More

    ಸರ್ಕಾರ ಗೋಕಾಕ ಜಿಲ್ಲೆ ಘೋಷಿಸಲಿ

    ಗೋಕಾಕ: ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಗೋಕಾಕ ಜಿಲ್ಲಾ ರಚನಾ ಹೋರಾಟ ಸಮಿತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

    ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತ ತಲುಪಿ, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಲಾಯಿತು. ನೇತತ್ವ ವಹಿಸಿದ್ದ ಗೋಕಾಕ ಶೂನ್ಯ ಸಂಪಾದನಾಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಗೋಕಾಕನ್ನು ಕೂಡಲೇ ಜಿಲ್ಲಾ ಕೇಂದ್ರವನ್ನಾಗಿ ರಚಿಸಬೇಕು. ಈ ಹಿಂದಿನ ಮೂರು ಆಯೋಗಗಳು ಗೋಕಾಕನ್ನು ಜಿಲ್ಲೆಯನ್ನಾಗಿ ಮಾಡುವಂತೆ ಆಗಿನ ಸರ್ಕಾರಗಳಿಗೆ ವರದಿ ಸಲ್ಲಿಸಿವೆ. 40 ವರ್ಷಗಳಿಂದ ಈ ಭಾಗದ ನಾಗರಿಕರು ಗೋಕಾಕ ಜಿಲ್ಲೆಗಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಗೋಕಾಕ ಜಿಲ್ಲಾ ರಚನೆ ಕೇವಲ ಕನಸಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಗೋಕಾಕ ಜಿಲ್ಲಾ ರಚನೆಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲವಿದೆ. ಹಲವು ವರ್ಷಗಳಿಂದ ಗೋಕಾಕ ಜಿಲ್ಲೆಗಾಗಿ ಸತತ ಹೋರಾಟಗಳು ನಡೆಯುತ್ತಲೇ ಇವೆ. ಅಭಿವದ್ಧಿ ಮತ್ತು ಆಡಳಿತದ ದಷ್ಟಿಯಿಂದ ಗೋಕಾಕ ಜಿಲ್ಲೆ ಆಗಲೇಬೇಕು. ಇದಕ್ಕಾಗಿ ಎಂತಹ ಹೋರಾಟಗಳಿಗೂ ಸಿದ್ಧರಿದ್ದೇವೆ ಎಂದರು.
    ಮುಖಂಡ ಅಶೋಕ ಪೂಜಾರಿ ಮಾತನಾಡಿ, ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಗೋಕಾಕ ಜಿಲ್ಲೆಯನ್ನಾಗಿ ಮಾಡಿ ಅಧಿಸೂಚನೆ ಹೊರಡಿಸಿದ್ದರು. ಆದರೆ, ಕಾರಣಾಂತರಗಳಿಂದ ಗೋಕಾಕ ಜಿಲ್ಲೆಯನ್ನು ತಡೆ ಹಿಡಿದು ಅನ್ಯಾಯ ಮಾಡಲಾಯಿತು. ಜಾರಕಿಹೊಳಿ ಸಹೋದರರು ಮನಸ್ಸು ಮಾಡಿದರೆ ಗೋಕಾಕ ಜಿಲ್ಲೆ ಮಾಡುವುದು ದೊಡ್ಡ ಕೆಲಸವೇನಲ್ಲ. ಸಚಿವ ಸತೀಶ ಜಾರಕಿಹೊಳಿ ಮತ್ತು ಸಹೋದರರಿಗೆ ನಾವೆಲ್ಲ ಕೂಡಿಕೊಂಡು ಶಕ್ತಿ ನೀಡೋಣ ಎಂದರು.

    ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿ ಗೋಕಾಕ ಜಿಲ್ಲೆಯ ಕನಸನ್ನು ನನಸು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಅರಬಾವಿ ಮಠದ ಗುರುಬಸವಲಿಂಗ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಮನ್ನಿಕೇರಿಯ ಮಹಾಂತಸಿದ್ದೇಶ್ವರ ಸ್ವಾಮೀಜಿ, ಕಳ್ಳಿಗುದ್ದಿ-ಕಪರಟ್ಟಿ ಬಸವರಾಜ ಸ್ವಾಮೀಜಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ಹಿರಿಯ ನ್ಯಾಯವಾದಿ ಬಿ.ಆರ್.ಕೊಪ್ಪ, ಮುಖಂಡರಾದ ಸಿದ್ದಲಿಂಗ ದಳವಾಯಿ, ರಾಜೇಂದ್ರ ಸಣ್ಣಕ್ಕಿ, ಅಶೋಕ ಪಾಟೀಲ, ಎಂ.ಆರ್.ಭೋವಿ, ಮಡ್ಡೆಪ್ಪ ತೋಳಿನವರ,ಟಿ.ಆರ್.ಕಾಗಲ, ಎಸ್.ವಿ.ದೇಮಶೆಟ್ಟಿ, ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಸದಾಶಿವ ಗುದಗಗೋಳ, ಮಹಾದೇವ ಶೆಕ್ಕಿ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಎ.ಟಿ.ಗಿರಡ್ಡಿ, ಸತ್ಯಪ್ಪ ಕರವಾಡೆ, ರಮೇಶ ಮಾದರ, ಕುತುಬುದ್ದೀನ್ ಗೋಕಾಕ, ಭೀಮಶಿ ಭರಮನ್ನವರ, ಮಹಾಂತೇಶ ಕಡಾಡಿ, ಲಖನ್ ಸವಸುದ್ದಿ, ದಸ್ತಗೀರ್ ಪೈಲವಾನ ಇತರರು ಇದ್ದರು. ನ್ಯಾಯವಾದಿಗಳು ಕಾರ್ಯಕಲಾಪಗಳಿಂದ ದೂರ ಉಳಿದು ಹೋರಾಟದಲ್ಲಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts