More

    ಟೈಲರ್‌ಗಳ ಹಿತ ಕಾಯಲು ಸರ್ಕಾರ ಬದ್ದ: ಸಿಎಂ ಸಿದ್ದರಾಮಯ್ಯ ಭರವಸೆ

    ಬೆಂಗಳೂರು: ಟೈಲರ್‌ಗಳ ಕ್ಷೇಮನಿಧಿ ಮಂಡಳಿ ರಚನೆ ಬಗ್ಗೆ ಕಾರ್ಮಿಕ ಸಚಿವರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

    ಜಯನಗರದ ಶಾಲಿನಿ ಮೈದಾನದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್‌ನ (ಕೆಸ್‌ಟಿಎ) ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರಾಗಿರುವ ಟೈಲರ್‌ಗಳ ಹಿತ ಕಾಯಲು ಸರ್ಕಾರ ಬದ್ದವಾಗಿದೆ. ಶ್ರಮಿಕ ವರ್ಗದ ಜನ ಈ ನಾಡಿನ ಆಸ್ತಿ. ಅಸಂಘಟಿತ ಕಾರ್ಮಿಕರಾಗಿರುವ ಟೈಲರ್‌ಗಳ ರಕ್ಷಣೆ ನಮ್ಮ ಕರ್ತವ್ಯ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಯವನ್ನು ನೀಡಿದರು.

    ಇಂದು ಹುತಾತ್ಮರ ದಿನ. ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಶ್ರೀರಾಮನ ಅಪಾರ ಭಕ್ತ ಮಹಾತ್ಮಗಾಂಧಿಯನ್ನು ನಾಥೂರಾಂ ಗೋಡ್ಸೆ ಕೊಂದು ಹಾಕಿದ ದಿನ. ಹಂತಕ ಗೋಡ್ಸೆ ಬೆಂಬಲಕ್ಕೆ ನಿಂತಿರುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಸಮಾಜ ವಿರೋಧಿಗಳು ಎಂದರು.

    ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, 25 ವರ್ಷಗಳ ಹಿಂದೆ ಉಲ್ಲಾಳದಲ್ಲಿ ನಮ್ಮ ತಂದೆಯವರು ಉದ್ಘಾಟಿಸಿದ ಸಂಘಕ್ಕೆ ತಮ್ಮ ಶ್ರಮ ಮತ್ತು ಪ್ರಾಮಾಣಿಕತೆಯಿಂದ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದೀರಿ. ಅಂದಿನ ಸಮಾರಂಭದಲ್ಲಿ ಕೊನೆಯ ಸಾಲಿನಲ್ಲಿ ಕುಳಿತಿದ್ದ ನನ್ನನ್ನು ಇಂದು ವಿಧಾನಸಾಧ್ಯಕ್ಷನಾಗಲು ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಕಾರಣ ಎಂದು ತಿಳಿಸಿದರು.

    ಸರ್ಕಾರವು ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಶಾಸಕರು ಕೂಡ ಈ ವಿಚಾರವಾಗಿ ಸದನದಲ್ಲಿ ದನಿ ಎತ್ತುವಂತೆ ತಿಳಿಸಿದರು.

    ವಸತಿ ಸಚಿವ ಜಮೀರ್ ಅಹಮದ್, ಶೃಂಗೇರಿ ಶಾಸಕ ಟಿ.ಆರ್. ರಾಜುಗೌಡ, ಅಸೋಸಿಯೇಷನ್ ಅಧ್ಯಕ್ಷ ಬಿ.ಎ. ನಾರಾಯಣ್, ಸಂಸ್ಥೆಯ ಸ್ಥಾಪಕ ಸಮಿತಿ ಸದಸ್ಯ ವಸಂತ್ ಬಿ. ಸೇರಿ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಕೆಎಸ್‌ಟಿಎ ಪ್ರಮುಖ ಬೇಡಿಕೆಗಳು

    – ಟೈಲರ್ಸ್ ಕ್ಷೇಮನಿಧಿ ಸ್ಥಾಪಿಸಿ ಟೈಲರ್‌ಗಳನ್ನು ಜವಳಿ ನಿಗಮಕ್ಕೆ ಸೇರಿಸಬೇಕು
    – ಟೈಲರ್‌ಗಳ ಭವಿಷ್ಯ ನಿಧಿ ಮತ್ತು ಪಿಂಚಣಿ ಯೋಜನೆ ಜಾರಿಗೊಳಿಸಬೇಕು
    – ಟೈಲರ್‌ಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ ನೀಡಬೇಕು
    – ಟೈಲರ್‌ಗಳ ಹೊಲಿಗೆ ಯಂತ್ರ ಖರೀದಿ, ಮನೆ ನಿರ್ಮಾಣ ಮತ್ತು ಮನೆ ರಿಪೇರಿಗೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ಕಲ್ಪಿಸಬೇಕು
    – ಆರೋಗ್ಯ ವಿಮೆ, ಹೆಣ್ಣು ಮಕ್ಕಳ ವಿವಾಹ ಮತ್ತು ಹೆರಿಗೆ ಭತ್ಯೆ ನೀಡಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts