More

    ಗಾಳಿ, ಮಳೆ ಅಬ್ಬರಕ್ಕೆ ನೆಲ ಕಚ್ಚಿದ ಅಡಕೆ, ಬಾಳೆ ಮರ

    ಎನ್.ಆರ್.ಪುರ: ತಾಲೂಕಿನ ಹಲವೆಡೆ ಗುರುವಾರ ಸಂಜೆ 6.30 ಗಂಟೆಯಿಂದ 7.30 ಗಂಟೆಯವರೆಗೆ ಭಾರಿ ಗಾಳಿ, ಗುಡುಗು, ಸಿಡಿಲು ಅಬ್ಬರದಿಂದ ಮಳೆಯಾಯಿತು. ಗಾಳಿ ಅಬ್ಬರಕ್ಕೆ ಅಡಕೆ ಮರ, ಬಾಳೆ ಮರಗಳು ಬಿದ್ದಿವೆ. ರಸ್ತೆಗೆ ಬಿದ್ದ ಮರದ ಕೊಂಬೆ ತಾಗಿ ಬೈಕ್ ಸವಾರನಿಗೆ ಗಾಯವಾಗಿದೆ. ಮರಗಳು ಬಿದ್ದು ಶಾಲೆಯ ಕಾಂಪೌಂಡ್, ಮನೆಯ ಛಾವಣಿಗಳಿಗೆ ಹಾನಿಯಾಗಿದೆ.

    ಬಿ.ಎಚ್.ಕೈಮರ-ಕೋಗಳ್ಳಿ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಾಳೂರು ದಿಣ್ಣೆಯ ಚಿಟ್ಟೋಡಿ ಈಶ್ವರನಾಯ್ಕ ಅವರು ರಸ್ತೆಗೆ ಬಿದ್ದಿದ್ದ ಮರದ ಗೆಲ್ಲು ಕಾಣದೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದಾರೆ. ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದು ಶಿವಮೊಗ್ಗದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿ.ಎಚ್.ಕೈಮರದ ಲಿಂಗಣ್ಣ ಅವರ ವೆಲ್ಡಿಂಗ್ ಶಾಪ್ ಮೇಲೆ ಮರದ ಕೊಂಬೆ ಬಿದ್ದು ಛಾವಣಿಯ ಶೀಟುಗಳು ಪುಡಿಯಾಗಿವೆ. ಮಳೆನೀರು ನುಗ್ಗಿ ವೆಲ್ಡಿಂಗ್ ಮಷಿನ್ ಮಷಿನ್ ಹಾಳಾಗಿದೆ. ಪಕ್ಕದ ವಿದ್ಯುತ್ ಕಂಬ ತುಂಡಾಗಿದೆ. ಬಿ.ಎಚ್.ಕೈಮರದ ಸರ್ಕಾರಿ ಶಾಲೆ ಕಾಂಪೌಂಡ್ ಮೇಲೆ ದೊಡ್ಡ ಮರ ಉರುಳಿ ಕಾಂಪೌಂಡ್ ಪುಡಿಯಾಗಿದೆ. ಪಕ್ಕದ ಶೌಚಗೃಹದ ಶೀಟುಗಳು ಪುಡಿಯಾಗಿವೆ.
    ಹೊನ್ನೇಕೊಡಿಗೆ ಗ್ರಾಪಂನ ವಸತಿಗೃಹದ ಮೇಲೆ ಮರ ಬಿದ್ದು ಛಾವಣಿ ಜಖಂಗೊಂಡಿದೆ. ಯಡಗೆರೆಯ ಕಬ್ಬಿನತೋಟ ಶ್ರೀನಿವಾಸ ಎಂಬುವರ ಮನೆಯ ಹಿಂಭಾಗದ ಹತ್ತಾರು ಶೀಟುಗಳು ಗಾಳಿಗೆ ಹಾರಿ ಬಿದ್ದು ಪುಡಿಯಾಗಿವೆ.
    ಬಿ.ಎಚ್.ಕೈಮರ ಸುತ್ತಮುತ್ತ ರೈತರು ಬೆಳೆದಿದ್ದ ನೇಂದ್ರ ಬಾಳೆ ಮರಗಳು ಕೊನೆ ಸಮೇತ ಉರುಳಿ ಬಿದ್ದಿವೆ. ಗುಡ್ಡೇಹಳ್ಳದಲ್ಲಿ ಸಿಂಸೆಯ ಜೋಸೆಫ್ ಎಂಬುವರು ಬೆಳೆದಿದ್ದ 600 ನೇಂದ್ರ ಬಾಳೆ ಮರಗಳು ಕೊನೆ ಸಮೇತ ಬಿದ್ದಿವೆ. ಕೈಮರ ಶುಂಠಿ ದೇವಸಿ ಎಂಬುವರು ಬೆಳೆದಿದ್ದ 500 ನೇಂದ್ರ ಬಾಳೆ ಮರಗಳು, 15 ಅಡಕೆ ಮರಗಳು ನೆಲಕಚ್ಚಿವೆ. ವಗಡೆಯ ಬಿನು ಎಂಬವರು ಬೆಳೆದಿದ್ದ 500 ರಿಂದ 600 ನೇಂದ್ರ ಬಾಳೆ ಮರಗಳು ಉರುಳಿವೆ. ಶುಕ್ರವಾರವೂ ಗಾಳಿ ಅಬ್ಬರದೊಂದಿಗೆ ಮಳೆಯಾಯಿತು.
    ಭಾರಿ ಗಾಳಿಗೆ ಅಡಕೆ ಮರ, ರಬ್ಬರ್ ಮರಗಳು ಬುಡಮೇಲಾಗಿವೆ. ಈಚಿಕೆರೆ, ಕೈಮರ, ಕೋಗಳ್ಳಿ, ಬಿಳಾಲುಕೊಪ್ಪ, ವಗಡೆ ಮುಂತಾದ ಕಡೆ ಅಡಕೆ, ರಬ್ಬರ್ ಮರಗಳು ಬಿದ್ದಿವೆ. ಬಿಳಾಲುಮನೆ ದೀಪಕ್, ಮಂಜುನಾಥ್, ಕೋಗಳ್ಳಿ ರಂಗಪ್ಪ ಗೌಡ, ವಾಸಪ್ಪ ಗೌಡ, ಮಹೇಶ್, ಪೌಲೋಸ್ ಇತರ ರೈತರ ಅಡಕೆ ಮರ, ರಬ್ಬರ್ ಮರಗಳು ಗಾಳಿಗೆ ಉರುಳಿ ಬಿದ್ದಿವೆ. ಬಿ.ಎಚ್.ಕೈಮರದಿಂದ -ಕುದುರೆಗುಂಡಿ ರಸ್ತೆಯ ಗುಡ್ಡೇಹಳ್ಳದವರೆಗೆ, ಕೈಮರದಿಂದ ಬಾಳೆಹೊನ್ನೂರು ರಸ್ತೆ, ಗುಬ್ಬಿಗಾ ರಸ್ತೆ ತುಂಬ ಕಾಡು ಮರಗಳ ಕೊಂಬೆಗಳು ಬಿದ್ದು ಕೆಲ ಸಮಯ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ತಕ್ಷಣ ಕೊಂಬೆಗಳನ್ನು ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಲ್ಲಲ್ಲಿ ವಿದ್ಯುತ್ ತಂತಿ ಮೇಲೆ ಮರಗಳು ಬಿದ್ದು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಚಾರ ಸ್ಥಗಿತಗೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts