More

    ಸರ್ಕಾರದ ಯೋಜನೆಗಳ ಮಾಹಿತಿ ಅರಿವಿರಲಿ : ಮಾರ್ಗದರ್ಶಿ ಅಧಿಕಾರಿ ಸಂಪತ್‌ಕುಮಾರ್ ಕರೆ

    ಕೈಲಾಂಚ : ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆಯಲು ಪ್ರತಿ ಗ್ರಾಮಸಭೆಗಳಲ್ಲಿ ಪಾಲ್ಗೊಂಡು ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾರ್ಗದರ್ಶಿ ಅಧಿಕಾರಿ ಸಂಪತ್‌ಕುಮಾರ್ ತಿಳಿಸಿದರು.

    ಕುಂಭಾಪುರ ಕಾಲನಿಯ ಶಾಲಾ ಆವರಣದಲ್ಲಿ ಗುರುವಾರ ನಡೆದ ವಿಭೂತಿಕೆರೆ ಗ್ರಾಪಂ ಗ್ರಾಮಸಭೆ ಮತ್ತು ಮುಂದುವರಿದ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯಲ್ಲಿ ಮಾತನಾಡಿ, ಗ್ರಾಮಗಳ ಸರ್ವತೋಮುಖ ಅಭಿವೃಧ್ಧಿಗೆ ಗ್ರಾಮಸಭೆಗಳು ಉಪಯುಕ್ತವಾಗಿವೆ ಕಂದಾಯ, ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ, ಪಶು ಸಂಗೋಪನೆ, ಸಮಾಜ ಕಲ್ಯಾಣ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿರುವುದರಿಂದ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗ್ರಾಮಸಭೆಗಳಲ್ಲಿ ತಪ್ಪದೆ ಹಾಜರಾಗಬೇಕು ಎಂದು ಕರೆ ನೀಡಿದರು.

    ಗ್ರಾಪಂ ಅಧ್ಯಕ್ಷೆ ಮಂಗ ಗೌರಮ್ಮ ಮಾತನಾಡಿ, ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಾರ್ವಜನಿಕರು ವಾರ್ಡ್ ಸಭೆ, ಗ್ರಾಮಸಭೆಗಳಲ್ಲಿ ಪಾಲ್ಗೊಂಡು ಮಾಹಿತಿ ಅರಿತು ತಮಗೆ ಬೇಕಾದ ಕಾಮಗಾರಿಗಳ ಕ್ರಿಯಾಯೋಜನೆ ಮಾಡಿಸಿ ನರೇಗಾ ಯೋಜನೆ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.

    ಸಾಮಾಜಿಕ ಲೆಕ್ಕಪರಿಶೋಧನಾ ತಾಲ್ಲೂಕು ಸಂಯೋಜಕಿ ಎಸ್. ಶಿವಮ್ಮ ಮಾತನಾಡಿ, ಗ್ರಾಪಂನಲ್ಲಿ 1950 ಜಾಬ್ ಕಾರ್ಡ್ ನೋಂದಾಯಿತವಾಗಿವೆ. ನರೇಗಾ ಯೋಜನೆಯಲ್ಲಿ ಸಮುದಾಯ ಕಾಮಗಾರಿಗಳಾದ ಕೆರೆ, ಕುಂಟೆ, ಕಾಲುವೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ಜತೆಗೆ ದನದ ಕೊಟ್ಟಿಗೆ, ಬದು ನಿರ್ಮಾಣ, ಕೃಷಿ ಹೊಂಡ ಹೀಗೆ ಹಲವು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

    ಗ್ರಾಪಂ ಉಪಾಧ್ಯಕ್ಷ ಮಲ್ಲೇಶ್, ಪಿಡಿಒ ಬೆಟ್ಟಸ್ವಾಮಿಗೌಡ, ಕಾರ್ಯದರ್ಶಿ ಪದ್ಮಯ್ಯ, ಸದಸ್ಯರಾದ ಮಹದೇಶಸ್ವಾಮಿ, ಭಾಸ್ಕರ್, ರಂಗಸ್ವಾಮಿ, ಮಹದೇವಮ್ಮ, ಪುಟ್ಟಸ್ವಾಮಿ ಜಗದೀಶ್, ಸಿದ್ದರಾಜು, ಸುನಿತ ನಾಗರಾಜ್‌ಸಿಂಗ್, ಲೆಕ್ಕಸಹಾಯಕಿ ಅನುರಾಧ, ಬಿಲ್ ಕಲೆಕ್ಟರ್ ರೇವುಮಲ್ಲೇಶ್, ಚಿಕ್ಕಸ್ವಾಮಿ ಇದ್ದರು.

    ಗ್ರಾಮಸ್ಥರಿಂದ ಅರ್ಜಿ : ಕುಂಭಾಪುರ ಕಾಲನಿಯಲ್ಲಿ ವಾಸಿಸುತ್ತಿರುವ ಬಹುತೇಕ ಜನರಿಗೆ ಇ-ಖಾತೆ ಆಗದಿರುವುದರಿಂದ ಸರ್ಕಾರದ ಮನೆ, ಸಾಲ ಇನ್ನಿತರ ಸೌಲಭ್ಯ ಪಡೆಯಲು ತೊಂದರೆಯಾಗಿದೆ. ಕೆಲವರಿಗೆ ನಿವೇಶನ ಇದ್ದರೂ, ಮನೆ ಕಟ್ಟಿಕೊಳ್ಳಲು ಆಗುತ್ತಿಲ್ಲ. ಕೂಡಲೇ ಪಂಚಾಯಿತಿ ವತಿಯಿಂದ ವಸತಿ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ಅನುದಾನ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಲ್ಲದೆ, ಗ್ರಾಪಂ ಅಧ್ಯಕ್ಷರು, ಕಾರ್ಯದರ್ಶಿಗೆ ಅರ್ಜಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts