More

    ಗ್ರಾಪಂ ತೆರಿಗೆ ಸಂಗ್ರಹ ಹಿನ್ನಡೆ

    | ಅವಿನ್ ಶೆಟ್ಟಿ ಉಡುಪಿ

    ತೆರಿಗೆ ವಸೂಲಾತಿಗೆ ಸಂಬಂಧಿಸಿ ರಾಜ್ಯದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯಿತಿಗಳು ಹಿನ್ನಡೆ ಸಾಧಿಸುತ್ತಿವೆ.
    ಆರ್ಥಿಕ ವರ್ಷಾಂತ್ಯಕ್ಕೆ ತಿಂಗಳು ಬಾಕಿಯಿದ್ದರೂ ಉಡುಪಿ ಜಿಲ್ಲೆಯಲ್ಲಿ ತೆರಿಗೆ ಸಂಗ್ರಹ ಶೇ.50ರಷ್ಟು ಪ್ರಗತಿಯನ್ನೂ ಸಾಧಿಸಿಲ್ಲ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳು 2020-21ನೇ ಸಾಲಿನ ಆರ್ಥಿಕ ವರ್ಷ ತೆರಿಗೆ ವಸೂಲಾತಿಗೆ ಸಂಬಂಧಿಸಿ ಮಾಡಿರುವ ಸಾಧನೆ ಕಳಪೆ.
    ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಪಿಡಿಒ ಮತ್ತು ಬಿಲ್ ಕಲೆಕ್ಟರ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಪಂಚಾಯಿತಿ ತಂತ್ರಾಂಶ ಮಾಹಿತಿ ಪ್ರಕಾರ 2020-21ನೇ ಸಾಲಿನ ಆರ್ಥಿಕ ಸಾಲಿನಲ್ಲಿ ಉಡುಪಿ ಜಿಲ್ಲೆಯ 158 ಗ್ರಾಮ ಪಂಚಾಯಿತಿಗಳಲ್ಲಿ 29.43 ಕೋಟಿ ರೂ., ತೆರಿಗೆ ಸಂಗ್ರಹ ಮಾಡಬೇಕಿದ್ದು, ಇಲ್ಲಿವರೆಗೆ 14.92 ಕೋಟಿ ರೂ ಮಾತ್ರ ಸಂಗ್ರಹವಾಗಿದೆ. ಅಂದರೆ, ಶೇ.50 ಮಾತ್ರ ಪ್ರಗತಿ. ಬಾಕಿ 14.50 ಕೋಟಿ ರೂ.ವಸೂಲಿ ಬಾಕಿಯಿದೆ. ಉಡುಪಿ ಜಿಲ್ಲೆಯ 19 ಗ್ರಾಪಂಗಳು ಶೇ.70ರಷ್ಟು ತೆರಿಗೆ ಸಂಗ್ರಹಿಸಿದ್ದರೆ, ಕೋಡಿ ಮತ್ತು ಬಿಲ್ಲಾಡಿ ಗ್ರಾಪಂಗಳು ಶೇ.90ರಷ್ಟು ತೆರಿಗೆ ಸಂಗ್ರಹಿಸಿವೆ.

    ದಕ್ಷಿಣ ಕನ್ನಡ ಜಿಲ್ಲೆ ಶೇ.60 ಪ್ರಗತಿ: ದಕ್ಷಿಣ ಕನ್ನಡ ಜಿಲ್ಲೆ ತೆರಿಗೆ ವಸೂಲಾತಿಯಲ್ಲಿ ಶೇ.60 ಪ್ರಗತಿ ಸಾಧಿಸಿದೆ. ಪಂಚತಂತ್ರ ತಂತ್ರಾಂಶ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ 230 ಗ್ರಾಮ ಪಂಚಾಯಿತಿಗಳಲ್ಲಿ ನಿರೀಕ್ಷಿತ ತೆರಿಗೆ ಸಂಗ್ರಹ ಮೊತ್ತ 33.15 ಕೋಟಿ ರೂ. ಇದರಲ್ಲಿ 20.23 ಕೋಟಿ ರೂ, ಸಂಗ್ರಹವಾಗಿದೆ. ಶೇ.60 ಪ್ರಗತಿ. 12.92 ಕೋಟಿ ರೂ.ವಸೂಲಿ ಬಾಕಿ. ದಕ್ಷಿಣ ಕನ್ನಡ ಜಿಲ್ಲೆ 27 ಗ್ರಾಪಂಗಳು ಶೇ.70ರಷ್ಟು ಗುರಿ ಸಾಧಿಸಿವೆ. ಸೋಮೇಶ್ವರ, ಉಪ್ಪಿನಂಗಡಿ ಗ್ರಾಪಂ ಶೇ.90 ತೆರಿಗೆ ಸಂಗ್ರಹಿಸಿ ಉತ್ತಮ ಸಾಧನೆ ತೋರಿದೆ.

    ಕರೊನಾ ಕಾರಣ ನೀಡುವ ಜನರು: ತೆರಿಗೆ ವಸೂಲಾತಿಗೆ ತೆರಳುವ ಗ್ರಾಪಂ ಸಿಬ್ಬಂದಿಗೆ ಜನರೇ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಅಭಿಪ್ರಾಯವಿದೆ. ಕರೊನಾ ಲಾಕ್‌ಡೌನ್ ಕಾರಣದಿಂದ ಉದ್ಯಮ, ವ್ಯವಹಾರ, ಉದ್ಯೋಗ, ಜೀವನಮಟ್ಟ ಸ್ಥಿತಿ ಸುಧಾರಿಸಿಲ್ಲ. ಇದರಿಂದಾಗಿ ತೆರಿಗೆ ಪಾವತಿ ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಗ್ರಾಪಂ ಚುನಾವಣೆ ಸಮಯದಲ್ಲಿ ಒತ್ತಾಯದಿಂದ ತೆರಿಗೆ ವಸೂಲಿ ಮಾಡದಂತೆ ಸೂಚನೆ ಇದ್ದಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹ ಸಾಧ್ಯವಾಗಿಲ್ಲ. ಕೆಲವು ಕಡೆ ಬಿಲ್ ಕಲೆಕ್ಟರ್ ಹುದ್ದೆಗಳು ಖಾಲಿ ಇದೆ. ಪರಿಣಾಮ ಗ್ರಾಪಂ ಖರ್ಚು, ದೈನಂದಿನ ಕಾರ್ಯಚಟುವಟಿಕೆ ಸೇರಿದಂತೆ ಸಿಬ್ಬಂದಿ ವೇತನ ಪಾವತಿಗೂ ಸಮಸ್ಯೆಯಾಗುತ್ತಿದೆ. ಗ್ರಾಪಂ ಆಡಳಿತ ಸುಸೂತ್ರವಾಗಿ ಸಾಗಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗ್ರಾ.ಪಂ ಸಿಬ್ಬಂದಿ.

    ತೆರಿಗೆ ಸಂಗ್ರಹ ಎಲ್ಲಿ ಎಷ್ಟು
    ದ.ಕ ಜಿಲ್ಲೆ
    ಬೆಳ್ತಂಗಡಿ – ಶೇ.66.75
    ಬಂಟ್ವಾಳ- ಶೇ.65.38
    ಮಂಗಳೂರು- ಶೇ.55.38
    ಪುತ್ತೂರು-ಶೇ.65.23
    ಸುಳ್ಯ -ಶೇ.60.82
    ಮೂಡುಬಿದಿರೆ -ಶೇ.58.38
    ಕಡಬ-ಶೇ.52.90

    ಉಡುಪಿ ಜಿಲ್ಲೆ
    ಕಾರ್ಕಳ -ಶೇ.57.89
    ಕುಂದಾಪುರ-ಶೇ.47.18
    ಉಡುಪಿ-ಶೇ.47.26
    ಹೆಬ್ರಿ- ಶೇ.59.13
    ಕಾಪು- ಶೇ.42.26
    ಬೈಂದೂರು-ಶೇ.38.99
    ಬ್ರಹ್ಮಾವರ-ಶೇ.60.48

    ಉಡುಪಿ ಜಿಲ್ಲೆಯಲ್ಲಿ ಕಳೆದ ಒಬಿ ಹೊರತುಪಡಿಸಿದರೆ ಈ ವರ್ಷದ ತೆರಿಗೆಯಲ್ಲಿ ಶೇ.68ರಷ್ಟು ತೆರಿಗೆ ವಸೂಲಾತಿ ಆಗಿದೆ. ತೆರಿಗೆ ಸಂಗ್ರಹದಲ್ಲಿ ಶೇ.50 ಮೀರದ ಗ್ರಾಪಂಗಳ ಬಿಲ್ ಕಲೆಕ್ಟರ್, ಪಿಡಿಒಗಳಿಗೆ ನೋಟಿಸ್ ನೀಡಲಾಗಿದೆ. ಬಿಲ್ ಕಲೆಕ್ಟರ್ ಇಲ್ಲದ ಕಡೆಗಳಲ್ಲಿ ಸ್ವಸಹಾಯ ಸಂಘದ ಪ್ರತಿನಿಧಿಗಳ ಮೂಲಕ ತೆರಿಗೆ ಸಂಗ್ರಹ ಮಾಡಲಾಗುವುದು. ಈ ವಾರದಿಂದ ಗ್ರಾಮೀಣ ಭಾಗದಲ್ಲಿ ತೆರಿಗೆ ಸಂಗ್ರಹ ಸಪ್ತಾಹ ಆಚರಿಸಲು ಸೂಚನೆ ನೀಡಲಾಗಿದೆ.
    | ಡಾ.ನವೀನ್ ಭಟ್ ವೈ
    ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿಪಂ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts