More

    ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಲಿರುವ ಕೇಂದ್ರ ಸರ್ಕಾರ

    ನವದೆಹಲಿ: ಸರ್ಕಾರಿ ನೌಕರಿಯಲ್ಲಿ ಬಡ್ತಿ ಸಂದರ್ಭದಲ್ಲಿ ನೀಡುವ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೇಳಿಕೆ ನೀಡಲಿದೆ ಎಂದು ಸದನದ ಉಪನಾಯಕ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.

    ಪ್ರಶ್ನೋತ್ತರ ಅವಧಿ ಶುರುವಾಗುತ್ತಿದ್ದಂತೆ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದಲ್ಲಿ ವಿಪಕ್ಷ ಸದಸ್ಯರು ಬಡ್ತಿ ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದ್ದರು. ಅವರ ಈ ನಡೆಯನ್ನು ಡಿಎಂಕೆ ಸೇರಿ ಇತರೆ ಪಕ್ಷಗಳ ಸದಸ್ಯರೂ ದನಿಗೂಡಿಸಿದ್ದರು.

    ಇದನ್ನೂ ಓದಿ:  ಉದ್ಯೋಗ ಮತ್ತು ಬಡ್ತಿಗಳಲ್ಲಿ ಮೀಸಲಾತಿ ಒದಗಿಸುವುದು ರಾಜ್ಯ ಸರ್ಕಾರದ ಹೊಣೆಯಲ್ಲ: ಸುಪ್ರೀಂ ಕೋರ್ಟ್

    ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಪ್ರವೇಶಿಸಿ, ಈ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಬಹುದು. ಸದ್ಯ ಪ್ರಶ್ನೋತ್ತರ ಅವಧಿ ಪ್ರಮುಖವಾಗಿ ನಡೆಯಬೇಕಾಗಿದೆ ಎಂದು ಎಲ್ಲರನ್ನೂ ಕುಳಿತುಕೊಳ್ಳುವಂತೆ ಹೇಳಿದರು.

    ರಾಜನಾಥ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತ, ಸುಪ್ರೀಂ ಕೋರ್ಟ್ ಇತ್ತೀಚೆಗೆ ಬಹಳ ಸೂಕ್ಷ್ಮ ವಿಷಯದ ಬಗ್ಗೆ ತೀರ್ಪು ನೀಡಿದೆ. ಈ ಸಂಬಂಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು ಲೋಕಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ಸದನಕ್ಕೆ ತಿಳಿಸಿದರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಹೊಣೆಗಾರಿಕೆ ಸಚಿವ ತಾವರ್​ಚಂದ್ ಗೆಹ್ಲೋಟ್ ಅವರದ್ದು.

    ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರಿಗೆ ಸದನದ ಕಲಾಪ ಮುಂದುವರಿಸುವುದಕ್ಕೆ ಅವಕಾಶ ನೀಡುವಂತೆ ಕೋರಿದರಲ್ಲದೆ, ಸದನದ ಘನತೆ ಹಾಳುಗೆಡವದಂತೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಸದಸ್ಯ, ಸಂವಿಧಾನಕ್ಕೇ ಬೆದರಿಕೆ ಉಂಟಾಗಿದೆಯಲ್ಲ ಎಂದು ಹೇಳಿದರು. ಕೂಡಲೇ, ಸಂವಿಧಾನಕ್ಕೆ ಅಲ್ಲ ಬೆದರಿಕೆ ಉಂಟಾಗಿರುವುದು, ಸದನದ ಘನತೆಗೆ ಬೆದರಿಕೆ ಉಂಟಾಗಿದೆ ಎಂದು ಸ್ಪೀಕರ್ ಓಂಬಿರ್ಲಾ ಎಚ್ಚರಿಸಿದರು. ಅಲ್ಲದೆ, ಈ ವಿಷಯವನ್ನು ಪ್ರಸ್ತಾಪಿಸದಂತೆ ಯಾವೊಬ್ಬ ಸದಸ್ಯನನ್ನೂ, ಸಚಿವನನ್ನೂ ತಡೆಯುವುದಿಲ್ಲ. ಆದರೆ, ಪ್ರಶ್ನೋತ್ತರ ಅವಧಿ ಹಾಳು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts