More

    ಟೆರೇಸ್ ಮೇಲೆ ಮಲ್ಲಿಗೆ ಕೃಷಿ: ಲಾಕ್‌ಡೌನ್ ವೇಳೆ ಪುತ್ತೂರಿನ ಯುವಕನ ಸಾಧನೆ

    ಪುತ್ತೂರು: ಕಳೆದ ವರ್ಷದ ಲಾಕ್‌ಡೌನ್ ಸಂದರ್ಭ ಮೊಟ್ಟೆತ್ತಡ್ಕದ ಯುವಕನೋರ್ವ ತನ್ನ ಮನೆ ಟೇರಸ್‌ನಲ್ಲಿ ಮಲ್ಲಿಗೆ ಕೃಷಿ ಮಾಡಿ ಆದಾಯ ಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಈ ಬಗ್ಗೆ ಸಚಿವ ಸಿಟಿ ರವಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿರುವುದು ವಿಶೇಷ.

    ಮೊಟ್ಟೆತ್ತಡ್ಕ ನಿವಾಸಿ ಸಂದೀಪ್ ಲೋಬೋ ಮಲ್ಲಿಗೆ ಬೆಳೆದವರು. ತನ್ನ ಐದು ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಅವರು ಕಳೆದ ಲಾಕ್‌ಡೌನ್ ಅವಧಿಯಲ್ಲಿ ಮಲ್ಲಿಗೆ ಕೃಷಿ ಮಾಡಿದರೆ ಹೇಗೆ ಎಂಬುದಾಗಿ ಯೋಚಿಸಿ ಆರ್‌ಸಿಸಿ ಮನೆ ಮೇಲ್ಭಾಗದ ಖಾಲಿ ಜಾಗ ಬಳಸಿ ಮಲ್ಲಿಗೆ ಬೆಳೆಸಲು ಮುಂದಾದರು. 1,000 ಚದರಡಿ ಜಾಗದಲ್ಲಿ ಗೋಣಿಯೊಂದಕ್ಕೆ 25 ಕೆ.ಜಿ ಮಣ್ಣು ತುಂಬಿಸಿ ಮಲ್ಲಿಗೆ ಗಿಡ ನಾಟಿ ಮಾಡಿದರು. ಸುಮಾರು 72 ಗೋಣಿ ಚೀಲದಲ್ಲಿ ಮಲ್ಲಿಗೆ ಗಿಡಗಳು ಸೊಂಪಾಗಿ ಬೆಳೆದಿವೆ.

    ನಾಟಿ ಮಾಡಿದ ಆರು ತಿಂಗಳಲ್ಲಿ ಮಲ್ಲಿಗೆ ಮಾರಾಟ ಪ್ರಾರಂಭಿಸಿದ್ದಾರೆ. ದಿನವೊಂದಕ್ಕೆ ಆರರಿಂದ ಏಳು ಚೆಂಡಿನಷ್ಟು ಹೂ ಸಿಗುತ್ತದೆ. ಈವರೆಗೆ 35 ಸಾವಿರ ರೂ. ಆದಾಯ ಗಳಿಸಿದ್ದಾರೆ. ಕಾಲ ಕಾಲಕ್ಕೆ ಸೆಗಣಿ ಗೊಬ್ಬರ, ನೀರು ನೀಡಿ ದಿನ ನಿತ್ಯ ಗಿಡದ ಆರೈಕೆ ಮಾಡುತ್ತಾರೆ. ಮಲ್ಲಿಗೆ ಕೃಷಿ ಮಾತ್ರವಲ್ಲದೆ ತರಕಾರಿಯನ್ನೂ ಬೆಳೆಯುತ್ತಾರೆ. ಜತೆಗೆ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಬಳಸುತ್ತಾರೆ. ಈ ಬಗ್ಗೆ ಶನಿವಾರ ರಾಜ್ಯ ಸಚಿವ ಸಿಟಿ ರವಿ ತಮ್ಮ ಟ್ವಿಟ್ಟರ್ ಮೂಲಕ ಪುತ್ತೂರಿನ ಸಂದೀಪ್ ಲೋಬೋಗೆ ಮೆಚ್ಚುಗೆ ಸೂಚಿಸಿದ್ದರು

    ಮೋದಿ ಅವರ ಆತನಿರ್ಭರ ಭಾರತ ಯೋಜನೆಯಂತೆ ಕಳೆದ ಬಾರಿ ಲಾಕ್‌ಡೌನ್ ಸಂದರ್ಭ ಮನೆ ಮೇಲಿನ ಖಾಲಿ ಜಾಗದಲ್ಲಿ ಮಲ್ಲಿಗೆ ಕೃಷಿ ಪ್ರಾರಂಭಿಸಿದೆ. ಪ್ರತಿದಿನ ಉಡುಪಿ ಮಾರುಕಟ್ಟೆಯಲ್ಲಿನ ದರ ಆಧರಿಸಿ ಧಾರಣೆ ನಿಗದಿಯಾಗುತ್ತದೆ. ಸೀಸನ್ ಮೇಲೆ ದರ ಹೆಚ್ಚು ಕಡಿಮೆ ನಿರ್ಧರಿತವಾಗುತ್ತದೆ. ಲಾಕ್‌ಡೌನ್‌ನಲ್ಲಿ ಪ್ರಾರಂಭಿಸಿದ ಮಲ್ಲಿಗೆ ಕೃಷಿಯಲ್ಲಿ ಯಶಸ್ಸು ಸಿಕ್ಕಿದೆ.
    -ಸಂದೀಪ್ ಲೋಬೋ, ಮಲ್ಲಿಗೆ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts