More

    ಜಿಲ್ಲಾ ಕಾರಾಗೃಹ ಹಸಿರುಮಯ

    ಪುರುಷೋತ್ತಮ ಪೆರ್ಲ ಕಾಸರಗೋಡು

    ಕೈದಿಗಳನ್ನು ಕೂಡಿ ಹಾಕುವ ತಾಣವಾದ ಹೊಸದುರ್ಗ ಜಿಲ್ಲಾ ಕಾರಾಗೃಹ ಇಂದು ಸಾವಯವ ಕೃಷಿ ಮೂಲಕ ಗಮನಸೆಳೆಯುತ್ತಿದೆ. ಇಲ್ಲಿ ಕೃಷಿ ಚಟುವಟಿಕೆ ಜತೆಗೆ ಪಾಠವೂ ನಡೆಯುತ್ತಿದೆ. ಪ್ರಾಣಿ- ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರುಣಿಸಲಾಗುತ್ತಿದೆ. ಕಾರಾಗೃಹದ ಖಾಲಿ ಜಾಗ ಇಂದು ತರಕಾರಿ ಕೃಷಿಯಿಂದ ಹಸಿರುಮಯವಾಗಿದೆ.

    ಜೈಲು ಅಧಿಕಾರಿಗಳ ಆಸಕ್ತಿ, ಕೃಷಿ ಇಲಾಖೆ ಅಧಿಕಾರಿಗಳ ಬೆಂಬಲ ಜತೆಗೆ ಕಾರಾಗೃಹದ ಕೈದಿಗಳ ಶ್ರಮ ಇಲ್ಲಿನ ಕೃಷಿ ಕಾರ್ಯಗಳಲ್ಲಿ ಅಡಕವಾಗಿವೆ. ಗೆಣಸು, ಅಲಸಂಡೆ, ಬದನೆ, ಜೋಳ, ಸೌತೆಕಾಯಿ, ಬೆಂಡೆ, ತೊಂಡೆ, ಬಾಳೆ ಸೇರಿದಂತೆ ನಾನಾ ವಿಧದ ತರಕಾರಿ ಬೆಳೆ ಇಲ್ಲಿ ಬೆಳೆಯಲಾಗುತ್ತಿದೆ. ಸಂಪೂರ್ಣ ಜೈವ ಪದ್ಧತಿಯಲ್ಲಿ ಇಲ್ಲಿ ಕೃಷಿ ನಡೆಸಲಾಗುತ್ತಿದೆ. ಸಾವಯವ ಗೊಬ್ಬರವನ್ನು ಜೈಲಲ್ಲೇ ತಯಾರಿಸಲಾಗುತ್ತಿದೆ. ಇದಕ್ಕಾಗಿ ಉಳಿದ ಆಹಾರ ಪದಾರ್ಥ, ತರಗೆಲೆ ಮಿಶ್ರಣದೊಂದಿಗೆ ಗೊಬ್ಬರ ತಯಾರಿಸಲಾಗುತ್ತಿದೆ. ಜತೆಗೆ ತೆಂಗಿನ ನಾರಿನ ಉತ್ಪನ್ನ ಬಳಸಿ ಜೈವಗೊಬ್ಬರ ತಯಾರಿಸಲಾಗುತ್ತಿದೆ.

    ತರಕಾರಿ ಕೃಷಿ ಜತೆಗೆ ‘ಮನಸು ಹಸಿರುಮಯ’ ಎಂಬ ವಿಶೇಷ ಕಾರ್ಯಕ್ರಮವನ್ನೂ ಜೈಲಲ್ಲಿ ಆಯೋಜಿಸಲಾಗುತ್ತಿದೆ. ಜೈಲಿನಿಂದ ಶಿಕ್ಷೆ ಕಳೆದು ಹೊರ ಹೋಗುವ ಕೈದಿಗಳಿಗೆ ಸಸಿಯನ್ನು ವಿತರಿಸುವ ಯೋಜನೆ ಇದಾಗಿದೆ. ಜೈಲು ಶಿಕ್ಷೆ ಕಾಲಾವಧಿ ಕಳೆದು ತೆರಳುವ ಕೈದಿಗಳು, ಈ ಸಸಿಯನ್ನು ತಮ್ಮ ಹಿತ್ತಿಲಲ್ಲಿ ನೆಡುತ್ತಾರೆ. ಜತೆಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವ ಯೋಜನೆಯನ್ನೂ ಜೈಲಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

    ಕೊಯ್ಲು ಉತ್ಸವ: ಜೈಲು ಆವರಣದಲ್ಲಿ ನಡೆಸಲಾದ ವಿವಿಧ ತರಕಾರಿಗಳ ಕೊಯ್ಲು ಆರಂಭೋತ್ಸವ ಇತ್ತೀಚೆಗೆ ನಡೆಯಿತು. ಹೊಸದುರ್ಗ ಕೃಷಿ ಅಧಿಕಾರಿ ಶ್ರೀಜಾ ಬೆಳೆಗಳ ಕೊಯ್ಲು ಆರಂಭಕ್ಕೆ ಚಾಲನೆ ನೀಡಿದರು. ಜೈಲು ಉಪಅಧೀಕ್ಷಕ ಶ್ರೀನಿವಾಸನ್, ಡಿಪಿಒ ಗೋಪಾಲಕೃಷ್ಣನ್, ಪುಷ್ಪರಾಜ್, ಜಿಮ್ಮಿ ಜಾನ್ಸನ್ ಮುಂತಾದವರು ಉಪಸ್ಥಿತರಿದ್ದರು.

    ಕೋವಿಡ್ ಹಿನ್ನೆಲೆ ಕೆಲವೇ ಕೈದಿಗಳನ್ನು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಉಳಿದಂತೆ ಸಿಬ್ಬಂದಿ ಕೈಜೋಡಿಸುತ್ತಿದ್ದಾರೆ. ಕೃಷಿ ಇಲಾಖೆ ಬೆಂಬಲ ಹಾಗೂ ಸಿಬ್ಬಂದಿ, ಕೈದಿಗಳ ಶ್ರಮದಿಂದ ಜೈಲಲ್ಲಿ ಅಗತ್ಯ ತರಕಾರಿ ಬೆಳೆಯಲಾಗುತ್ತಿದೆ.
    ಎಂ.ವೇಣು, ಜೈಲು ಅಧೀಕ್ಷಕ, ಜಿಲ್ಲಾ ಕಾರಾಗೃಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts