More

    ಅ.12 ರಿಂದ 14ರವರೆಗೆ ತೋಟಗಳಿಗೆ ಕಾಫಿ ಮಂಡಳಿ ಸಿಇಒ ಭೇಟಿ

    ಚಿಕ್ಕಮಗಳೂರು: ಬೆಳೆಗಾರರ ಸಮಸ್ಯೆ ಅರಿಯಲು ಕಾಫಿ ಮಂಡಳಿ ಸಿಇಒ ಕೆ.ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ಅ.12 ರಿಂದ 14ರವರೆಗೆ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಿ ಬೆಳೆಗಾರರ ಜತೆ ಸಮಾಲೋಚಿಸಲಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎನ್.ಬಿ.ಉದಯಕುಮಾರ್ ತಿಳಿಸಿದರು.

    ಬೆಳೆಗಾರರ ಸಮಸ್ಯೆಗಳನ್ನು ಕಾಫಿ ಮಂಡಳಿ ನೂತನ ಸಿಇಒ ಕೆ.ಜಿ.ಜಗದೀಶ್ ಗಮನಕ್ಕೆ ತಂದಾಗ ಕಾಫಿ ತೋಟಗಳಿಗೆ ಭೇಟಿ ನೀಡಿ ಬೆಳೆಗಾರರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ಬೆಲೆ ವ್ಯತ್ಯಯ ಇತರ ಕಾರಣದಿಂದ ರೈತರ ಸಾಲಗಳು ಎನ್​ಪಿಎ ಆಗಿರುವುದರಿಂದ ಸಿಬಿಲ್ ಸ್ಕೋರ್ ಕಡಿಮೆಯಾಗಿ ಹೊಸ ಸಾಲ ಪಡೆಯಲು, ನವೀಕರಣ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಲ್​ಅನ್ನು ಕೃಷಿ ಸಾಲದಿಂದ ಹೊರಗಿಡಬೇಕು. ಕೇವಲ ಐದು ಎಕರೆ ಒಳಗಿನ ಮತ್ತು ಎಸ್ಸಿ, ಎಸ್ಟಿ ಬೆಳೆಗಾರರಿಗೆ ಮಾತ್ರ ಅನ್ವಯವಾಗುವ ಕಾಫಿ ತೋಟದ ಕೆಲಸವನ್ನು ನರೇಗಾ ವ್ಯಾಪ್ತಿಗೆ ಒಳಪಡಿಸಿದ್ದು, ಈ ಸೌಲಭ್ಯವನ್ನು ಎಲ್ಲ ಬೆಳೆಗಾರರಿಗೂ ಅನ್ವಯವಾಗುವಂತೆ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

    ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುರಳೀಧರ ಎಸ್.ಬಕ್ಕರವಳ್ಳಿ, ಉಪಾಧ್ಯಕ್ಷ ಡಿ.ಎಂ.ವಿಜಯ್, ಖಜಾಂಚಿ ಐ.ಎಂ.ಮಹೇಶ್​ಗೌಡ, ಮಾಜಿ ಅಧ್ಯಕ್ಷ ಡಾ.ಎನ್.ಕೆ.ಪ್ರದೀಪ್, ಅತ್ತಿಕಟ್ಟೆ ಜಗನ್ನಾಥ್, ಯು.ಎಂ.ತೀರ್ಥಮಲ್ಲೇಶ್, ನಿರ್ದೇಶಕ ಲವ, ಆಲ್ದೂರು ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎ.ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಅರೇಬಿಕಾಕ್ಕೆ 7500 ರೂ. ರೋಬಸ್ಟಾಕ್ಕೆ 9,000 ರೂ.ನೀಡಿ : ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಕಾಫಿ, ಕಾಳುಮೆಣಸು, ಬಾಳೆ, ಭತ್ತ, ಅಡಕೆ ನಾಶವಾಗಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಈ ರೀತಿ ನಷ್ಟಕ್ಕೆ ಗುರಿಯಾದ ತೋಟಗಳ ಒಂದು ಅರೇಬಿಕಾ ಕಾಫಿ ಗಿಡಕ್ಕೆ 7500 ರೂ. ಹಾಗೂ ರೋಬಸ್ಟಾ ಕಾಫಿ ಗಿಡಕ್ಕೆ 9 ಸಾವಿರ ರೂ. ಪರಿಹಾರ ನೀಡಬೇಕು. ಶೇ.25ರಷ್ಟು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕು. ಸಕಲೇಶಪುರದ ಎಡುಕು ಮೇರಿ ಕಾಗಿನಹರೆ ಹಾಗೂ ಚಿಕ್ಕಮಗಳೂರಿನ ಕುದುರೆಮುಖ ಅರಣ್ಯವನ್ನು ಕಾಡಾನೆಗಳ ಸ್ಥಳಾಂತರಕ್ಕೆ ಕಾಯ್ದಿರಿಸಬೇಕು ಎಂದು ಉದಯ್ಕುಮಾರ್ ಹೇಳಿದರು.

    ವಿಶೇಷ ದಳ ರಚನೆಗೆ ಒತ್ತಾಯ: ಆನೆಗಳ ನಿಯಂತ್ರಣಕ್ಕೆ ರೈಲ್ವೆ ಹಳಿಗಳ ತಡೆಗೋಡೆ ಹಾಗೂ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು. ಸಕಲೇಶಪುರ ತಾಲೂಕನ್ನು ವನ್ಯ ಸಂರಕ್ಷಣಾ ವಲಯ ಎಂದು ಘೊಷಿಸಿ ವನ್ಯಜೀವಿ ಸಂರಕ್ಷಣೆ ಹಾಗೂ ಮಾನವ-ಪ್ರಾಣಿ ಸಂಘರ್ಷ ತಡೆಗೆ ವಿಶೇಷ ದಳ ರಚಿಸಬೇಕು. ಆನೆಗಳನ್ನು ಸ್ಥಳಾಂತರಿಸುವವರೆಗೂ ಅವುಗಳನ್ನು ಆಲೂರು ತಾಲೂಕಿನ ನಾಗವಾರದಲ್ಲಿ ಆನೆಕ್ಯಾಂಪ್ ನಿರ್ವಿುಸಿ ಇರಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗುವುದು ಎಂದು ಒಕ್ಕೂಟದ ಅಧ್ಯಕ್ಷರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts