More

    ದ್ವಿತಳಿ ರೇಷ್ಮೆ ಬೆಳೆದು ಆರ್ಥಿಕ ಸದೃಢರಾಗಿ: ಚನ್ನಪಟ್ಟಣದ ರೇಷ್ಮೆ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕಿ ಇಂದ್ರಾಣಿ ಸಲಹೆ

    ಮಾಸ್ತಿ: ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಆಧುನಿಕ ತಾಂತ್ರಿಕ ಅರಿವು ಪಡೆದುಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭದಾಯಕವಾದ ದ್ವಿತಳಿ ರೇಷ್ಮೆ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಚನ್ನಪಟ್ಟಣದ ರೇಷ್ಮೆ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕಿ ಇಂದ್ರಾಣಿ ಹೇಳಿದರು.

    ಮಾಸ್ತಿ ಹೋಬಳಿಯ ಬಿಟ್ನಹಳ್ಳಿಯ ರೇಷ್ಮೆ ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತ ಗಂಗಾರೆಡ್ಡಿ ಅವರ ತೋಟದಲ್ಲಿ ಮಾಸ್ತಿ ತಾಂತ್ರಿಕ ಸೇವಾ ಕೇಂದ್ರದ ಸಹಯೋಗದಲ್ಲಿ ಚನ್ನಪಟ್ಟಣದ ರೇಷ್ಮೆ ತರಬೇತಿ ಸಂಸ್ಥೆಯಿಂದ ರೇಷ್ಮೆ ಬೆಳೆಗಾರರಿಗೆ ಕ್ಷೇತ್ರ ಮಟ್ಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದ್ವಿತಳಿ ರೇಷ್ಮೆ ಅಭಿವೃದ್ಧಿ ತಾಂತ್ರಿಕತೆಯ ಕಾರ್ಯಗಾರದಲ್ಲಿ ಮಾತನಾಡಿದರು.

    ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಬಹುತೇಕ ಮಂದಿ ರೈತರು ರೇಷ್ಮೆ ಕೃಷಿಯಲ್ಲಿ ಹಳೆಯ ಪದ್ದತಿಯಲ್ಲಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆಧುನಿಕತೆ ಹೆಚ್ಚಾದಂತೆ ರೇಷ್ಮೆ ಕೃಷಿಯಲ್ಲಿ ನೂತನ ತಂತ್ರಜ್ಞಾನದ ಮೂಲಕ ಖರ್ಚು ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಹೆಚ್ಚಿನ ಬೇಡಿಕೆ ಇದೆ. ಸರ್ಕಾರವು ರೇಷ್ಮೆ ಕೃಷಿಯನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜತೆಗೆ ನೂತನ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿಜ್ಞಾನಿಗಳು ನೀಡುವ ಮಾಹಿತಿಯನ್ನು ರೈತರು ಪಡೆದು ಪ್ರಗತಿ ಸಾಧಿಸಬೇಕು ಎಂದರು.

    ರೇಷ್ಮೆ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ನೂಲು ತೆಗೆಯುವವರು ಗುಣಮಟ್ಟ ನೆಪ ಮಾಡಿಕೊಂಡು ಚೀನಾ ರೇಷ್ಮೆಗೆ ಬೇಡಿಕೆಗೆ ಮುಂದಾಗುತ್ತಿದ್ದಾರೆ. ರೈತರು ಗುಣಮಟ್ಟದ ರೇಷ್ಮೆಗೂಡು ಉತ್ಪಾದನೆ ಮಾಡಿದರೆ ಚೀನಾದಿಂದ ರೇಷ್ಮೆ ಆಮದು ನಿಲ್ಲುತ್ತದೆ. ರೇಷ್ಮೆ ಇಲಾಖೆಯಲ್ಲಿ ಹಲವಾರು ಯೋಜನೆಗಳಿದ್ದು, ರೈತರು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಹಿಪ್ಪು ನೇರಳೆ ಬೆಳೆಯಬೇಕು. ವಿದೇಶಿ ಪೈಪೋಟಿಗೆ ಅನುಗುಣವಾಗಿ ರೇಷ್ಮೆ ಕೃಷಿಯಲ್ಲಿ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಿಕೊಂಡು ದ್ವಿತಳಿ ರೇಷ್ಮೆಗೂಡು ಉದ್ಪಾದಿಸಬೇಕು ಎಂದರು.

    ರೇಷ್ಮೆ ಕೃಷಿ ವಿಜ್ಞಾನಿ ಡಾ.ನರೇಂದ್ರ ಬಾಬು ಮಾತನಾಡಿ, ರೇಷ್ಮೆ ಹುಳುಗಳಿಗೆ ಬರುವಂತಹ ಗಂಟು ರೋಗ, ಸುಣ್ಣಕಟ್ಟು ರೋಗ, ಹಾಲು ತೊಂಡೆ ಸಪ್ಪೆರೋಗ, ಹಿಪ್ಪು ನೇರಳೆ ತೋಟಕ್ಕೆ ಬರುವಂತಹ ಎಲೆ ಸುರುಳಿ ಕೀಟ, ಬೇರು ಕೊಳೆ ರೋಗ, ಶಂಕು ಹುಳುವಿನ ಬಾದೆ ಸೇರಿದಂತೆ ಇನ್ನಿತರ ರೋಗಗಳನ್ನು ನಿಯಂತ್ರಿಸುವುದು. ಹಿಪ್ಪು ನೇರಳೆ ತೋಟದ ನಿರ್ವಹಣೆ ಸೇರಿ ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

    ಚನ್ನಪಟ್ಟಣ ರೇಷ್ಮೆ ಸಹಾಯಕ ನಿರ್ದೇಶಕ ಪಶುಪತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಸಿಇಒ ಮಮತಾ, ವಲಯ ಅಧಿಕಾರಿಗಳಾದ ಆನಂದ್​, ಬ್ಯಾಟ್ರಾಯಪ್ಪ, ರಾವೇಂದ್ರ, ರೇಷ್ಮೆಯ ಪ್ರಗತಿಪರ ರೈತ ಗಂಗಾರೆಡ್ಡಿ, ರೇಷ್ಮೆ ಇಲಾಖೆ ಸಿಬ್ಬಂದಿ, ರೇಷ್ಮೆ ಬೆಳೆಯ ಪ್ರಗತಿಪರ ರೈತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts