More

    ಸ್ಥಳದಲ್ಲೇ ಸಮಸ್ಯೆಗಳ ಇತ್ಯರ್ಥ ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಗ್ರಾಮವಾಸ್ತವ್ಯ ; 52 ಅರ್ಜಿಗಳು ಸಲ್ಲಿಕೆ

    ಗುಬ್ಬಿ: ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ವಾಸ್ತವ್ಯ ಮಾಡಿ, ಸ್ಥಳೀಯರ ಸಮಸ್ಯೆ ಆಲಿಸಿದರು.

    ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಗಿಡ ನೆಟ್ಟು, ಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ವಿವಿಧ ಇಲಾಖೆ ವತಿಯಿಂದ ರೈತರಿಗಾಗಿ ಆಯೋಜಿಸಲಾಗಿದ್ದ ಪ್ರಾತ್ಯಕ್ಷತೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಬಳಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.

    ವೈ.ಎಸ್.ಪಾಟೀಲ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಜನರ ಸಮಸ್ಯೆ ಬಗೆಹರಿಸುವುದು ಮುಖ್ಯ ಉದ್ದೇಶವಾಗಿದೆ, ನ್ಯಾಯಾಲಯ ಮತ್ತು ವೈಯಕ್ತಿಕ ಸಮಸ್ಯೆ ಹೊರತುಪಡಿಸಿ, ಇತರ ಅಹವಾಲುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗುವುದು ಎಂದರು.
    ವಿವಿಧ ಇಲಾಖೆಗಳು ಯೋಜನೆಗಳ ಸೌಲಭ್ಯ ಕುರಿತು ಮಳಿಗೆ ತೆರೆದು ಅರಿವು ಮೂಡಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಸ್ಥಳದಲ್ಲಿಯೇ ದೃಷ್ಠಿದೋಷವುಳ್ಳವರಿಗೆ ಕನ್ನಡಕ ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ತಿಳಿಸಿದರು.

    ಪೊಲೀಸ್ ಇಲಾಖೆ ಜನಸ್ನೇಹಿಯುತವಾಗಿ ಕೆಲಸ ಮಾಡುತ್ತಿದೆ, ಜನರ ಅಹವಾಲು ಆಲಿಸಲು 112 ಸೇವೆ ಪ್ರಾರಂಭಿಸಲಾಗಿದೆ. ಸಮಸ್ಯೆ ಇದ್ದವರು 112ಗೆ ಕರೆ ಮಾಡಿ ಮಾಹಿತಿ ನೀಡಿದರೆ 15 ನಿಮಿಷದಲ್ಲಿ ಸಿಬ್ಬಂದಿ ಸ್ಥಳಕ್ಕೆ ಬರಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ. ವಂಶಿಕೃಷ್ಣ ತಿಳಿಸಿದರು. ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಿತ ತಹಸೀಲ್ದಾರ್ ಪ್ರದೀಪ್‌ಕುಮಾರ್, ಸ್ಥಳೀಯ ಗ್ರಾಪಂ ಸದಸ್ಯ ಸತೀಶ್ ಮತ್ತಿತರರು ಇದ್ದರು.

    ಘನತ್ಯಾಜ್ಯ ನಿರ್ವಹಣೆಗೆ ಜಾಗ: ಕಾರ್ಯಕ್ರಮದಲ್ಲಿ 52 ಅರ್ಜಿಗಳು ಸಲ್ಲಿಕೆಯಾಗಿದ್ದು, ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯಕ್ಕೆ ಸಂಬಂಧಿಸಿದಂತೆ 7 ಅರ್ಜಿಗಳನ್ನು ಸ್ವೀಕರಿಸಳಾಗಿದೆ, ಸಾಗುವಳಿ ಚೀಟಿಗೆ 2, ಕಣ್ಣಿನ ತಪಾಸಣೆ ನಡೆಸಿ 25 ಮಂದಿಗೆ ಕನ್ನಡಕ ನೀಡಲಾಗಿದೆ. 16 ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗಿದೆ. 9 ಪಹಣಿ ತಿದ್ದುಪಡಿ, 84 ಪೋಡಿ ಸಮಸ್ಯೆ , 7 ಪೌತಿ ಖಾತೆ ಸರಿಪಡಿಸಲಾಗಿದೆ. ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಘನತ್ಯಾಜ್ಯ ನಿರ್ವಹಣೆಗೆ ಹಾಗೂ ಸ್ಮಶಾನಕ್ಕೆ ಜಾಗ ಮೀಸಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಮಧ್ಯವರ್ತಿ ಹಾವಳಿ ತಡೆಗೆ ಕ್ರಮ: ಸರ್ಕಾರಿ ಜಾಗ ಒತ್ತುವರಿ, ಕೆರೆಗೆ ನೀರುವ ಮಾರ್ಗದಲ್ಲಿ ಜಮೀನು ಅಭಿವೃದ್ಧಿ ಪಡಿಸಿ ನೀರು ಹರಿಯದಂತೆ ತಡೆಹಿಡಿಯಲಾಗಿದೆ ಎಂಬುದು ಸೇರಿದಂತೆ ಬೆಸ್ಕಾಂಗೆ ಸಂಬಂಧಿಸಿದ ದೂರುಗಳು ಬಂದಿದ್ದು, ಪರಶೀಲಿಸಿ ತುರ್ತಾಗಿ ಇತ್ಯರ್ಥಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದ ಡಿಸಿ ಪಾಟೀಲ್, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆಯೂ ದೂರು ಬಂದಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts