More

  ಬಿಹಾರದಲ್ಲಿ 3.5 ಲಕ್ಷ ಗುತ್ತಿಗೆ ಶಿಕ್ಷಕರಿಗೆ ಸರ್ಕಾರಿ ನೌಕರರ ಸ್ಥಾನಮಾನ: ನಿತೀಶ್​ ಕುಮಾರ್​ ನಿರ್ಧಾರದಿಂದ ಏನೇನು ಪ್ರಯೋಜನ?

  ಪಟನಾ: ಬಿಹಾರ ರಾಜ್ಯದ ಗುತ್ತಿಗೆ ಶಿಕ್ಷಕರಿಗೆ ಮಂಗಳವಾರ ಶುಭ ದಿನವಾಗಿ ಹೊರಹೊಮ್ಮಿದೆ. ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಅಂದಾಜು 3.5 ಲಕ್ಷ ಗುತ್ತಿಗೆ ಶಿಕ್ಷಕರಿಗೆ ಸರ್ಕಾರಿ ನೌಕರರ ಸ್ಥಾನಮಾನ ನೀಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

  ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

  ಈ ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಕೂಡಲೇ ಕಳೆದ ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಗುತ್ತಿಗೆ ಶಿಕ್ಷಕರನ್ನು ಸರ್ಕಾರಿ ನೌಕರರ ಸ್ಥಾನಮಾನದೊಂದಿಗೆ ‘ವಿಶೇಷ ಶಿಕ್ಷಕರು’ ಎಂದು ಪರಿಗಣಿಸಲಾಗುವುದು.

  ಈ ಕುರಿತು ರಾಜ್ಯ ಶಿಕ್ಷಣ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ನೀಡಿದೆ’ ಎಂದು ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕ್ಯಾಬಿನೆಟ್ ಸೆಕ್ರೆಟರಿಯೇಟ್) ಎಸ್ ಸಿದ್ಧಾರ್ಥ ತಿಳಿಸಿದ್ದಾರೆ.

  “ಈ ವಿಶೇಷ ಶಿಕ್ಷಕರು ಸರ್ಕಾರಿ ನೌಕರನ ಸ್ಥಾನಮಾನವನ್ನು ಪಡೆದುಕೊಳ್ಳಲು ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಯಾವ ಸರ್ಕಾರಿ ಸಂಸ್ಥೆಯು ಈ ಪರೀಕ್ಷೆಯನ್ನು ನಡೆಸುತ್ತದೆ ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಾಗುತ್ತದೆ. ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಆಗದವರ ಕುರಿತು ನಂತರದ ಹಂತದಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಈ ಶಿಕ್ಷಕರು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಮೂರು ಅವಕಾಶಗಳನ್ನು ಪಡೆಯುತ್ತಾರೆ,” ಎಂದು ಅವರು ತಿಳಿಸಿದರು.

  ಪ್ರಸ್ತುತ ಅಧಿಸೂಚನೆಯ ನಂತರವೂ ಈ ಶಿಕ್ಷಕರ ವೇತನವೂ ಈಗಿನಂತೆಯೇ ಮುಂದುವರಿಯುತ್ತದೆ. ಅರ್ಹತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರವೇ ಬಿಹಾರ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್‌ಸಿ) ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಅವರ ವೇತನ ರಚನೆಯನ್ನು ಪರಿಷ್ಕರಿಸಲಾಗುತ್ತದೆ ಎಂದು ಹೇಳಿದರು.

  ರಾಜ್ಯದಲ್ಲಿ ಒಟ್ಟು 3.5 ಲಕ್ಷ ಗುತ್ತಿಗೆ ಶಿಕ್ಷಕರ ಸಂಖ್ಯೆ ಇದೆ. ಕಳೆದ ಹಲವು ತಿಂಗಳುಗಳಿಂದ ಗುತ್ತಿಗೆ ಶಿಕ್ಷಕರು ಸರ್ಕಾರಿ ನೌಕರರ ಸ್ಥಾನಮಾನಕ್ಕೆ ಆಗ್ರಹಿಸುತ್ತಿದ್ದರು.

  ಗುತ್ತಿಗೆ ಶಿಕ್ಷಕರ ನಿರ್ಧಾರದ ಜೊತೆಗೆ, ಬಿಹಾರ ಕ್ಯಾಬಿನೆಟ್ ರಾಜ್ಯದ ಹೊಸ “ಪ್ರವಾಸೋದ್ಯಮ ನೀತಿ” ಯನ್ನು ಸಹ ಅನುಮೋದಿಸಿತು.

  “ಹೊಸ ನೀತಿಯ ಅಡಿಯಲ್ಲಿ, ಸರ್ಕಾರವು ರಾಜ್ಯದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಪ್ರವಾಸೋದ್ಯಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ರಾಜ್ಯದ ಪ್ರವಾಸಿ ಸ್ಥಳಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ರೆಸಾರ್ಟ್‌ಗಳನ್ನು ಉತ್ತೇಜಿಸಲು ಸರ್ಕಾರವು ಹಣಕಾಸಿನ ನೆರವು ನೀಡುತ್ತದೆ. ಹೆದ್ದಾರಿಗಳ ಉದ್ದಕ್ಕೂ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, ಕ್ಯಾಂಪಿಂಗ್ ಸೈಟ್‌ಗಳು ಮತ್ತು ಸಾಹಸ ಕ್ರೀಡೆಗಳಂತಹ ಸೌಲಭ್ಯಗಳು ಇದರಲ್ಲಿರಲಿವೆ ”ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಳಿದರು.

  ಸ್ವಿಗ್ಗಿ ಪ್ರತಿಸ್ಪರ್ಧಿ ಜೊಮ್ಯಾಟೊದಲ್ಲಿಯೂ ಬಿರಿಯಾನಿಗೇ ಅಗ್ರಸ್ಥಾನ: ಪ್ರತಿದಿನ 9 ಬಾರಿ ಫುಡ್​ ಆರ್ಡರ್​ ಮಾಡಿದ ವ್ಯಕ್ತಿ ಯಾರು ಗೊತ್ತೆ?

  ಕಾಶ್ಮೀರದಲ್ಲಿ ಭಯೋತ್ಪಾದಕರು ಬಳಸುತ್ತಿದ್ದಾರೆ ಚೀನಾ ನಿರ್ಮಿತ ಶಸ್ತ್ರಾಸ್ತ್ರ: ಇವುಗಳು ಉಗ್ರರಿಗೆ ಲಭಿಸುತ್ತಿರುವುದು ಹೇಗೆ?

  ಪ್ರಾಣ ಪ್ರತಿಷ್ಠಾ ಸಮಾರಂಭದ ಸುತ್ತ ರಾಜಕೀಯ: ಎಡಪಕ್ಷ, ಸಿಬಲ್​ ಪಾಲ್ಗೊಳ್ಳುವುದಿಲ್ಲ; ಅಡ್ವಾಣಿ, ಸೋನಿಯಾ, ಖರ್ಗೆ ಏನು ಮಾಡುತ್ತಾರೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts