More

    ಗೆದ್ದ ಖುಷಿಯಲ್ಲಿ ಕರೊನಾ ಮಾರ್ಗಸೂಚಿ ಮರೆತ ಜನ ; ಗ್ರಾಪಂ ಚುನಾವಣೆ ಮತ ಎಣಿಕೆ ಕೇಂದ್ರಗಳಲ್ಲಿ ಜನಸ್ತೋಮ

    ತುಮಕೂರು : ತೀವ್ರ ಕುತೂಹಲ ಮೂಡಿಸಿದ್ದ ಗ್ರಾಪಂ ಚುನಾವಣಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳ ಮತಎಣಿಕೆ ಕೇಂದ್ರದ ಮುಂಭಾಗ ಗೆದ್ದವರ ವಿಜಯೋತ್ಸವ ನಡೆಯಿತು.

    ಕರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸಾವಿರಾರು ಜನರು ಒಟ್ಟಾಗಿ ಸೇರಿ ಪರಸ್ಪರ ಆಲಂಗಿಸಿಕೊಂಡು ಕುಣಿದಾಡಿದರೂ ನೆರೆದಿದ್ದ ಪೊಲೀಸರು ಅಸಹಾಯಕರಾಗಿದ್ದರು. ತುಮಕೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮತಎಣಿಕೆ ಕೇಂದ್ರದ ಮುಂಭಾಗ ಬುಧವಾರ ಬೆಳಗ್ಗೆಯೇ ಸಾವಿರಾರು ಜನರು ಜಮಾಯಿಸಿದ್ದರು, ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭಿಸಿದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಗ್ರಾಮಗಳಿಂದಲೂ ನೂರಾರು ಜನರು ಎಣಿಕೆ ಕೇಂದ್ರದ ಬಳಿ ಬಂದು ಫಲಿತಾಂಶಕ್ಕಾಗಿ ಚಾತಕಪಕ್ಷಿಯಂತೆ ಕಾದು ಕುಳಿತಿದ್ದರು.

    ತುಮಕೂರು ತಾಲೂಕಿನ 41 ಗ್ರಾಪಂಗಳ ಸದಸ್ಯ ಸ್ಥಾನಗಳಿಗೆ ಡಿ.22ರಂದು 365 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿತ್ತು, 1500ಕ್ಕೂ ಹೆಚ್ಚು ಮತದಾರರಿರುವ 50 ಮತಗಟ್ಟೆಗಳಿದ್ದ ಕಾರಣಕ್ಕೆ ಮತ ಎಣಿಕೆ ತಡವಾಯಿತು. ಬೆಳಗ್ಗೆ 10ಕ್ಕೆ ಮೈದಾಳ ಗ್ರಾಪಂ ಫಲಿತಾಂಶದೊಂದಿಗೆ ಒಂದೊಂದೇ ಗ್ರಾಪಂ ಸದಸ್ಯ ಸ್ಥಾನಗಳು ಘೋಷಣೆಯಾಗಲಾರಂಭಿಸಿದವು.

    ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗಲು ನಿರ್ಬಂಧವಿದ್ದ ಕಾರಣಕ್ಕೆ ಹೊರಗಡೆ ಕಾಯುತ್ತಿದ್ದವರಿಗೆ ಏನೂ ಗೊತಾಗುತ್ತಿರಲಿಲ್ಲ, ಎಣಿಕೆ ಪೂರ್ಣಗೊಂಡ ನಂತರವಷ್ಟೇ ಗೆಲುವು, ಸೋಲಿನ ವಿಷಯ ತಿಳಿಯುತ್ತಿದ್ದ ಕಾರ್ಯಕರ್ತರು, ಅಭಿಮಾನಿಗಳು ಗೆದ್ದ ಅಭ್ಯರ್ಥಿಗಳನ್ನು ಹೊತ್ತು ಕುಣಿದಾಡಿದರು. ಎಣಿಕೆ ಕೇಂದ್ರದ ಮುಂಭಾಗ ಪಟಾಕಿ ಸಿಡಿಸಲು ಯಾರಿಗೂ ಅವಕಾಶವಿರಲಿಲ್ಲ. ಆದರೆ, ಕರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಜನದಟ್ಟಣೆಗೆ ಪೊಲೀಸರು ಅವಕಾಶ ನೀಡಿದ್ದರು. ಎಣಿಕೆ ಕೇಂದ್ರದ ಒಳಗಡೆಯೂ ಸಾಕಷ್ಟು ಜನರು ತುಂಬಿಕೊಂಡಿದ್ದು ಸಮಸ್ಯೆಯಾಗಿತ್ತು. ಎಲ್ಲರೂ ಪಾಸ್ ಪಡೆದಿದ್ದರಾದ್ದರಿಂದ ಪೊಲೀಸರು ಅಸಹಾಯಕರಾಗಿದ್ದರು.

    ಮಹಿಳಾ ಅಭ್ಯರ್ಥಿಗಳೇ ಕಡಿಮೆ! : ಮತ ಎಣಿಕೆ ಸಂದರ್ಭದಲ್ಲಿ ಅಭ್ಯರ್ಥಿ ಅಥವಾ ಅವರ ಪರವಾಗಿ ಒಬ್ಬರು ಭಾಗವಹಿಸಲು ಅವಕಾಶ ನೀಡಲಾಗಿತ್ತು, ಗ್ರಾಪಂ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಇದ್ದರೂ ಎಣಿಕೆ ಕೇಂದ್ರದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಕಾಣಿಸಿದರು. ಮಹಿಳಾ ಅಭ್ಯರ್ಥಿಗಳ ಪರವಾಗಿ ಅವರ ಪತಿ, ಮಕ್ಕಳು, ಸಹೋದರರೇ ಎಣಿಕೆ ಸಂದರ್ಭದಲ್ಲಿ ಹಾಜರಿದ್ದರು. ಮಹಿಳಾ ಅಭ್ಯರ್ಥಿ ಗೆದ್ದರೂ ಅವರ ಪರವಾಗಿ ಪುರುಷರೇ ಹಾರ ಹಾಕಿಸಿಕೊಂಡರು, ಪ್ರಮಾಣಪತ್ರವನ್ನು ಅವರೇ ಪಡೆದು ಬೀಗಿದರು.

    ಗ್ರಾಪಂಗೆ ಎಂಫಿಲ್ ಪದವೀಧರ, ಪತ್ರಕರ್ತರು ಎಂಟ್ರಿ : ಚಿಕ್ಕನಾಯಕನಹಳ್ಳಿ ತಾಲೂಕು ಬೆಳಗುಲಿ ಗ್ರಾಪಂ ತಾರಿಕಟ್ಟೆಯಲ್ಲಿ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂಫಿಲ್ ಪದವೀಧರ ಟಿ.ಜಿ.ಶಾಂತರಾಜು 8 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎಂಎ, ಎಂ.ಇಡಿ, ಎಂಫಿಎಲ್, ಎಂಎಸ್‌ಡಬ್ಲ್ಯು ಪದವೀಧರನಾಗಿರುವ ಶಾಂತರಾಜು ಇದೇ ಮೊದಲ ಬಾರಿಗೆ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಶಿರಾ ತಾಲೂಕು ಪಟ್ಟನಾಯಕನಹಳ್ಳಿಯಲ್ಲಿ ಪತ್ರಕರ್ತ ಪಕ್ರುದ್ದೀನ್‌ಬಾಬು ಅವರ ಪತ್ನಿ ಮೆಹರ್‌ತಾಜ್, ಬರಗೂರು ಗ್ರಾಪಂ ಹಾರೊಗೆರೆಯಲ್ಲಿ ಲೋಕೇಶ್, ಗುಬ್ಬಿ ತಾಲೂಕು ಬ್ಯಾಡಗೆರೆಯಲ್ಲಿ ನರಸಿಂಹಮೂರ್ತಿ ಗೆಲುವು ಪಡೆಯುವ ಮೂಲಕ ಪತ್ರಕರ್ತರೂ ಗ್ರಾಪಂಗೆ ಪ್ರವೇಶಿಸಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts