More

     ಜಿಲ್ಲಾಡಳಿತ ಸುಪರ್ದಿಯಲ್ಲಿ ವಾಹನ

    ಪ್ರಕಾಶ್ ಮಂಜೇಶ್ವರ, ಮಂಗಳೂರು 
    ನಗರದಲ್ಲಿ ಇತ್ತೀಚೆಗೆ ಗೋಲಿಬಾರ್ ಸಂಭವಿಸಿದ ಮರುದಿನದಿಂದ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಬಳಸಲು ವಶಪಡಿಸಿಕೊಂಡ ಖಾಸಗಿ ಟೂರಿಸ್ಟ್ ವಾಹನಗಳನ್ನು ಜಿಲ್ಲಾಡಳಿತ ಇನ್ನೂ ಬಿಟ್ಟುಕೊಟ್ಟಿಲ್ಲ.
    ಜೀವನ ನಿರ್ವಹಣೆಗೆ ಬ್ಯಾಂಕಿನಲ್ಲಿ ಸಾಲ ಪಡೆದು ಟೂರಿಸ್ಟ್ ವಾಹನ ಖರೀದಿಸಿ, ನಿರ್ವಹಿಸುತ್ತಿದ್ದ ಬಡ ಚಾಲಕರು ಮತ್ತು ಮಾಲೀಕರಿಗೆ ದೈನಂದಿನ ಜೀವನ ನಿರ್ವಹಣೆ ಕಷ್ಟವಾಗಿದೆ. ಬ್ಯಾಂಕಿನ ತಿಂಗಳ ಕಂತು ಪಾವತಿಸುವುದೇ ಸಮಸ್ಯೆ. ಟ್ಯಾಕ್ಸಿ ಮಾಲೀಕರು ಕೂಡಲೇ ವಾಹನ ಹಿಂತಿರುಗಿಸುವಂತೆ ಗೋಗರೆಯುವ ಪರಿಸ್ಥಿತಿ ಎದುರಾಗಿದೆ.

    ಗೋಲಿಬಾರ್ ನಡೆದ (ಡಿ.19) ಮರುದಿನವೇ ಬಾಡಿಗೆ ನಡೆಸಲೆಂದು ನಗರ ಹಾಗೂ ನಗರದ ಹೊರವಲಯದ ವಿವಿಧೆಡೆ ನಿಲುಗಡೆ ಸ್ಥಗಳಲ್ಲಿದ್ದ ಟೂರಿಸ್ಟ್ ಕಾರು, ಟ್ಯಾಕ್ಸಿ, ಟೆಂಪೋ ಟ್ರಾವೆಲರ್ ಮಾದರಿಯ ವಾಹನಗಳನ್ನು ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ವಾಹನದ ದಾಖಲೆಗಳನ್ನು ಪಡೆದು ಮರುದಿನದಿಂದ ವಾಹನದ ಜತೆಗೆ ಜಿಲ್ಲಾಡಳಿತದ ಸೇವೆಗೆ ಹಾಜರಾಗುವಂತೆ ಚಾಲಕರಿಗೆ ಅಧಿಕಾರಿಗಳು ಸೂಚಿಸಿದ್ದರು. ಈ ಸಂಪ್ರದಾಯ ಹೊಸತೇನೂ ಅಲ್ಲ. ಇಲಾಖೆ ವಾಹನಗಳ ಕೊರತೆ ಹಿನ್ನೆಲೆ ಯಲ್ಲಿ ಚುನಾವಣೆ, ಗಲಭೆ ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತ ಖಾಸಗಿ ಟೂರಿಸ್ಟ್ ವಾಹನಗಳನ್ನು ಬಳಸಿಕೊಳ್ಳುತ್ತಾ ಬಂದಿದೆ.

    ಕಾರ್ಯಕ್ರಮ ಅಸ್ತವ್ಯಸ್ತ: ಇಲಾಖೆ ದಿಢೀರ್ ವಾಹನ ವಶಪಡಿಸಿಕೊಳ್ಳುವುದರಿಂದ ಟೂರಿಸ್ಟ್ ವಾಹನ ಮಾಲೀಕರ ಇಡೀ ದಿನಚರಿ ಅಸ್ತವ್ಯಸ್ತಗೊಳ್ಳುತ್ತವೆ. ಬುಕ್ ಆಗಿರುವ ಒಳ್ಳೆಯ ಬಾಡಿಗೆಗಳನ್ನು ಕೈಬಿಡಬೇಕಾಗುತ್ತದೆ. ಮುಖ್ಯವಾಗಿ ಈ ಬಾರಿ ಗಲಭೆ ನಡೆದಿರುವುದು ಕ್ರಿಸ್‌ಮಸ್, ಹೊಸ ವರ್ಷಾಚರಣೆ, ಶಬರಿಮಲೆ ಯಾತ್ರೆ ಸಂದರ್ಭವಾದ ಕಾರಣ ವಾಹನ ಮಾಲೀಕರು ಹೆಚ್ಚು ಕಷ್ಟ ಅನುಭವಿಸಿದ್ದಾರೆ. ರಜಾ ಅವಧಿಯಲ್ಲಿ ದೇಶ ವಿದೇಶಗಳಿಂದ ಪ್ರವಾಸಕ್ಕಾಗಿ ಇಲ್ಲಿ ವಾಹನ ಕಾಯ್ದಿರಿಸಿದವರ ಜತೆ ನಡೆಸಿಕೊಂಡ ಪೂರ್ವ ಒಪ್ಪಂದವನ್ನು ಮುರಿಯುವ ಅನಿವಾರ್ಯ ಪರಿಸ್ಥಿತಿಯನ್ನು ವಾಹನ ಮಾಲೀಕರು ಎದುರಿಸಿದ್ದಾರೆ.

    ಪಾವತಿ ಮುಖ್ಯ ಸಮಸ್ಯೆ: ಸರ್ಕಾರ ಬಳಸುವ ಖಾಸಗಿ ವಾಹನ ಮಾಲೀಕರಿಗೆ ಸರ್ಕಾರ ಬಾಡಿಗೆ ನಿಗದಿಪಡಿಸಿದೆಯಾದರೂ, ಪಾವತಿ ಅತ್ಯಂತ ವಿಳಂಬವಾಗುತ್ತಿರುವುದು ಮುಖ್ಯ ಸಮಸ್ಯೆ. ಕಳೆದ ಲೋಕಸಭಾ ಚುನಾವಣೆ ಹಾಗೂ ಅದಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಡೆದ ರಾಷ್ಟ್ರೀಯ ಮಟ್ಟದ ಪ್ರಮುಖ ನಾಯಕರ ರ‌್ಯಾಲಿ ಸಂದರ್ಭ ಜಿಲ್ಲಾಡಳಿತ ಪಡೆದ ವಾಹನ ಮಾಲೀಕರಿಗೆ ಕೂಡ ಹೆಚ್ಚಿನವರಿಗೆ ಇನ್ನೂ ಬಾಡಿಗೆ ಪಾವತಿಸಲಾಗಿಲ್ಲ ಎಂದು ಟ್ಯಾಕ್ಸಿ ಮಾಲೀಕರು ಆರೋಪಿಸಿದ್ದಾರೆ. ಬಾಡಿಗೆ ವಿಳಂಬದಿಂದ ಬ್ಯಾಂಕಿನ ಸಾಲದ ಮಾಸಿಕ ಕಂತು, ಆರ್‌ಟಿಒ ತೆರಿಗೆ ಸಕಾಲದಲ್ಲಿ ಪಾವತಿಸಲು ವಾಹನ ಮಾಲೀಕರಿಗೆ ಕಷ್ಟವಾಗುತ್ತಿದೆ. ಅನಗತ್ಯವಾಗಿ ದಂಡ ಪಾವತಿಸುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನವರು ವಾಹನ ಮಾಲೀಕರು ಹಾಗೂ ಚಾಲಕರು ಓರ್ವರೇ ಆಗಿದ್ದು, ಅವರ ದೈನಂದಿನ ಮನೆ ಖರ್ಚುಗಳಿಗೂ ಸಮಸ್ಯೆಯಾಗುತ್ತಿದೆ.

    ಎಷ್ಟೆಷ್ಟು ಬಾಡಿಗೆ ?: ಸರ್ಕಾರ 4 ಪ್ಲಸ್ 1, 5 ಪ್ಲಸ್ 1, 6 ಪ್ಲಸ್ 1 ಅಂದರೆ ಇಂಡಿಕಾ, ಡಿಸೈರ್‌ನಂತಹ ವಾಹನಗಳಿಗೆ ದಿನದ 24 ಗಂಟೆ ಅವಧಿಗೆ 2,350 ರೂ. ಹಾಗೂ 9 ಪ್ಲಸ್ 1, 12 ಪ್ಲಸ್ 1 ಅಂದರೆ ಟೆಂಪೋ ಟ್ರಾವೆಲರ್, ಟವೇರ ದಂತಹ ವಾಹನಗಳಿಗೆ ದಿನದ 24 ಗಂಟೆ ಅವಧಿಗೆ 3,350 ರೂ. ಬಾಡಿಗೆಯನ್ನು ಈಗಾಗಲೇ ಸರ್ಕಾರ ನಿಗದಿಪಡಿಸಿದೆ.

    ಗಲಭೆಯ ಸಂದರ್ಭ ಜಿಲ್ಲಾಡಳಿತ ವಶಕ್ಕೆ ಪಡೆದ ಟೂರಿಸ್ಟ್ ವಾಹನಗಳನ್ನು ತಕ್ಷಣ ಅದರ ಮಾಲೀಕರಿಗೆ ಹಿಂತಿರುಗಿಸಬೇಕು. ಬಳಸಿದ ವಾಹನಗಳ ಮಾಲೀಕರಿಗೆ ತಿಂಗಳೊಳಗೆ ಬಾಡಿಗೆ ಹಣ ಪಾವತಿಸುವಂತೆ ಕೋರಿ ಸಂಘಟನೆ ವತಿಯಿಂದ ಸೋಮವಾರ ಅಥವಾ ಮಂಗಳವಾರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು. ಸಮಸ್ಯೆಯನ್ನು ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ.
    ಆನಂದ್ ಕೆ, ಪ್ರಧಾನ ಕಾರ್ಯದರ್ಶಿ, ದ.ಕ.ಜಿಲ್ಲಾ ಟ್ಯಾಕ್ಸಿಮೆನ್, ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್.

    ಪೊಲೀಸ್ ಇಲಾಖೆಯ ಅಗತ್ಯಗಳಿಗೆ ತಕ್ಕಂತೆ ನಿರ್ದಿಷ್ಟ ಖಾಸಗಿ ಟೂರಿಸ್ಟ್ ವಾಹನಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈಗ ಇರುವ ಖಾಸಗಿ ವಾಹನಗಳನ್ನು ಬಿಡುಗಡೆಗೊಳಿಸಿ ಇತರ ವಾಹನಗಳನ್ನು ಬಳಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಬಳಸಬಹುದಾದ ವಾಹನಗಳ ಪಟ್ಟಿಯನ್ನು ಇಲಾಖೆ ಸಿದ್ಧಗೊಳಿಸುತ್ತಿದೆ.
    – ರಾಮಕೃಷ್ಣ ರೈ ಪ್ರಾದೇಶಿಕ ಸಾರಿಗೆ ಅಧಿಕಾರಿ(ಪ್ರಭಾರ), ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts