More

    ಜೋಡೆತ್ತುಗಳ ಓಟಕ್ಕೆ ಬ್ರೇಕ್ ಹಾಕಲು ಕೈ ಕಸರತ್ತು

    ಹಿರೇಕೆರೂರ: ಕಳೆದ ಒಂದೂವರೆ ದಶಕದಿಂದ ಬದ್ಧ ವೈರಿಗಳಾಗಿದ್ದ ಬಿ.ಸಿ. ಪಾಟೀಲ ಹಾಗೂ ಯು.ಬಿ. ಬಣಕಾರ ಬದಲಾದ ರಾಜಕೀಯ ವಾತಾವರಣದಲ್ಲಿ ಒಂದೇ ಪಕ್ಷದಲ್ಲಿದ್ದು, ಈಗಾಗಲೇ ವಿಧಾನಸಭೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಜಯಭೇರಿ ಬಾರಿಸಿದ್ದಾರೆ. ಹಳ್ಳಿಫೈಟ್​ನಲ್ಲಿ ಜೋಡೆತ್ತುಗಳ ಓಟಕ್ಕೆ ಬ್ರೇಕ್ ಹಾಕಲು ಕೈ ಭಾರಿ ಕಸರತ್ತು ನಡೆಸಿದೆ.

    ತಾಲೂಕಿನ ಒಟ್ಟು 19 ಗ್ರಾಪಂಗಳ ಚುನಾವಣೆ 1ನೇ ಹಂತದಲ್ಲಿ ನಡೆಯಲಿದ್ದು, ಈ ಕ್ಷೇತ್ರಗಳ ಎಲ್ಲ ವಾರ್ಡ್​ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 19 ಗ್ರಾಪಂಗಳಿಂದ ಒಟ್ಟು 239 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಚಿಕ್ಕೇರೂರ 28 ಸ್ಥಾನಗಳನ್ನು ಹೊಂದಿ ಅತಿದೊಡ್ಡ ಗ್ರಾಮ ಪಂಚಾಯಿತಿಯಾದರೆ, ಭೋಗಾವಿ 9 ಸ್ಥಾನಗಳನ್ನು ಹೊಂದಿ ಅತಿಚಿಕ್ಕ ಗ್ರಾಪಂ ಕ್ಷೇತ್ರವಾಗಿದೆ.

    ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಮತಗಳ ಅಂತರದಿಂದ ಗೆದ್ದು ಕೃಷಿ ಸಚಿವರಾಗಿರುವ ಬಿ.ಸಿ. ಪಾಟೀಲ ಹಾಗೂ ಕ್ಷೇತ್ರ ತ್ಯಾಗ ಮಾಡಿ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಪಡೆದಿರುವ ಯು.ಬಿ. ಬಣಕಾರ ಗ್ರಾಪಂ ಚುನಾವಣೆಯಲ್ಲಿ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನವನ್ನು ಓರೆಗೆ ಹಚ್ಚಲು ಸಜ್ಜಾಗಿದ್ದಾರೆ.

    ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲ ಗ್ರಾಪಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಾಧಿಸುವ ಲೆಕ್ಕಾಚಾರಗಳು ಶುರುವಾಗಿವೆ. ಬದ್ಧ ವೈರಿಗಳಾಗಿದ್ದ ಉಭಯ ನಾಯಕರು ಒಂದಾಗಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಸ್ವಲ್ಪಮಟ್ಟಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೂ ಹೊಂದಾಣಿಕೆ ಮೂಲಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಅಲ್ಲಲ್ಲಿ ಕೆಲವರು ಅಸಮಾಧಾನಗೊಂಡು ನಾಮಪತ್ರ ಸಲ್ಲಿಕೆ ಮಾಡಿದ್ದರೂ ಅವರ ಓಲೈಕೆಯ ಕೆಲಸ ಶುರುವಾಗಿದೆ.

    ಕಾಂಗ್ರೆಸ್ ಕೂಡ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಹಾಗೂ ಕೇಂದ್ರ ನಾಯಕರ ಸೂಚನೆ ಮೇರೆಗೆ ಈಗಾಗಲೇ ಪಟ್ಟಣದಲ್ಲಿ ಹಿರಿಯ ಮುಖಂಡರು, ಮಾಜಿ ಸಚಿವರನ್ನು ಕರೆಸಿ ಕಾರ್ಯಕರ್ತರೊಂದಿಗೆ, ಆಕಾಂಕ್ಷಿ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ್ದಾರೆ. ಎಲ್ಲ ಗ್ರಾಪಂಗಳಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಕ್ಷೇತ್ರದಲ್ಲಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ಮತ್ತು ರಟ್ಟಿಹಳ್ಳಿಯಲ್ಲಿ ಶಿಕಾರಿಪುರ ನೀರಾವರಿ ಯೋಜನೆಗೆ ಎದ್ದಿರುವ ರೈತರ ವಿರೋಧವನ್ನು ಬಂಡವಾಳ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಶುಕ್ರವಾರ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಬರುತ್ತಿರುವುದು ಕೈ ಕಾರ್ಯಕರ್ತರು ಹಾಗೂ ನಾಯಕರಿಗೆ ಮತ್ತಷ್ಟು ಹುರುಪುಗೊಳ್ಳುವಂತೆ ಮಾಡಿದೆ.

    ಬಿ.ಸಿ. ಪಾಟೀಲರು ಕ್ಷೇತ್ರಕ್ಕೆ 4 ನೀರಾವರಿ ಯೋಜನೆಗಳಲ್ಲಿ 2 ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಇನ್ನೆರಡು ಮುಕ್ತಾಯದ ಹಂತದಲ್ಲಿವೆ. ಇದರಿಂದ ತಾಲೂಕಿನ ಶೇ. 98ರಷ್ಟು ಹಳ್ಳಿಗಳ ಕೆರೆಗಳು ಭರ್ತಿಯಾಗಲಿವೆ. ಇದು ರೈತರಿಗೆ ವರದಾನವಾಗಲಿದೆ. ಇದರ ಆಧಾರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಮತ ಸೆಳೆಯಲು ಕಸರತ್ತು ನಡೆಸಿದ್ದಾರೆ.

    ಅವಿರೋಧ ಆಯ್ಕೆಗೂ ಕಸರತ್ತು: ಕೆಲವು ಗ್ರಾಪಂಗಳಲ್ಲಿ ಈ ಹಿಂದೆ ಆಯ್ಕೆಯಾಗಿದ್ದ ಸದಸ್ಯರು ಹಣದ ಆಮಿಷ ಹಾಗೂ ಹಿರಿಯರಿಂದ ಯುವಕರ ಮನವೊಲಿಸಿ ಕಣದಿಂದ ಹಿಂದೆ ಸರಿಯುವಂತೆ ಒತ್ತಡ ತರುತ್ತಿದ್ದಾರೆ. ಇನ್ನು ಕೆಲವು ಗ್ರಾಪಂಗಳಲ್ಲಿ ದೇವಸ್ಥಾನ ಜೀಣೋದ್ಧಾರದ ಹೆಸರಲ್ಲಿ ಸದಸ್ಯ ಸ್ಥಾನಗಳು ಹರಾಜಾಗುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ.

    ಶಕ್ತಿ ಮತ್ತು ಮಹಾಶಕ್ತಿ ಕೇಂದ್ರದ ಮಟ್ಟದಲ್ಲಿ ಈಗಾಗಲೇ ಮುಖಂಡರ ಸಭೆ ನಡೆಸಿ, ಪ್ರತಿ ಗ್ರಾಪಂಗಳಿಗೆ ಒಬ್ಬ ಮುಖಂಡರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷ ಆಡಳಿತದಲ್ಲಿರುವುದರಿಂದ ಗ್ರಾಮಗಳ ಅಭಿವೃದ್ಧಿಗೆ ಇದು ಮತ್ತಷ್ಟು ಸಹಾಯಕಾರಿಯಾಗಲಿದೆ. 19 ಗ್ರಾಪಂ ಕ್ಷೇತ್ರಗಳಲ್ಲಿ ಸ್ಥಳೀಯರ ಸಲಹೆ ಸೂಚನೆಯಂತೆ ಒಮ್ಮತದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಎಲ್ಲ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದಾರೆ.
    | ಷಣ್ಮುಖಯ್ಯ ಮಳಿಮಠ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ

    ಈಗಾಗಲೇ ಚುನಾವಣೆಯ ವಿಷಯವಾಗಿ ಸಭೆ ನಡೆಸಲಾಗಿದೆ. ಕೃಷಿ ವಿರೋಧಿ ನೀತಿ ಜಾರಿ ಹಾಗೂ ಅವೈಜ್ಞಾನಿಕವಾಗಿ ನಿರ್ವಿುಸುತ್ತಿರುವ ಶಿಕಾರಿಪುರ ಏತ ನೀರಾವರಿ ಯೋಜನೆ ರೈತರಿಗೆ ಮುಳುವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತ ವಿರೋಧಿ ಅಲೆ ಹೆಚ್ಚಿದೆ. ಜನತೆ ಬಿಜೆಪಿಯನ್ನು ತಿರಸ್ಕರಿಸುತ್ತಿದ್ದಾರೆ. ಇದು ನಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ವರದಾನವಾಗಲಿದೆ. ಈ ಚುನಾವಣೆಯನ್ನು ಬಹು ಗಂಭೀರವಾಗಿ ಪರಿಗಣಿಸಿದ್ದು, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರ ನೇತೃತ್ವದಲ್ಲಿ 19 ಗ್ರಾಪಂಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ.
    | ರಮೇಶ ಮಡಿವಾಳರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts