More

    ಬೇಡಿಕೆ ಈಡೇರಿಸಲು ಅತಿಥಿ ಶಿಕ್ಷಕರ ಆಗ್ರಹ

    ವಿಜಯವಾಣಿ ಸುದ್ದಿಜಾಲ ಮಂಗಳೂರು

    ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು ವಿವಿಧ ಬೇಡಿಕೆ ಮುಂದಿರಿಸಿ ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

    ಕಳೆದ 8 ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಕರ್ತವ್ಯ ಮಾಡುತ್ತಿದ್ದೇವೆ. ಆದರೆ ಸರ್ಕಾರದಿಂದ ಸಮರ್ಪಕವಾಗಿ ಗೌರವ ಧನ ವಿತರಣೆಯಾಗದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಸಮಾನ ಕೂಲಿ, ಸಮಾನ ವೇತನ ನೀಡಬೇಕು, ಪ್ರತಿ ತಿಂಗಳ ಕೊನೆಗೆ ಆಯಾ ತಿಂಗಳ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

    ಪ್ರತಿ ಮಾರ್ಚ್‌ನಲ್ಲಿ ಅತಿಥಿ ಶಿಕ್ಷಕರ ನೇಮಕ ರದ್ದುಗೊಳಿಸಿ, ಜೂನ್‌ನಲ್ಲಿ ಹೊಸದಾಗಿ ನೇಮಕ ಮಾಡುತ್ತಿರುವುದರಿಂದ ಭದ್ರತೆ ಇರುವುದಿಲ್ಲ. ಮತ್ತೆ ನೇಮಕ ಮಾಡಿದರೆ ಬೇರೆ ಯಾವುದೋ ಶಾಲೆಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಶಿಕ್ಷಕರು ಅಳಲು ತೋಡಿಕೊಂಡರು.

    ತಿಂಗಳುಗಟ್ಟಲೆ ವೇತನ ಬಾಕಿ: ಹೆಸರಿಗೆ ಅತಿಥಿ ಶಿಕ್ಷಕರಾದರೂ ಇತರ ಶಿಕ್ಷಕರಂತೆಯೇ ಪೂರ್ಣಾವಧಿ ಕೆಲಸ ಮಾಡಬೇಕಾಗುತ್ತದೆ. ಪ್ರಾಥಮಿಕ ಶಾಲೆ ಶಿಕ್ಷಕರಿಗೆ ತಿಂಗಳಿಗೆ 7,500 ರೂ. ಹಾಗೂ ಪ್ರೌಢಶಾಲೆಯವರಿಗೆ 8,000 ರೂ. ವೇತನ ನೀಡಲಾಗುತ್ತದೆ. ಇದು ಏನೇನೂ ಸಾಕಾಗುವುದಿಲ್ಲ, ಕೊಡುವ ವೇತನವನ್ನೂ ತಿಂಗಳುಗಟ್ಟಲೆ ಬಾಕಿ ಇರಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿತ್ರಲೇಖಾ ಹೇಳಿದರು.

    ಉಪಾಧ್ಯಕ್ಷೆ ಕಾವ್ಯಾ ಸುಳ್ಯ, ಜತೆ ಕಾರ್ಯದರ್ಶಿ ಸಂದೀಪ್ ಬೆಳ್ತಂಗಡಿ, ಖಜಾಂಚಿ ಶುಭಲಕ್ಷ್ಮಿ ಮುಂತಾದವರಿದ್ದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿಸಲಾಯಿತು.

     ಶೀಘ್ರ ಬಿಡುಗಡೆ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಹಲವು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಕೆಲವು ಬ್ಲಾಕ್‌ಗಳಲ್ಲಿ ಈಗಾಗಲೇ ಜನವರಿವರೆಗಿನ ವೇತನ ಬಿಡುಗಡೆಯಾಗಿದೆ, ಬಂಟ್ವಾಳ ಹಾಗೂ ಬೆಳ್ತಂಗಡಿಯಲ್ಲಿ ಬಾಕಿ ಇದೆ, ಅದೂ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

    —  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts