಾಗುತ್ತಿತ್ತು. ಪಶುಪಾಲನಾ ವೃತ್ತಿ ಮತ್ತು ಹೊಟ್ಟೆಪಾಡಿಗಾಗಿ ಚದುರಿ ಹೋದ ಅಲಕಿ ವಂಶದವರು ಗಾದ್ರಿ ಪಾಲನಾಯಕನನ್ನು ಕೋಟೆಹಟ್ಟಿಯಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡಿದ್ದಾರೆ. ಗುಗ್ಗರಿ ಹಬ್ಬ ಆಚರಣೆಗೆ ಗುಡಿಯಿಂದ ದೇವರನ್ನು ಮೂಲನೆಲೆ ದೊಡ್ಡೇರಿಗೆ ಕರೆ ತರುವ ಸಂಪ್ರದಾಯ ನಡೆಯುತ್ತಿದೆ. 66 ವರ್ಷದ ಬಳಿಕ ನಡೆಯುತ್ತಿರುವ ಗುಗ್ಗರಿ ಹಬ್ಬಕ್ಕೆ ಹೊಳೆಪೂಜೆಗೆ ದೇವರನ್ನು ಕರೆತಂದ ಗುಡಿಕಟ್ಟಿನ 2 ಸಾವಿರಕ್ಕೂ ಹೆಚ್ಚು ಅಣ್ಣತಮ್ಮಂದಿರಿಗೆ ಹೊಳೆ ದಂಡೆಯಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಪೂಜೆ ನೆರವೇರಿಸಿ ಮೂಲ ಗ್ರಾಮಕ್ಕೆ ಬೀಳ್ಕೊಡಲಾಯಿತು ಎಂದರು.

    ದೇವರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ತಹಸೀಲ್ದಾರ್ ಮಾತನಾಡಿ, ದೇಶಿಯ ಸಂಸ್ಕೃತಿ ಮತ್ತು ಧಾರ್ಮಿಕ ಆರಾಧನೆಗಳಲ್ಲಿ ಬುಡಕಟ್ಟು ಸಂಸ್ಕೃತಿಯ ಪದ್ಧತಿಗಳಿಗೆ ಹೆಚ್ಚಿನ ಮನ್ನಣೆ ಇದೆ. ಮ್ಯಾಸಬೇಡರ ಮತ್ತು ಗೊಲ್ಲರ ಆರಾಧ್ಯ ಸಂಸ್ಕೃತಿಗಳ ಆಚರಣೆಗಳ ನಡುವೆ ಒಂದಕ್ಕೊಂದು ಸಾಮ್ಯತೆ ಕಾಣುತ್ತೇವೆ. ತಾಲೂಕಿನಲ್ಲಿ ಬುಡಕಟ್ಟು ಆಚರಣೆಗಳ ನಂಬಿಕೆಯಲ್ಲಿ ಸಂಪ್ರದಾಯ ಉಳಿಸಿಕೊಂಡಿರುವುದು ಮಾದರಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts