More

    ಕನ್ನಡಕ್ಕಾಗಿ ನೈಜ ಕಾಳಜಿ ತೋರದ ಸರ್ಕಾರಗಳು: ಟಿ.ಎಸ್. ನಾಗಾಭರಣ ಬೇಸರ

    ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಯಾವ ಸರ್ಕಾರಗಳೂ ಕನ್ನಡದ ಬಗ್ಗೆ ನಿಜವಾದ ಕಾಳಜಿ ತೋರಿಸಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.

    ವೀರಲೋಕ ಸಂಸ್ಥೆ ಬುಧವಾರ ಡಾ.ಸಿ. ಅಶ್ವತ್ಥ್ ಕಲಾಭವನದಲ್ಲಿ ಆಯೋಜಿಸಿದ್ದ ‘ಹೊತ್ತಿಗೆ ದಿಬ್ಬಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಕ್ಕೆ 50 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಆದರೆ, ಈ 50 ವರ್ಷಗಳಲ್ಲಿ ಯಾವ ಸರ್ಕಾರಗಳೂ ಕನ್ನಡದ ಬಗ್ಗೆ ನೈಜ ಕಾಳಜಿ ತೋರಿಸಿಲ್ಲ. ಸಂವಿಧಾನದ ಅಡಿ 18 ರಾಷ್ಟ್ರ ಭಾಷೆಗಳು ಗುರುತಿಸಿಕೊಂಡಿದ್ದರೂ ಆಎಲ್ಲ ಭಾಷೆಗಳಿಗೆ ಸಮಾನ ಸವಲತ್ತುಗಳು ದೊರೆತಿಲ್ಲ. ಇಲ್ಲಿನ ಸರ್ಕಾರಗಳೂ ಭಾಷೆ ಸಂಬಂಧ ಗಟ್ಟಿಯಾಗಿ ಕೆಲಸ ಮಾಡುತ್ತಿಲ್ಲ. ತಂತ್ರಾಂಶದಲ್ಲಿ ಕನ್ನಡ ಬಳಕೆ ಸೇರಿ ವಿವಿಧ ಕನ್ನಡ ಪರ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡುವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದರು.

    ಸಾಹಿತಿ ಮೊಗಳ್ಳಿ ಗಣೇಶ್ ಮಾತನಾಡಿ, ಕನ್ನಡ ಭಾಷೆಯ ಸ್ಥಿತಿಗತಿ ಬಗ್ಗೆ ಯಾರೂ ಆತಂಕ ಪಡಬಾರದು. ಭಾಷೆ ಒಂದು ಹೊಳೆಯಾಗಿದ್ದು, ನಿರಂತರ ಬದಲಾಗುತ್ತದೆ. ಸುಂದರವಾದ ಕನ್ನಡವನ್ನು ಇನ್ನಷ್ಟು ಉಳಿಸಿ- ಬೆಳೆಸಲು ನಾವೆಲ್ಲರೂ ಸೇರಿ ಪರಿಣಾಮಕಾರಿಯಾಗಿ ಕೆಲಸ ಮಾಡೋಣ ಎಂದರು. ‘ಜನಮಿತ್ರ ಅರಸು’, ‘ವೀರ ಸಿಂಧೂರ ಲಕ್ಷ್ಮಣ’, ‘ಹೂವಿನಕೊಲ್ಲಿ’, ‘ಸಹಭಾಷಿಕರ ಕನ್ನಡ ಪ್ರೇಮ’, ‘ಕಾಗೆ ಮೇಷ್ಟ್ರು’, ‘ನೀಲಿ ಮತ್ತು ಸೇಬು’, ‘ಚಿತ್ರ ವಿಚಿತ್ರ’, ‘ಅಮೋಘವರ್ಷ’, ‘ಕನಸುಗಳ ಶ್ರಾದ್ಧ’, ‘ಹಂಸಾಕ್ಷರ’ ಹಾಗೂ ‘ನದಿಯೊಂದು ಕಡಲ ಹುಡುಕುತ್ತ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಸಾಹಿತಿಗಳಾದ ವಿದ್ಯಾಭೂಷಣ, ಡಾ.ವಿಜಯಾ, ಕೆ.ಎನ್. ಗಣೇಶಯ್ಯ, ಚ. ಸರ್ವಮಂಗಳಾ ಮತ್ತಿತರರಿದ್ದರು.

    ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ ಕುರಿತು ರಾಮಲಿಂಗಾರೆಡ್ಡಿ ಹೇಳಿದ್ದು ಹೀಗೆ

    ಅವಕಾಶ ನೀಡಲಿಲ್ಲ:
    ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಕವಿ ಬೊಳುವಾರು ಮಹಮದ್ ಕುಂಞಿ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು. ಇಸ್ರೇಲ್ ಸೈನಿಕರೇ, ನೀವು ವೀರಾಧಿವೀರರು. ನಿಮ್ಮ ಪ್ರಕಾರ, ಮುಸ್ಲಿಂರೆಲ್ಲ ಭಯೋತ್ಪಾದಕರು ಎಂದು ಹೇಳುತ್ತೀರಿ. ಇದು ಸರಿಯಲ್ಲ. ಪ್ಯಾಲೆಸ್ಟೀನ್ ಪರವಾಗಿ ಒಂದು ಸಭಾಂಗಣದಲ್ಲಿ ನಾಲ್ಕು ಮಾತನಾಡಲು ನಾವೇ ಆಯ್ಕೆ ಮಾಡಿದ ಸರ್ಕಾರ ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts