More

    ಗ್ಯಾರಂಟಿ ಅನುದಾನ ದುರ್ಬಳಕೆಯಾಗದಿರಲಿ

    ಬೆಳಗಾವಿ: ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿಯೂ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕಲ್ಯಾಣ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಹಾಗಾಗಿ ಫಲಾನುಭವಿಗಳು ಗ್ಯಾರಂಟಿ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

    ನಗರದ ಸರ್ದಾರ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ವರ್ಷದಲ್ಲಿ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ 40 ಸಾವಿರ ಕೋಟಿ ರೂ. ವ್ಯಯಿಸುತ್ತಿದೆ. ಮುಂದಿನ ವರ್ಷದಿಂದ ಅದು 65 ಸಾವಿರ ಕೋಟಿ ರೂ.ಗೆ ವಿಸ್ತರಣೆ ಆಗಲಿದೆ. ಹಾಗಾಗಿ, ಫಲಾನುಭವಿಗಳು ಯೋಜನೆಗಳ ಅನುದಾನವನ್ನು ಮಕ್ಕಳ ಶಿಕ್ಷಣ, ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ವಿನಂತಿಸಿದರು.

    ರಾಜ್ಯದಲ್ಲಿ ಕೆರೆ ತುಂಬಿಸುವ, ನೀರಾವರಿ ಯೋಜನೆಗಳು, ಒಳ್ಳೆಯ ರಸ್ತೆಗಳು, ಸರ್ಕಾರಿ ಶಾಲೆ, ಆಸ್ಪತ್ರೆ ಕಟ್ಟಡಗಳು ಸೇರಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಹೊಸದಾಗಿ ಅಭಿವೃದ್ಧಿ ಯೋಜನೆಗಳು ಆರಂಭವಾಗಲಿವೆ. ಗ್ಯಾರಂಟಿ ಯೋಜನೆ ಅನುದಾನ ದುರ್ಬಳಕೆ ಮಾಡಿಕೊಳ್ಳಬೇಡಿ. ಫಲಾನುಭವಿಗಳು ಸ್ವಯಂಪ್ರೇರಿತರಾಗಿ ಮನೆಮನೆಗೆ ತೆರಳಿ ಗ್ಯಾರಂಟಿ ಯೋಜನೆಗಳ ಕುರಿತು ತಿಳಿವಳಿಕೆ ನೀಡಿದರೆ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡುವವರು ಕೂಡ ಯೋಜನೆಗಳ ಫಲಾನುಭವಿಗಳಿದ್ದಾರೆ. ಕುಟುಂಬ ನಿರ್ವಹಣೆ, ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನಗೊಳಿಸಿದ್ದೇವೆ. ಬೆಳಗಾವಿ ಜಿಲ್ಲೆಗೆ ಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆಯಡಿ 213 ಕೋಟಿ ರೂ. ಬರುತ್ತಿದೆ. ಹಾಗಾಗಿ, ಮುಂಬರುವ ದಿನಗಳಲ್ಲಿ ನಿಮ್ಮ ಆಶೀರ್ವಾದ, ಬೆಂಬಲ ಇರಬೇಕು ಎಂದು ಮನವಿ ಮಾಡಿದರು.

    ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ವಿರೋಧ, ಟೀಕೆ ಮಾಡುತ್ತಿರುವವರು ಇದೀಗ ನಮ್ಮ ಗ್ಯಾರಂಟಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಇದು ನಮ್ಮ ಸರ್ಕಾರದ ಸಾಧನೆ. ಮುಂಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ನಮ್ಮ ಸರ್ಕಾರದ ಜತೆ ನಿಲ್ಲಬೇಕು ಎಂದರು.

    ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕರಾದ ಆಸೀಫ್ ಸೇಠ್, ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಡಿಸಿ ನಿತೇಶ ಪಾಟೀಲ, ಜಿಪಂ ಸಿಇಒ ರಾಹುಲ ಶಿಂಧೆ, ಆಯುಕ್ತ ಅಶೋಕ ದುಡಗುಂಟಿ, ಎಸ್‌ಪಿ ಡಾ.ಭೀಮಾಶಂಕರ ಗುಳೇದ, ಮಹಾನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಮಲ್ಲಿಕಾರ್ಜುನ ಕಲಾದಗಿ ಇತರರಿದ್ದರು.

    ಶೀಘ್ರ ಗೌರವಧನ ಹೆಚ್ಚಳ

    ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳ ಮಾಡಲು ಸರ್ಕಾರ ಬದ್ಧವಾಗಿದ್ದು, ಶೀಘ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ. ನಿಮ್ಮ ನಿಸ್ವಾರ್ಥ ಸೇವೆಗೆ ತಕ್ಕಂತೆ ಗೌರವಧನ ಸಿಗಲಿದೆ. ಈ ಬಗ್ಗೆ ಅನುಮಾನಪಡುವ ಅಗತ್ಯವಿಲ್ಲ. ಈ ಬಾರಿ ಬಜೆಟ್‌ನಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

    ಸುಮಾರು 20 ಸಾವಿರ ಜನರು ಭಾಗಿ!

    ಬೆಳಗಾವಿ ನಗರದ ಸರ್ದಾರ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಾವೇಶಕ್ಕೆ ಜಿಲ್ಲೆಯ 488 ಗ್ರಾಪಂಗಳಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ಗ್ರಾಪಂ ಅಧ್ಯಕ್ಷ, ಸದಸ್ಯರು ಸೇರಿ ಸುಮಾರು 20 ಸಾವಿರ ಜನರು ಭಾಗವಹಿಸಿದ್ದರು. ವಿವಿಧ ಭಾಗಗಳಿಂದ 500ಕ್ಕೂ ಅಧಿಕ ವಾಹನಗಳಲ್ಲಿ ಜನರು ಸಮಾವೇಶಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

    ಕೈಗೆ ಧ್ವಜ ಕೊಡುವವರಿಂದ ಎಚ್ಚರದಿಂದಿರಿ

    ‘ಚುನಾವಣೆಗಳು ಬಂದಾಗ ನಮ್ಮ ದಾರಿ ತಪ್ಪಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತವೆ. ಜನರು ಜಾಗೃತರಾಗಿಬೇಕು. ನಿಮ್ಮ ಕೈಯಲ್ಲಿ ಧ್ವಜ ಕೊಡುವವರ ಮಕ್ಕಳು ಇಂಗ್ಲೆಂಡ್‌ನಲ್ಲಿ ಓದುತ್ತಿದ್ದಾರೆ. ಕೈಯಲ್ಲಿ ಧ್ವಜ ಹಿಡಿದವರು ರಸ್ತೆಯಲ್ಲಿದ್ದೀರಿ. ಹಾಗಾಗಿ ಕೈಗೆ ಧ್ವಜ ಕೊಡುವವರಿಂದ ಎಚ್ಚರದಿಂದಿರಿ. ಮಕ್ಕಳ ಕೈಗೆ ಧ್ವಜ ಕೊಡುವ ಬದಲು ಉತ್ತಮ ಶಿಕ್ಷಣ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts