More

    ಸಾರ್ವಜನಿಕರೇ ಇಲ್ಲದ ಕುಂದುಕೊರತೆ ಸಭೆ!

    ಶಿವಮೊಗ್ಗ: ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳ ಬಳಿ ದೂರು ದುಮ್ಮಾನ ಹೇಳಿಕೊಳ್ಳಲು ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯ. ಅದರಲ್ಲೂ ಪೊಲೀಸರು, ಲೋಕಾಯುಕ್ತರು ಸೇರಿದಂತೆ ಎಲ್ಲ ಇಲಾಖೆ ಸಿಬ್ಬಂದಿ ಒಂದೆಡೆ ಸಿಗುತ್ತಾರೆಂದರೆ ಸರದಿ ಇನ್ನಷ್ಟು ದೊಡ್ಡದಿರುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾದ ಸಭೆಯೊಂದು ನಡೆದಿರುವುದು ವಿಶೇಷ.

    ತಾಸುಗಟ್ಟಲೆ ಕಾದರೂ ದೂರು ಹೇಳಿಕೊಳ್ಳಲು ಯಾರೂ ಬರಲಿಲ್ಲ. ಇದರಿಂದ ಬೇಸತ್ತ ಅಧಿಕಾರಿಗಳು ತಮಗೆ ಮೊಬೈಲ್ ಮೂಲಕ ಬಂದಿರುವ ದೂರುಗಳ ಬಗ್ಗೆ ವಿವಿಧ ಇಲಾಖೆ ಸಿಬ್ಬಂದಿಯೊಂದಿಗೆ ಚರ್ಚಿಸಿದರು. ಈ ದೃಶ್ಯ ಕಂಡು ಬಂದಿದ್ದು ಲೋಕಾಯುಕ್ತ ಪೊಲೀಸರ ಕುಂದುಕೊರತೆ ಸಭೆಯಲ್ಲಿ.
    ಶಿವಮೊಗ್ಗ ತಾಪಂ ಸಭಾಂಗಣದಲ್ಲಿ ಲೋಕಾಯುಕ್ತ ಪೊಲೀಸರಿಂದ ತಾಲೂಕು ಮಟ್ಟದ ಅಹವಾಲು ಸ್ವೀಕಾರ ಸಭೆ ಏರ್ಪಡಿಸಲಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಲೋಕಾಯುಕ್ತ ಅಧಿಕಾರಿಗಳು ಬಂದಿದ್ದರೂ ದೂರು ಸಲ್ಲಿಸಲು ಸಾರ್ವಜನಿಕರ ಸುಳಿವೇ ಇರಲಿಲ್ಲ.
    ಇದನ್ನು ಗಮನಿಸಿದ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ ನಾಯ್ಕ, ಇದೇನ್ರೀ ಒಳ್ಳೆಯ ಆಸ್ಪತ್ರೆ ನಿರ್ಮಿಸಿ, ತಜ್ಞ ವೈದ್ಯರನ್ನೂ ನೇಮಿಸಿಕೊಂಡರೆ ರೋಗಿಗಳೇ ಇಲ್ಲದ ಆಸ್ಪತ್ರೆಯಂತಾಗಿದೆ ನಮ್ಮ ಅಹವಾಲು ಸ್ವೀಕಾರ ಸಭೆ ಎಂದು ಗೊಣಗಿದರು. ಇದುವರೆಗೂ ಶಿವಮೊಗ್ಗ ತಾಲೂಕಿನಲ್ಲಿ ಒಂದು ಸಭೆಯನ್ನೂ ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಚಾರದ ಕೊರತೆಯೂ ಕಾರಣ ಎಂದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಸಹನೆ ವ್ಯಕ್ತಪಡಿಸಿದರು.
    ಸಭೆಯಲ್ಲಿ ದೂರು ಸಲ್ಲಿಸಲು ಯಾರೂ ಬಂದಿಲ್ಲ ಎಂದ ಮಾತ್ರಕ್ಕೆ ಶಿವಮೊಗ್ಗ ತಾಲೂಕಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅರ್ಥೈಸಿಕೊಳ್ಳುವುದು ಬೇಡ. ಬಹಳಷ್ಟು ನ್ಯೂನತೆಗಳಿವೆ. ಅದನ್ನು ಸಿಬ್ಬಂದಿಯೇ ಗುರುತಿಸಿ ಸರಿಪಡಿಸಿಕೊಳ್ಳಬೇಕು. ನಾವು ದಾಳಿ ನಡೆಸಿ ನೀವು ಸಿಕ್ಕಿ ಬಿದ್ದರೆ ಜೀವನ ಪರ್ಯಂತ ಕಪ್ಪುಚುಕ್ಕೆ ನಿಮ್ಮ ಪಾಲಿಗೆ ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಪರೋಕ್ಷ ಎಚ್ಚರಿಕೆ ರವಾನಿಸಿದರು.
    ಸಭೆಯಲ್ಲಿ ತಹಸೀಲ್ದಾರ್ ಎನ್.ಜೆ.ನಾಗರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿ ಅವಿನಾಶ್, ಲೋಕಾಯುಕ್ತ ಇನ್ಸ್‌ಪೆಕ್ಟರ್ ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts