More

    ಸೇನಾನಿಗಳಿಗೆ ಗೌರವಧನ ಬಾಕಿ : ಸರ್ಕಾರ ಗೌರವಧನ ಕೊಡದಿದ್ದರೂ ಕರೊನಾ ಸಂಕಷ್ಟ ಸಮಯದಲ್ಲಿ ಕೆಲಸ.

    ಬಿಡದಿ: ಸರ್ಕಾರ ಗೌರವಧನ ಕೊಡದಿದ್ದರೂ ಕರೊನಾ ಸಂಕಷ್ಟ ಸಮಯದಲ್ಲಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಶ್ಲಾಸಿದರು.
    ಬಿಡದಿ ಪಟ್ಟಣದ ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರೊನಾ ವಾರಿಯರ್ಸ್‌ಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ರಾಜ್ಯದ ಜನತೆ ಕರೊನಾಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಾಣ ಉಳಿಸಿ ಎಂದು ಗೋಳಾಡುತ್ತಿರುವ ಸ್ಥಿತಿ ನೋಡಲಾಗುತ್ತಿಲ್ಲ. ಇಂತಹ ಸಮಯದಲ್ಲಿ ಸೋಂಕು ನಿಯಂತ್ರಣಕ್ಕೆ ಬಿಜೆಪಿ ಸರ್ಕಾರ ಸಮರ್ಥವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಕರೊನಾ ಸೇನಾನಿಗಳಾದ ಆಶಾ ಕಾರ್ಯಕರ್ತೆಯರು ಮತ್ತು ಆಂಬುಲೆನ್ಸ್ ಚಾಲಕರಿಗೆ ಗೌರವಧನ ನೀಡದ ಸರ್ಕಾರ ಖಜಾನೆಗೆ ಹಣ ಹೊಂದಿಸುವುದೇ ಮುಖ್ಯ ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.

    ರಾಜ್ಯದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಶೇಕಡವಾರು ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಸಾವಿನ ಸಂಖ್ಯೆಗಳು ಹೆಚ್ಚಾಗಿವೆ. ಹಾಗಾಗಿ ಸರ್ಕಾರ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಿ, ಪಾಸಿಟಿವ್ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಿದರೆ ಮಾತ್ರ ಸೋಂಕು ನಿಯಂತ್ರಣ ಸಾಧ್ಯವಾಗಲಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

    ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಕರೊನಾ 2ನೇ ಅಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಜನರು ಕಣ್ಣ ಮುಂದೆಯೇ ಸಾಯುತ್ತಿದ್ದರೂ ಸರ್ಕಾರ ಕೈಚೆಲ್ಲಿ ಕುಳಿತಿದೆ. ಇಂತಹ ಸಮಯದಲ್ಲಿ ಕುಟುಂಬದ ಜವಾಬ್ದಾರಿಯನ್ನು ನಾವೇ ವಹಿಸಿಕೊಂಡು ಕರೊನಾ ಕಟ್ಟಿಹಾಕಬೇಕಿದೆ. ಹಾಗಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ತುಂಬಲು 500 ರೂ.ನಂತೆ ಮೂರು ತಿಂಗಳು ಪ್ರೋತ್ಸಾಹಧನ ನೀಡಲಾಗುವುದು ಎಂದರು.

    ಕಾರ್ಯಕ್ರಮ ಆಯೋಜಕ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ. ಉಮೇಶ್ ಮಾತನಾಡಿ, ಆಶಾ, ಅಂಗನವಾಡಿ, ಪೌರಕಾರ್ಮಿಕರು ಸೇರಿ ಒಟ್ಟು 206 ಕರೊನಾ ಸೇನಾನಿಗಳಿಗೆ ವೈಯಕ್ತಿಕವಾಗಿ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.
    ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್. ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಪುಟ್ಟಯ್ಯ, ಪುರಸಭೆ ಸದಸ್ಯ ವೈ.ರಮೇಶ್, ದಿಶಾ ಸದಸ್ಯೆ ಕಾವ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಯು.ನರಸಿಂಹಯ್ಯ, ತಾಪಂ ಮಾಜಿ ಸದಸ್ಯ ಪ್ರಕಾಶ್, ಆರ್‌ಎಸ್‌ಎಸ್‌ಬಿಎನ್ ನಿರ್ದೇಶಕ ಜೀವನ್‌ಬಾಬು ಮತ್ತಿತರರು ಭಾಗವಹಿಸಿದ್ದರು.

    ಒಂದೂವರೆ ವರ್ಷ ಎಚ್ಚರಿಕೆಯಿಂದಿರಿ : ಕರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ, ಆರೋಗ್ಯ, ಪೋಲೀಸ್ ಇಲಾಖೆ ಸಿಬ್ಬಂದಿ, ಪತ್ರಕರ್ತರು, ಪೌರಕಾರ್ಮಿಕರು ನಿಮ್ಮಗಳ ಕರ್ತವ್ಯದ ಜತೆಗೆ ನಿಮ್ಮ ಕುಟುಂಬದ ರಕ್ಷಣೆಗೆ ಆದ್ಯತೆ ನೀಡಿ. ಇದರಿಂದ ಸಮಾಜ ಉಳಿಯಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದ ಸುರೇಶ್, ಇನ್ನೂ ಒಂದೂವರೆ ವರ್ಷ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts