More

    ಗೋವು, ಲಕ್ಷ್ಮೀ ಪೂಜೆ ಸಂಭ್ರಮ, ಕೃಷ್ಣ ಮಠ, ನೀಲಾವರ ಗೋಶಾಲೆಯಲ್ಲಿಯೂ ಆಚರಣೆ

    ಮಂಗಳೂರು/ಉಡುಪಿ: ದೀಪಾವಳಿ ಅಂಗವಾಗಿ ಕರಾವಳಿಯಲ್ಲಿ ಭಾನುವಾರ ಗೋ ಪೂಜೆ, ವಿವಿಧ ಕಚೇರಿ, ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ನಡೆಯಿತು.

    ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗೋಪೂಜೆ ಹಾಗೂ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಗೋಪೂಜೆ ನೆರವೇರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗೋಶಾಲೆಯಲ್ಲಿ ಭಾನುವಾರ ಗೋಪೂಜೆ ನೆರವೇರಿತು. ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯ ವಿವಿಧ ವೈದಿಕ ವಿಧಿವಿಧಾನಗಳ ಮೂಲಕ ಗೋಪೂಜೆ ನೆರವೇರಿಸಿದರು.

    ಬಲಿಪಾಡ್ಯ ಅಂಗವಾಗಿ ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ಗೋಪೂಜೆ ಸಂಭ್ರಮದಿಂದ ನಡೆಯಿತು. ಕೃಷ್ಣ ಮಠ, ಅಷ್ಟಮಠ, ನೀಲಾವರ ಗೋಶಾಲೆ, ಕೊಡವೂರು ಗೋಶಾಲೆ ಹಾಗೂ ಪ್ರಮುಖ ದೇವಸ್ಥಾನಗಳಲ್ಲಿ ಗೋಪೂಜೆ ನಡೆಯಿತು. ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲೂ ಸಾಮೂಹಿಕ ಗೋಪೂಜೆಗಳೂ ನಡೆದವು.

    ಪಟಾಕಿ ಮಾರಾಟ ಶೇ.40 ಇಳಿಕೆ: ರಾಜ್ಯ ಸರ್ಕಾರ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಮಾತ್ರ ಅನುಮತಿ ನೀಡಿದ್ದರಿಂದ ಕೊನೇ ಕ್ಷಣದಲ್ಲಿ ಗೊಂದಲ ಏರ್ಪಟ್ಟಿದ್ದು, ಹೆಚ್ಚಿನ ಜನರು ಕಾನೂನು ಕ್ರಮದ ಭಯದಿಂದ ಪಟಾಕಿ ಖರೀದಿಗೆ ಹಿಂದೇಟು ಹಾಕಿದ್ದರಿಂದ ಪಟಾಕಿ ವ್ಯವಹಾರ ಶೇ.40ರಷ್ಟು ಇಳಿಕೆಯಾಗಿದೆ. ಉಳಿದಂತೆ ಜನರು ಭಾನುವಾರವೂ ಅಗತ್ಯ ವಸ್ತು, ಸಿಹಿ ತಿಂಡಿ, ಹೂ ಖರೀದಿ ಮಾಡುತ್ತಿದ್ದರು. ಶಂಕರಪುರ ಮಲ್ಲಿಗೆ ದರ ಗರಿಷ್ಠ ಮುಂದುವರಿದಿದ್ದು, 1250 ರೂ.ಕಟ್ಟೆಯಲ್ಲಿ ಹಾಗೂ 1800 ರೂ.ಗೆ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ರಥಬೀದಿ, ಮಾರುಕಟ್ಟೆ, ಶಾಪಿಂಗ್‌ಮಾಲ್‌ಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

    ಪಟಾಕಿ ಹಾನಿಯಿಲ್ಲ: ಈ ಬಾರಿ ಪಟಾಕಿಗೆ ಕಡಿಮೆ ಆದ್ಯತೆ ನೀಡಿರುವುದರಂದ ಪಟಾಕಿಯಿಂದ ಗಂಭೀರ ಹಾನಿಯಾಗಿಲ್ಲ. ಶನಿವಾರ ಪ್ರಸಾದ್ ನೇತ್ರಾಲಯದಲ್ಲಿ ಹುಡುಗನೊಬ್ಬ ಹೊರರೋಗಿಯಾಗಿ ಚಿಕಿತ್ಸೆ ಪಡೆದು ತೆರಳಿದ್ದಾನೆ. ಭಾನುವಾರ ಮೂವರು ಆಸ್ಪತ್ರೆಗೆ ದಾಖಲಾಗಿದ್ದು, ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

    ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಮ್ಮನ್ನು ಸಲಹುವ ಪ್ರಾಣಿ ಪಕ್ಷಿಗಳಿಗೂ ಪಾಲು ನೀಡಬೇಕು. ಆಗ ಹಬ್ಬ ಸಾರ್ಥಕವಾಗುತ್ತದೆ. ಗೋ ಸಂರಕ್ಷಣೆ ಬಗ್ಗೆ ಸಂಘ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ತೋರುತ್ತಿರುವುದು ಶ್ಲಾಘನೀಯ.
    – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
    ಪೇಜಾವರ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts