ರಾಜಕೀಯವಾಗಿ ಕ್ಷತ್ರಿಯರು ಮುಂಚೂಣಿಗೆ ಬರಲಿ

2 Min Read
ರಾಜಕೀಯವಾಗಿ ಕ್ಷತ್ರಿಯರು ಮುಂಚೂಣಿಗೆ ಬರಲಿ

ಗುಡೂರ: ಕ್ಷತ್ರೀಯ ಸಮಾಜ ಬಾಂಧವರು ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕವಾಗಿ ಬಲಾಢ್ಯರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರ್ನಾಟಕ ಕ್ಷತ್ರೀಯ ಒಕ್ಕೂಟದ ಅಧ್ಯಕ್ಷರು ಹಾಗೂ ಉಚ್ಛ ನ್ಯಾಯಾಲಯದ ವಕೀಲ ಉದಯಸಿಂಗಜಿ ಹೇಳಿದರು.

ಗುಡೂರ ಎಸ್.ಸಿ. ಗ್ರಾಮದ ಆರಾಧ್ಯ ದೇವತೆ ಶ್ರೀ ಜಗದಂಬಾ ದೇವಿ ದೇವಸ್ಥಾನದ ಆವರಣದಲ್ಲಿ ನೂತನ ಪ್ರಸನ್ನ ಗಣಪತಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಲಶ ಹಾಗೂ ಜಗದಂಬಾ ದೇವಿ ಮೂರ್ತಿ ಪ್ರತಿಷ್ಠಾಪನೆಯ 44 ವರ್ಷದ ವಾರ್ಷಿಕೋತ್ಸವ, ಧರ್ಮಸಭೆ, ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.

ನಾವು ಕೇವಲ ಹೋರಾಟಕ್ಕಷ್ಟೇ ಸೀಮಿತರಾಗುತ್ತಿದ್ದೇವೆ. ಆದರೆ ಅಧಿಕಾರದ ಗದ್ದುಗೆ ಮತ್ತೊಂದು ಸಮಾಜದ ಪಾಲಾಗುತ್ತಿದೆ. ಹೀಗಾಗಿ ನಾವೆಲ್ಲರೂ ರಾಜಕೀಯ ರಂಗದಲ್ಲೂ ಸ್ಥಾನಮಾನ ಸಿಗಲು ಹಕ್ಕು ಚಲಾಯಿಸುವಲ್ಲಿ ಬದ್ಧರಾಗೋಣ. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಗುಡೂರ ಎಸ್‌ಎಸ್‌ಕೆ ಸಮಾಜ ಬಾಂಧವರು, ಹಿರಿಯರು, ಶಿಕ್ಷಣ ಪ್ರೇಮಿಗಳಾದ ಈಶ್ವರಸಾ ಖೋಡೆ ಅವರ ಹಿಂದಿನ ಶ್ರಮ, ಯುವಕರ ಪಾತ್ರ ಶ್ಲಾಘನೀಯವಾಗಿದೆ. ನಮ್ಮ ಪರಂಪರೆ ಉಳಿಸಿ-ಬೆಳೆಸಿಕೊಂಡು ಹೋಗಲು ಎಲ್ಲರೂ ಒಗ್ಗಟ್ಟಿನಿಂದ ಬಾಳೋಣ ಎಂದು ಮನವಿ ಮಾಡಿದರು.

ಕೆಲೂರ ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಮಹಾಸಂತ ಸ್ವಾಮಿ ವಿವೇಕಾನಂದರು ‘ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು’ ಎಂದು ಹೇಳಿದ್ದಾರೆ. ಅವರ ಅಮೃತ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಹೆತ್ತವರನ್ನು ಕೊನೆಗಾಲದಲ್ಲಿ ವೃದ್ಧಾಶ್ರಮಕ್ಕೆ ಕಳಿಸದೆ ಅವರ ಸೇವೆಯನ್ನು ಮಾಡಿ ಪುಣ್ಯಗಳಿಸಿರಿ ಎಂದು ನುಡಿದರು.

ಬೆಂಗಳೂರಿನ ಹಿರಿಯ ಲೆಕ್ಕ ಪರಿಶೋಧಕ ಶಂಕರಸಾ ಲದ್ವಾ, ಗಂಗಾವತಿಯ ಕರ್ನಾಟಕ ಯುವ ಕ್ಷತ್ರೀಯ ಒಕ್ಕೂಟದ ಅಧ್ಯಕ್ಷ ಕೃಷ್ಣಸಾ ದಳಭಂಜನ, ರಾಜ್ಯ ಜಂಟಿ ಕಾರ್ಯದರ್ಶಿ ವೆಂಕಟೇಶ ಜಿತೂರಿ, ಗದಗ ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಬಾಕಳೆ ಮಾತನಾಡಿದರು.

See also  ಮಾನವ ಹಕ್ಕುಗಳ ರಕ್ಷಣೆಗೆ ಆಯೋಗ ಬದ್ದ

ಗುಡೂರ ಎಸ್.ಎಸ್.ಕೆ. ಸಮಾಜದ ಚೇರಮನ್ ಮೋಹನಸಾ ಬಸವ ಅಧ್ಯಕ್ಷತೆ ವಹಿಸಿದ್ದರು. ತನು ಮನ ಧನ ಭಕ್ತಿ ಸೇವೆಗೈದ ಖ್ಯಾತ ಉದ್ಯಮಿ ಶಶಿಧರ ರಾಯಭಾಗಿ, ಅಮತ ವೈನ್ಸನ ಶಂಕರಸಾ ದಾನಿ, ತುಕಾರಾಮ ಸುರ‌್ವೆ ಅನೇಕರನ್ನು ಗೌರವಿಸಿ ಸತ್ಕರಿಸಿದರು.

ಶಾಸಕರ ಚಿ. ರಾಜುದೊಡ್ಡನಗೌಡ ಪಾಟೀಲ, ಮಾಜಿ ಅಧ್ಯಕ್ಷ ರಾಜು ಹಾದಿಮನಿ, ಶ್ರೀಕಾಂತ ಸಿಂಗರಿ, ಬಲರಾಮಸಾ ದಾನಿ, ಮದನ ಪಾಟೀಲ, ಹಾಗೂ ನಗರ, ಪಟ್ಟಣಗಳಿಂದ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಸೋಮವಂಶ ಕ್ಷತ್ರಿಯ ಸಮಾಜದ ರಾಯಮ್ಮದೇವಿ ಅಭಿವೃದ್ಧಿ ಸಂಘ ಹಾಗೂ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಬೆಳಗ್ಗೆ ಕೆಲೂರ ಶಿವಗಂಗಾ ಶ್ರೀಗಳ ಸಾನಿಧ್ಯದಲ್ಲಿ ಸಿಂದನೂರಿನ ಶಂಕರ ಅಲ್ಲಂಪಲ್ಲಿ ಹಾಗೂ ಕಳಶ ಗೋಮಾತಾ ಹೋಮ ಪೂಜಾ ವಿಧಿ ವಿಧಾನಗಳೊಂದಿಗೆ ಪ್ರಸನ್ನ ಗಣಪತಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿತು.

ಗಾಯಕ ನಾರಾಯಣ ಮೇರವಾಡಿ ಪ್ರಾರ್ಥಿಸಿದರು. ಅಂಬಾಲಾಲ ಜಿತೂರಿ ಸ್ವಾಗತಿಸಿದರು. ಶಿಕ್ಷಕ ಪಿ.ಎಚ್. ಪವಾರ ವರದಿ ವಾಚಿಸಿದರು. ಶಿಕ್ಷಕ ಎ.ಪಿ ಮನಿ ನಿರೂಪಿಸಿದರು, ಮಹೇಶ ಪವಾರ ವಂದಿಸಿದರು.

Share This Article