More

    ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ ಪ್ರಶ್ನೆ

    ಪಿ.ಬಿ.ಹರೀಶ್ ರೈ ಮಂಗಳೂರು
    ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹುತೇಕ ಖಚಿತ. ಲೋಕಸಭೆ ಚುನಾವಣೆ ಬಳಿಕ ಕೊಂಚ ವಿರಾಮದಲ್ಲಿದ್ದ ರಾಜಕೀಯ ಪಕ್ಷಗಳು ಈಗ ಮತ್ತೆ ಸಜ್ಜಾಗಬೇಕಾಗಿದೆ. ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲದಿರಬಹುದು. ಆದರೆ ರಾಜಕೀಯ ಪಕ್ಷಗಳ ಹಿರಿಯ, ಕಿರಿಯ ನಾಯಕರು ಫೀಲ್ಡ್‌ಗೆ ಇಳಿಯಲೇ ಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಈ ಬಾರಿ ಸಹಕಾರಿ ಸಂಘಗಳ ಚುನಾವಣೆಯೇ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಕಣವಾಗಿತ್ತು. ಇನ್ನು ಗ್ರಾಮ ಪಂಚಾಯಿತಿ ಚುನಾವಣೆಯ ಸರದಿ. 2018ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ವಿರುದ್ಧ ಭರ್ಜರಿ ಮೇಲುಗೈ ಸಾಧಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಭಾರಿ ಅಂತರದ ಜಯ ಸಾಧಿಸಿತ್ತು. ಕೇಂದ್ರ ಹಾಗೂ ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರ ಇರುವ ಕಾರಣ ಆಳುವ ಪಕ್ಷಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ. ಮಹಾ ಚುನಾವಣೆಯಲ್ಲಿ ಸೋಲಿನ ದಾಳಿಗೆ ಸಿಲುಕಿದ ಕಾಂಗ್ರೆಸ್‌ಗೆ ಗ್ರಾಪಂ ಚುನಾವಣೆ ಸವಾಲಾಗಿ ಪರಿಣಮಿಸಲಿದೆ.

    2015ರ ಚುನಾವಣೆ
    2013ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಸೋಲು ಕಂಡಿದ್ದ ಬಿಜೆಪಿ 2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚೇತರಿಸಿಕೊಂಡಿತ್ತು. ದ.ಕ.ಜಿಲ್ಲೆಯ 227 ಪಂಚಾಯಿತಿಗಳ ಪೈಕಿ 129 ಪಂಚಾಯಿತಿಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 80 ಪಂಚಾಯಿತಿಯಲ್ಲಿ ಅಧಿಕಾರ ಪಡೆದಿತ್ತು. ಉಡುಪಿ ಜಿಲ್ಲೆಯಲ್ಲಿ ಬಿಜೆಪಿ 89 ಪಂಚಾಯಿತಿಯಲ್ಲಿ ಬಹುಮತ ಪಡೆದಿದ್ದರೆ, ಕಾಂಗ್ರೆಸ್ 54 ಪಂಚಾಯಿತಿಯಲ್ಲಿ ಅಧಿಕಾರದ ಗದ್ದುಗೆ ಏರಿತ್ತು.

    ಅಧಿಕಾರದ ಬಲ
    ಬಿಜೆಪಿ ಪಾಳಯಕ್ಕೆ ಸಂಸದರ ಹಾಗೂ ಶಾಸಕರ ಬಲವಿದೆ. ಜತೆಗೆ ಪಕ್ಷ ಸಂಘಟನೆಗೆ ಬಿಜೆಪಿ ಹೆಚ್ಚಿನ ಮುತುವರ್ಜಿ ವಹಿಸಿದೆ. ಜಿಲ್ಲಾ ಬಿಜೆಪಿ ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ನೂತನ ಸಮಿತಿ ರಚಿಸಿ, ಯುವಕರಿಗೆ ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿದೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ನಲ್ಲಿ ಪಕ್ಷ ಸಂಘಟನೆ ಕಾರ್ಯ ನಡೆದದ್ದು ಕಡಿಮೆ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಚೇತರಿಸಿಕೊಂಡಿಲ್ಲ. ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದ ಸೋಲಾಗಿತ್ತು. ಕೆಲವು ಬ್ಲಾಕ್ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇದೆ. ಈ ಎಲ್ಲ ಸಮಸ್ಯೆಗಳನ್ನು ಕಾಂಗ್ರೆಸ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸರಿದೂಗಿಸಬೇಕಾಗಿದೆ.

    ಮಂಡಲ ಸಮಿತಿಗಳಿಗೆ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಬೂತ್‌ಮಟ್ಟದಲ್ಲಿ ಹೊಸ ಸಮಿತಿಗಳನ್ನುರಚಿಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬೂತ್‌ಮಟ್ಟದ ಸಭೆಗಳು ನಡೆಯುತ್ತಿವೆ. ಬಿಜೆಪಿಯ ರಾಜ್ಯಾಧ್ಯಕ್ಷರು ಮತ್ತು ಎಲ್ಲ ಶಾಸಕರ ಮಾರ್ಗದರ್ಶನದಲ್ಲಿ ಗ್ರಾಪಂ ಚುನಾವಣೆಗೆ ವ್ಯವಸ್ಥಿತ ಸಿದ್ಧತೆ ನಡೆದಿದೆ.
    -ಸುದರ್ಶನ ಮೂಡುಬಿದಿರೆ, ಅಧ್ಯಕ್ಷ, ದ.ಕ.ಜಿಲ್ಲಾ ಬಿಜೆಪಿ

    ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಭದ್ರ ನೆಲೆ ಇದೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದವರು ತಮ್ಮ ಕ್ಷೇತ್ರದಲ್ಲಿ ಗ್ರಾಪಂ ಚುನಾವಣೆಯ ಜವಾಬ್ದಾರಿ ವಹಿಸಲಿದ್ದಾರೆ. ಚುನಾವಣೆಯನ್ನು ಗಮನದಲ್ಲಿರಿಸಿ ಕ್ಷೇತ್ರಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದೆ. ಮೀಸಲು ನಿಗದಿಯಾದ ತಕ್ಷಣ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
    -ಐವನ್ ಡಿಸೋಜ, ಸದಸ್ಯ, ವಿಧಾನ ಪರಿಷತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts