More

    ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ರದ್ಧತಿ : ಪಂಚಪೀಠ ಜಗದ್ಗುರುಗಳ ವಿರೋಧ

    ಬೆಳಗಾವಿ : ಗೋವುಗಳು ರೈತನ ಮಿತ್ರವಾಗಿರುವುದರಿಂದ ಮತ್ತು ಹಸುವಿನ ಹಾಲು ಆರೋಗ್ಯಕ್ಕೆ ಉತ್ತಮ ಆಹಾರವಾಗಿರುವುದರಿಂದ ಗೋವುಗಳನ್ನು ಹತ್ಯೆ ಮಾಡುವುದು ಸರಿಯಲ್ಲ ಎಂಬ ಉದ್ದೇಶದಿಂದ ಹಿಂದಿನ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿತ್ತು. ಜೊತೆಗೆ ಭಯ ಮತ್ತು ಆಮಿಷದ ಮೂಲಕ ಮಾಡಲಾಗುವ ಮತಾಂತರವನ್ನು ನಿಷೇಧ ಮಾಡಿದ್ದು, ಈಗ ಹೊಸ ಸರ್ಕಾರ ರಚನೆಯಾದ ಬಳಿಕ ಈ ಕಾಯ್ದೆಯನ್ನು ರದ್ದು ಮಾಡಲು ಮುಂದಾಗುತ್ತಿರುವುದು ರೈತರ ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು . ಕಾಶೀ ಪೀಠದ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಶ್ರೀ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ದಲಿಂಗ ರಾಜ ದೇಶಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಜಗದ್ಗುರುಗಳು, ಹಿಂದೂ ಧರ್ಮದ ಪ್ರಕಾರ ಗೃಹಪ್ರವೇಶ ಮುಂತಾದ ಹಲವಾರು ಧಾರ್ಮಿಕ ವ್ಯವಹಾರಗಳಲ್ಲಿ ಗೋಪೂಜೆ, ಗೋ ಪ್ರವೇಶ ಮುಂತಾದವುಗಳನ್ನು ಮಾಡುವ ಪದ್ಧತಿಯಿರುವುದರಿಂದ ಗೋವುಗಳು ಹಿಂದೂಗಳಿಗೆ ಪೂಜ್ಯ ಸ್ಥಾನದಲ್ಲಿವೆ. ಆದ್ದರಿಂದ ಗೋಹತ್ಯಾ ನಿಷೇಧದ ರದ್ದತಿಯಿಂದ ಹಿಂದೂ ಧರ್ಮದ ಎಲ್ಲಾ ಅನುಯಾಯಿಗಳ ಭಾವನೆಗೆ ತೀವ್ರವಾದ ಧಕ್ಕೆಯಾಗುತ್ತದೆ. ಇದಲ್ಲದೇ “ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ” ಯನ್ನು ಪ್ರತಿಯೊಂದು ಸಮುದಾಯವು ಪಾಲಿಸುವುದರಿಂದ ಎಲ್ಲರೂ ಶಾಂತಿಯುತವಾಗಿ ಮತ್ತು ಸೌಹಾರ್ದಯಿಂದ ಬದುಕಲು ಅನುಕೂಲವಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆ ಇಲ್ಲದಿದ್ದರೆ, ರಾಜಕೀಯ ವಲಯದಲ್ಲಿ ಅಸ್ಥಿರತೆ ಆರಂಭವಾಗುವಂತೆ ಮತಾಂತರ ನಿಷೇಧ ಕಾಯ್ದೆ ರದ್ಧತಿಯಿಂದ ಸಾಮಾಜಿಕ ವಲಯದಲ್ಲಿ ಅಸ್ಥಿರತೆ ನೆಲೆಸುತ್ತದೆ. ರಾಜಕೀಯದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಎಷ್ಟು ಅವಶ್ಯವೋ, ಸಮಾಜದಲ್ಲಿ ಮತಾಂತರ ನಿಷೇಧ ಕಾಯ್ದೆ ಅಷ್ಟೇ ಅವಶ್ಯಕವಾದುದು. ರಾಜಕೀಯ ಸ್ಥಿರತೆ ಬಯಸುವ ರಾಜಕಾರಣಿಗಳು ಸಮಜದ ಸ್ಥಿರತೆಗೂ ಬೆಂಬಲಿಸಬೇಕು. ಆದ್ದರಿಂದ ಒತ್ತಾಯದ ಮತಾಂತರ ಎಂದಿಗೂ ಒಳ್ಳೆಯದಲ್ಲ. ಕಾರಣ ಈ ಎರಡು ಕಾಯ್ದೆಗಳ ರದ್ಧತಿಯಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts