More

    ಪಿಯು ಮಕ್ಕಳಿಗಿಲ್ಲ ಪಾಠ ಕೇಳುವ ಭಾಗ್ಯ ; 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೊರತೆ

    | ಜಗನ್ನಾಥ್ ಕಾಳೇನಹಳ್ಳಿ, ತುಮಕೂರು

    ಕರೊನಾತಂಕ ಮೆಟ್ಟಿ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಮತ್ತೆ ಬಾಗಿಲು ತೆರೆದಿವೆ. ತರಗತಿಗಳು ಆರಂಭವಾಗಿ ವಾರದೊಳಗೆ ಪ್ರೌಢಶಿಕ್ಷಣ ಇಲಾಖೆ ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಸಹ ಘೋಷಿಸಿದೆ. ಆದರೆ, 8 ದಿನಗಳಾದರೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕೆಲವು ಪಠ್ಯವಿಷಯಗಳ ಪಾಠಗಳನ್ನು ಕೇಳುವ ಭಾಗ್ಯ ಸಿಕ್ಕಿಲ್ಲ…!

    ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿದ್ದು ಜಿಲ್ಲೆಯ 74 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದ ಕೆಲ ಪಠ್ಯವಿಷಯಗಳ ತರಗತಿಗಳು ಇನ್ನೂ ಆರಂಭವಾಗಿಲ್ಲ. ಇದು ಸಹಜವಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮೂಡಿಸಿದೆ. ಪರೀಕ್ಷಾ ದೃಷ್ಟಿಯಿಂದ ಬೋಧನೆ, ಕಲಿಕೆಗಾಗಿ ಗುರುತಿಸಿರುವ ವಿಷಯಾಂಶಗಳನ್ನು ಅಂತಿಮಗೊಳಿಸಲಾಗಿದೆ. ಆದರೆ, ಉಪನ್ಯಾಸಕರ ಕೊರತೆಯಿಂದ ಗ್ರಾಮೀಣಭಾಗದ ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗುವಂತಾಗಿದೆ.

    200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೊರತೆ!: ಜಿಲ್ಲೆಯ 74 ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೊರತೆಯಿದೆ. ಅದರಲ್ಲೂ ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಶಿಕ್ಷಕರ ಕೊರತೆಯಿದೆ. ಭೌತಿಕ ತರಗತಿಗಳು ಆರಂಭವಾಗಿ 8 ದಿನಗಳಾಗಿವೆಯಾದರೂ ಸರ್ಕಾರ ಇನ್ನೂ ಅತಿಥಿ ಉಪನ್ಯಾಸಕರನ್ನು ನೇಮಿಸುವ ಗೋಜಿಗೆ ಹೋಗಿಲ್ಲ. ಹಾಗಾಗಿ, ವಿಜ್ಞಾನ, ವಾಣಿಜ್ಯ ವಿಭಾಗದ ಕೆಲವು ಪಠ್ಯವಿಷಯಗಳ ತರಗತಿಗಳು ಇನ್ನೂ ಪ್ರಾರಂಭಿಸಿಲ್ಲ. ಇನ್ನಾದರೂ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಉಪನ್ಯಾಸಕರ ಕೊರತೆ ಸಮಸ್ಯೆ ಶೀಘ್ರ ಬಗೆಹರಿಸಿ ಆತಂಕ ದೂರ ಮಾಡಲಿದ್ದಾರೆಯೇ ಎಂದು ವಿದ್ಯಾರ್ಥಿಗಳು, ಪಾಲಕರು ಎದುರುನೋಡುತ್ತಿದ್ದಾರೆ.

    ಗ್ರಾಮೀಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆ : ಲಾಕ್‌ಡೌನ್‌ನಿಂದ ಇಡೀ ಶೈಕ್ಷಣಿಕ ವರ್ಷ ಹಳಿತಪ್ಪಿದ್ದು ಈ ವೇಳೆಯಲ್ಲಿನ ಆನ್‌ಲೈನ್ ಪಾಠಗಳಿಂದ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದನ್ನು ಮನಗಂಡು ಪ್ರೌಢಶಿಕ್ಷಣ ಇಲಾಖೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಾದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಭೌತಿಕ ತರಗತಿಗಳನ್ನು ಆರಂಭಿಸಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲು ಮುಂದಾಗಿದೆ. ಆದರೆ, ಸರ್ಕಾರಿ ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸುಂತಾಗಿದೆ.

    ತಿಪಟೂರು ಅವ್ಯವಹಾರ ಭೀತಿ : ಜಿಲ್ಲೆಯ ತಿಪಟೂರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ವೇತನ ನೀಡಿದ ಹಗರಣ ದೊಡ್ಡಮಟ್ಟದಲ್ಲಿ ಸದ್ದು ಮಾಡಿರುವ ಹಿನ್ನೆಲೆಯಲ್ಲಿ ಈಗ ಬೇರೆ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಶಿಕ್ಷಕರ ಕೊರತೆ ಸಮಸ್ಯೆ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಸರ್ಕಾರವೇ ಇದಕ್ಕೆ ಪರಿಹಾರ ಸೂಚಿಸಬೇಕಿದೆ.

    ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆ ಇದೆ. ಇದರಿಂದ ಗ್ರಾಮೀಣಭಾಗದ ಮಕ್ಕಳೇ ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ಶಿಕ್ಷಣ ಸಚಿವರು ಇನ್ನಾದರೂ ಗಮನಹರಿಸಿ ಅತಿಥಿ ಉಪನ್ಯಾಸಕರನ್ನು ಶೀಘ್ರ ನೇಮಿಸಬೇಕು.
    ಅಪ್ಪುಪಾಟೀಲ್, ವಿಭಾಗ ಸಂಘಟನಾ ಕಾರ್ಯದರ್ಶಿ, ಎಬಿವಿಪಿ

    ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 188 ಹುದ್ದೆ ಖಾಲಿ ಇವೆ. ಈಗ ಸದ್ಯಕ್ಕೆ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳಿರುವ ಕಾಲೇಜಿಗೆ ಬೇರೆ ಕಡೆಯಿಂದ ಉಪನ್ಯಾಸಕರನ್ನು ನಿಯೋಜಿಸಲಾಗುವುದು. ನಿರ್ದೇಶನಾಲಯದಿಂದ ಸೂಚನೆ ಬಂದ ನಂತರವಷ್ಟೇ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುವುದು.
    ನರಸಿಂಹಮೂರ್ತಿ ಪಿಯು ಡಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts