More

    ಗ್ರಾಮೀಣ ಜನ ಶಿಸ್ತಿನ ಸಿಪಾಯಿಗಳು: ಸಚಿವ ಕೆ.ಎಸ್. ಈಶ್ವರಪ್ಪ ಬಣ್ಣನೆ

    ರಾಮನಗರ: ಗ್ರಾಮೀಣ ಜನ ಶಿಸ್ತಿನ ಸಿಪಾಯಿಗಳು ಎನ್ನುವುದಕ್ಕೆ ಕರೊನಾ ಸಂದರ್ಭದಲ್ಲಿ ಸೋಂಕು ಅಂಟಿಸಿಕೊಳ್ಳದೆ ಇರುವುದೇ ಸಾಕ್ಷಿ ಎಂದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

    ಗ್ರಾಪಂಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಅಂಗವಾಗಿ ಕೇಂದ್ರ ಸರ್ಕಾರ ಸ್ವಚ್ಛತಾ ಮಿಷನ್ ಅಡಿ ನೀಡಲಾಗಿರುವ 20 ಲಕ್ಷ ರೂ. ಅನುದಾನದಲ್ಲಿ ತಲಾ 3.40 ಲಕ್ಷ ರೂ. ವೆಚ್ಚದ 60 ಆಟೋಗಳನ್ನು 60 ಗ್ರಾಪಂಗಳಿಗೆ ಹಸ್ತಾಂತರಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.

    ಇಡೀ ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಗ್ರಾಪಂಗಳು ಕೇಂದ್ರ ಸ್ವಚ್ಛತಾ ಮಿಷನ್ ಅಡಿ ನೀಡಿರುವ ತಲಾ 20 ಲಕ್ಷ ರೂ.ಗಳ ಅನುದಾನ ಬಳಕೆ ಮಾಡಿಕೊಂಡು ಗ್ರಾಮೀಣ ಭಾಗವನ್ನು ಸ್ವಚ್ಛತೆ ಕಡೆಗೆ ಕೊಂಡೊಯ್ಯವ ಕೆಲಸ ಮಾಡುತ್ತಿವೆ ಎಂದರು.

    ಕರೊನಾ ಓಡಿಸುವಲ್ಲಿ ಕರ್ನಾಟಕ ಯಶಸ್ವಿಯಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದು ತಂದೆ-ತಾಯಿಗಳು ಮಾಡಿದ ಪುಣ್ಯದಿಂದ. ಇಲಾಖೆಯಲ್ಲಿ ಅಧಿಕಾರಿಗಳೂ ಸಹ ಪುಣ್ಯವಂತರು. ದೇವರ ಪೂಜೆ ಮಾಡಿದಷ್ಟೇ ಪುಣ್ಯ ಈ ಇಲಾಖೆ ಸೇವೆ ಮಾಡುವುದರಿಂದ ಬರುತ್ತದೆ ಎಂದರು.

    60:40 ಅನುಪಾತವನ್ನು ಸರಿದೂಗಿಸದ ಹಿನ್ನೆಲೆಯಲ್ಲಿ ನರೇಗಾದ ಸಾಮಗ್ರಿ ವೆಚ್ಚದ ಹಣ ಬಿಡುಗಡೆಯಾಗಿಲ್ಲ. ಇದನ್ನು ನಾನು ಯಾವ ರೀತಿ ಕೇಂದ್ರದ ಬಳಿ ಹೇಳಲಿ. ಈ ರೀತಿಯ ಗೊಂದಲವಾಗದಂತೆ ಕೆಲಸ ಮಾಡಿಸಿ ಎಂದರು. ಅಲ್ಲದೆ, ನಮ್ಮ ರಾಜ್ಯದ 6021 ಗ್ರಾಪಂಗಳಲ್ಲಿ ಸುಮಾರು 5900 ಗ್ರಾಪಂಗಳಲ್ಲಿ ನರೇಗಾ ಕೆಲಸ ಆರಂಭಗೊಂಡಿವೆ. ಈಗಾಗಲೇ ಒಂದೇ ದಿನ 9.30 ಲಕ್ಷ ಮಾನವ ದಿನಗಳ ಕೆಲಸ ಆಗಿದೆ. ಇದು ನರೇಗಾ ಸಂಕಷ್ಟದಲ್ಲಿ ಗ್ರಾಮೀಣ ಭಾಗದ ಜನರ ಕೈ ಹಿಡಿದಿರುವುಕ್ಕೆ ಸಾಕ್ಷಿ ಎಂದರು.

    ಸರ್ಕಾರಿ ನೌಕರರು, ಚುನಾಯಿತ ಪ್ರತಿನಿಧಿಗಳು, ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ, ಇನ್ನುಳಿದ ಎಲ್ಲರಿಗೂ ಜಾಬ್ ಕಾರ್ಡ್ ನೀಡಲಾಗುತ್ತದೆ ಎಂದು ಹೇಳಿದರು.

    ಕುಡಿಯುವ ನೀರು ಹಾಗು ನೈರ್ಮಲ್ಯಕ್ಕಾಗಿಯೇ ರಾಜ್ಯಕ್ಕೆ 2,700 ಕೋಟಿ ಹಣ ಬರುತ್ತಿದೆ. ಪ್ರತಿ ಗ್ರಾಪಂಗೆ ಕನಿಷ್ಟ 1 ಕೋಟಿ ಹಣ ಬರುತ್ತಿದೆ. ಹೀಗಾಗಿ ಜಿಪಂ ಸದಸ್ಯರು ಮುಂದಿನ ದಿನಗಳಲ್ಲಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದರೂ ಅಚ್ಚರಿ ಇಲ್ಲ ಎಂದು ಕಾಲೆಳೆದರು.

    ಶಾಸಕ ಎ.ಮಂಜುನಾಥ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ ಮಾತನಾಡಿ, ರೇಷ್ಮೆ, ಹೈನುಗಾರಿಕೆ ಮತ್ತು ನರೇಗಾದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಅವುಗಳನ್ನು ಪರಿಹರಿಸುವಂತೆ ಮನವಿ ಮಾಡಿದರು. ಮಾಗಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಧ್ವಾನಗೊಂಡಿದೆ. ಹೀಗಾಗಿ ನಮ್ಮ ಇಷ್ಟೂ ಬೇಡಿಕೆಗಳನ್ನು ಈಡೇರಿಸಬೇಕು. ಜಲಜೀವನ್ ಮಿಷನ್ ಅನ್ನು ಜಿಲ್ಲೆಯ ಮೂಲಕ ಪ್ರಾಯೋಗಿಕವಾಗಿ ಜಾರಿಗೆ ತರಬೇಕು. ಮಳೆ ಗಾಳಿಯಿಂದಾಗಿ ನೂರಾರು ಎಕರೆ ಬಾಳೆ ನಾಶಗೊಂಡಿದೆ. ಇದರೊಂದಿಗೆ ಕುಸಿತಗೊಂಡಿರುವ ರೇಷ್ಮೆಗೆ ಬೆಂಬಲ ಬೆಲೆ. ರೀಲರ್ಸ್‌ಗಳಿಗೆ ಶಕ್ತಿ ನೀಡುವ ಕೆಲಸ ನಡೆಯಬೇಕು ಹಾಗೂ ನರೇಗಾ ಅಡಿ ಅರಣ್ಯದಂಚಿನ ಗ್ರಾಮಗಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
    ಕಸ ವಿಲೇವಾರಿಗೆ ಸ್ಥಳ ಗುರುತಿಸಿ: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಸಿಇಒ ಇಕ್ರಮ್, ಜಿಲ್ಲೆಯಲ್ಲಿ 60 ಗ್ರಾಪಂಗಳಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಗ್ರಾಪಂಗಳಲ್ಲಿಯೂ ಇದಕ್ಕೆ ಕ್ರಮ ಕೈಗೊಳ್ಳಲಾಗುವುದು. ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿಗಳು ಜಾಗ ನೀಡಿದ್ದು, ಬಾಕಿ ಇರುವ ಕಡೆಗಳಲ್ಲೂ ಸ್ಥಳವನ್ನು ಗುರ್ತಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ಮೂಲಕ ರಾಮನಗರ ಜಿಲ್ಲೆಯನ್ನು ಸ್ವಚ್ಛತಾ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

    ಲಾಕ್‌ಡೌನ್ ನಿಯಮ ಉಲ್ಲಂಘನೆ: ಶುಕ್ರವಾರ ರಾತ್ರಿ 7.10 ಗಂಟೆವರೆಗೂ ಸಭೆ ನಡೆಸುವ ಮೂಲಕ ಡಿಸಿಎಂ ಮತ್ತು ಸಚಿವರೇ ಲಾಕ್‌ಡೌನ್ ನಿಯಮವನ್ನು ಉಲ್ಲಂಸಿದರು. ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಸೇರಿ ನೂರಾರು ಮಂದಿ ಇದ್ದರು. ಇವರೆಲ್ಲ ಸಭೆ ಮುಗಿಸಿ ಮನೆಗೆ ಸೇರುವಷ್ಟರಲ್ಲಿ ಕನಿಷ್ಠ 9 ಗಂಟೆಯಾದರೂ ಆಗಿದೆ.

    ಅಭಿವೃದ್ಧಿ ಶಾಶ್ವತವಾಗಿ ಉಳಿಯಬೇಕು, ಕೇವಲ ಮಾತಿನಲ್ಲಿ ಇರದೆ ಎಲ್ಲರಿಗೂ ಅದು ತಲುಪುವಂತೆ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾ, ಇಡೀ ರಾಜ್ಯದಲ್ಲಿಯೇ ರಾಮನಗರವನ್ನು ನಂ.1 ಜಿಲ್ಲೆಯಾಗಿಸುವಂತೆ ಹೆಜ್ಜೆ ಇಟ್ಟಿದ್ದೇವೆ. ಅದನ್ನು ಮಾಡಿಯೇ ತೀರುತ್ತೇವೆ.
    >ಡಾ. ಸಿ.ಎನ್. ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts