More

    ಹಾನಗಲ್ಲ ಕಾಂಗ್ರೆಸ್​ನಲ್ಲಿ ಬಣ ರಾಜಕೀಯ

    ಹಾವೇರಿ: ಸರಣಿ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್​ಗೆ ಮುಲಾಮು ಹಚ್ಚಲು ಒಂದೆಡೆ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಶ್ರಮಿಸುತ್ತಿದ್ದಾರೆ. ಆದರೆ, ಜಿಲ್ಲೆಯ ಹಾನಗಲ್ಲ ಕ್ಷೇತ್ರದಲ್ಲಿ ಬಣ ರಾಜಕೀಯ ಚುರುಕುಗೊಂಡಿರುವುದು ಈಗ ಬಹಿರಂಗವಾಗಿದೆ.

    ಹಾನಗಲ್ಲ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿ ಒಮ್ಮೆ ಉಪಸಭಾಪತಿ, ಸಚಿವರೂ ಆಗಿದ್ದ ಮನೋಹರ ತಹಶೀಲ್ದಾರ್ ಅವರು ಹಾನಗಲ್ಲನ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿರುವ 5 ನಿಮಿಷ 46 ಸೆಕೆಂಡ್​ನ ಆಡಿಯೋ ತುಣುಕೊಂದು ಇದೀಗ ವೈರಲ್ ಆಗಿದೆ. ಕ್ಷೇತ್ರದಾದ್ಯಂತ ಭಾರಿ ಚರ್ಚೆ ಗ್ರಾಸವಾಗಿದೆ. ಅಲ್ಲದೆ, ಹಾನಗಲ್ಲ ಕಾಂಗ್ರೆಸ್​ನಲ್ಲಿ ಬಣ ರಾಜಕೀಯ ಜೋರಾಗಿದೆ ಎಂಬ ಸಂದೇಶವನ್ನು ರವಾನಿಸಿದೆ.

    ಆಡಿಯೋದಲ್ಲಿ ಇರುವುದೇನು?: ಮನೋಹರ ತಹಶೀಲ್ದಾರ್ ತಮ್ಮ ಭಾಷಣದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಚುನಾವಣೆಯಲ್ಲಿ ಒಂದು ಅವಕಾಶ ನೀಡುವುದಾಗಿ ಮಾತ್ರ ಪಕ್ಷದ ಮುಖಂಡರೊಂದಿಗೆ ಚರ್ಚೆಯಾಗಿತ್ತು. ಸೋಲಲಿ, ಗೆಲ್ಲಲಿ, ಈ ಚುನಾವಣೆ ಮುಗಿದ ಬಳಿಕ ಹಾನಗಲ್ಲ ಕ್ಷೇತ್ರದಿಂದ ಮಾನೆ ತೆರಳಬೇಕು ಎಂಬ ಮಾತಾಗಿತ್ತು. ಅವರು ಮಾತಿನಂತೆ ನಡೆದುಕೊಳ್ಳದೆ ಇದ್ದರೆ ಹಿಂದೆ ಸ್ವಾತಂತ್ರ್ಯ ಹೋರಾಟಕ್ಕಾಗಿ ನಡೆದ ‘ಬಿಟ್ರಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಚಲೇಜಾವ್ ಚಳವಳಿಯನ್ನು ಹಾನಗಲ್ಲ ಕ್ಷೇತ್ರದ ಕಾರ್ಯಕರ್ತರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಸ್ಥಳೀಯರಿಗೆ ಅವಕಾಶ ಸಿಗಬೇಕು: ಹಾನಗಲ್ಲ ತಾಲೂಕಿನಲ್ಲಿ ಶಾಸಕ ಸ್ಥಾನ ಬಿಟ್ಟರೆ ಸಂಸದ, ವಿಧಾನ ಪರಿಷತ್ ಸದಸ್ಯ ಸೇರಿ ಮತ್ಯಾವುದೇ ಸ್ಥಾನಮಾನ ಸಿಗುವುದು ವಿರಳ. ಈವರೆಗೂ ಅಂತಹ ಸ್ಥಾನಮಾನ ತಾಲೂಕಿನ ಯಾವ ಕಾಂಗ್ರೆಸ್ ಕಾರ್ಯಕರ್ತರಿಗೂ ಸಿಕ್ಕಿಲ್ಲ. ಹೀಗಾಗಿ, ಸ್ವಾಭಿಮಾನಿಗಳಾಗಿ ನಮ್ಮತನವನ್ನು ಉಳಿಸಿಕೊಂಡು ಸ್ಥಳೀಯರೇ ಶಾಸಕರಾಗಬೇಕು. ಇದನ್ನು ಹೈಕಮಾಂಡ್​ಗೂ ತಿಳಿಸಿ, ದಯವಿಟ್ಟು ನಮಗೆ ಹೊರಗಿನಿಂದ ಯಾರನ್ನೋ ತಂದು ಎತ್ತಿ ಹಾಕಬೇಡಿ. ತಾಲೂಕಿನವರಿಗೆ ಅವಕಾಶ ಕೊಡಿ ಎಂದು ಹೇಳಲು ನಾವೆಲ್ಲ ಸಂಘಟಿತರಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

    ಹಿಂದಿನ ಚುನಾವಣೆಯಲ್ಲಿ ಆಕಸ್ಮಿಕವಾಗಿ ಸ್ಪರ್ಧಿಸಿದ ಅಭ್ಯರ್ಥಿಗೂ ನಾನು ಹೇಳಿದ್ದೆ. ‘ನೋಡ್ರಪಾ ನೀವು ನಮ್ಮ ಕ್ಷೇತ್ರಕ್ಕೆ ಬಂದು ಬಿಟ್ಟೀರಿ. ನಾವು ಪಕ್ಷ ನಿಷ್ಠೆಯಿಂದ ಕಾಯಾ, ವಾಚಾ ಮನಸಾ ಕೆಲಸ ಮಾಡಿ ಗೆಲ್ಲಿಸಲು ಪ್ರಯತ್ನಿಸುತ್ತೇವೆ. ನೀವು ಗೆದ್ರೆ 5 ವರ್ಷ ಇಲ್ಲಿ ರಾಜಕಾರಣ ಮಾಡಿ, ನಮ್ಮ ಜನರ ಋಣ ತೀರಿಸಿ. ಆ ಮೇಲೆ ನೀವು ಜಾಗ ಖಾಲಿ ಮಾಡಿ. ಒಂದು ವೇಳೆ ನೀವು ಸೋತರೂ ದಯವಿಟ್ಟು ಮತ್ತೆ ಇತ್ತ ಕಡೆ ತಲೆ ಹಾಕಬೇಡಿ’ ಎಂದು ಮನವಿ ಮಾಡಿದ್ದೇವು. ಆದರೂ ಈಗ ಅವರು ಕಾಂಗ್ರೆಸ್​ನಲ್ಲಿಯ ಕಾರ್ಯಕರ್ತರನ್ನು ತಮ್ಮ ಸ್ವಾರ್ಥಕ್ಕಾಗಿ ಗುಂಪು ಮಾಡಿ ಒಕ್ಕಲೆಬ್ಬಿಸುತ್ತಿದ್ದಾರೆ. ನಾನು ಎಲ್ಲಾ ಆಗೀನಿ. ನನಗೆ ದುಃಖವಿಲ್ಲ. ಆದರೆ, ತಾಲೂಕಿನಲ್ಲಿ ಬೇರೆಯವರ ರಾಜಕಾರಣ ನಡೆಯಬಾರದು ಎಂದಿದ್ದಾರೆ. ಇಲ್ಲಿನ ಯುವ ಪೀಳಿಗೆ ಮುಂದೆ ಬರಬೇಕಿದೆ. ಅದಕ್ಕಾಗಿ ನಾವೆಲ್ಲ ಒಂದಾಗಿ ತಾಲೂಕಿನಲ್ಲಿ ಯಾರಿಗಾದರೂ ಅವಕಾಶ ಸಿಗಲಿ. ಬೇರೆಯವರಿಗೆ ಅವರ ಜಿಲ್ಲೆಗಳಲ್ಲಿ ಅವಕಾಶಗಳಿವೆ. ಅವರು ರಾಷ್ಟ್ರಪತಿಗಳಾಗಲಿ ನಮ್ಮ ಅಭ್ಯಂತರವಿಲ್ಲ. ಆದರೆ, ನಮಗೆ ಸಿಗುವ ಅವಕಾಶ ತಪ್ಪಿಸಬೇಡಿ. ಅವರು ಮಾನವೀಯತೆಯ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಲಿ. ಅದು ಬಿಟ್ಟು ನಾ ಇಲ್ಲೇ ಗೂಟ ಹೊಡಕೊಂಡು ಇರ್ತೀನಿ ಅಂದ್ರೆ, ಗೋ ಬ್ಯಾಕ್ ಚಳವಳಿ ಆರಂಭಿಸಬೇಕಾಗುತ್ತದೆ. ಸ್ವಾಭಿಮಾನಿ ಕಾಂಗ್ರೆಸ್ಸಿಗರಾಗಿ ನಾವು ಬದುಕೋಣ. ಪ್ರತಿ ಗ್ರಾಮದಲ್ಲಿ ಪಕ್ಷ ಸಂಘಟನೆ ಮಾಡೋಣ ಎಂದಿದ್ದಾರೆ.

    ಗ್ರಾಪಂ ಸದಸ್ಯರ ಸನ್ಮಾನಕ್ಕೂ ಗೈರು

    ಹಾನಗಲ್ಲ ತಾಲೂಕಿನಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರ ಸನ್ಮಾನ ಕಾರ್ಯಕ್ರಮಕ್ಕೂ ಮಾಜಿ ಸಚಿವ ಮನೋಹರ ತಹಶೀಲ್ದಾರ್, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಗೈರಾಗಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಹಾನಗಲ್ಲ ತಾಲೂಕು ಕಾಂಗ್ರೆಸ್​ನಲ್ಲಿ ಬಣ ರಾಜಕೀಯ ಮತ್ತಷ್ಟು ಚುರುಕುಗೊಂಡಿರುವುದು ಬಹಿರಂಗವಾಗಿದೆ.

    ಪ್ರತ್ಯೇಕ ಗುಂಪು…

    ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಭಿನ್ನಮತ ವ್ಯಕ್ತವಾಗಿತ್ತು. ಪಕ್ಷದ ಅಭ್ಯರ್ಥಿಯನ್ನಾಗಿ ಶ್ರೀನಿವಾಸ ಮಾನೆ ಅವರ ಹೆಸರನ್ನು ಘೊಷಿಸುತ್ತಿದ್ದಂತೆ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಹಾಗೂ ಪ್ರಕಾಶಗೌಡ ಪಾಟೀಲ ಅವರ ಬೆಂಬಲಿಗರ ಗುಂಪುಗಳು ಪ್ರತ್ಯೇಕವಾಗಿ ಪ್ರಚಾರ ಆರಂಭಿಸಿದ್ದವು. ಮಾನೆ ಅವರೊಂದಿಗೆ ಪ್ರಚಾರಕ್ಕೆ ತೆರಳದೆ ಪಕ್ಷದ ಅಭ್ಯರ್ಥಿಯ ಪರ ತಮ್ಮಷ್ಟಕ್ಕೆ ತಾವು ಪ್ರಚಾರ ನಡೆಸಿದ್ದರು. ಅದರ ನಂತರದಲ್ಲೂ ಈ ಮುಖಂಡರು ಒಂದಾಗಲಿಲ್ಲ. ಪ್ರತ್ಯೇಕವಾಗಿಯೇ ತಮ್ಮ ರಾಜಕೀಯ ವೇದಿಕೆಗಳನ್ನು ಸೃಷ್ಟಿಸಿಕೊಂಡು ಪ್ರತ್ಯೇಕ ತಂಡಗಳೊಂದಿಗೆ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಬಹಿರಂಗವಾಗಿ ಅಪಸ್ವರ ಕೇಳಿಬಂದಿರಲಿಲ್ಲ. ಇದೀಗ ಅಡಿಯೋ ವೈರಲ್ ಆಗಿ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts