More

    ಉಗ್ರಾಣ ನಿಗಮದ ಅವ್ಯವಹಾರ ತನಿಖೆ; ಐಎಎಸ್​ ಸೇರಿ ವಿವಿಧ ವೃಂದದ ಅಧಿಕಾರಿಗಳ ವಿರುದ್ಧ ಕ್ರಮ

    ಬೆಂಗಳೂರು: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಆರ್​ಐಡಿಎಫ್ ಯೋಜನೆ ಕಾಮಗಾರಿಗಳಲ್ಲಿ ಆರ್ಥಿಕ ಅಶಿಸ್ತು, ಅವ್ಯವಹಾರ, ವಿಳಂಭ ಧೋರಣೆ, ಕಾನೂನು ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗಳು ಸೇರಿ ವಿವಿಧ ವೃಂದದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆ ಹೂಡಲು ಸಚಿವ ಸಂಪುಟ ಸಭೆ ತೀರ್ವನಿಸಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಉಗ್ರಾಣ ನಿಮಗದಲ್ಲಿ 2015-16ರಲ್ಲಿ ನಡೆದಿರುವ ಹಣ ದುರ್ಬಳಕೆಯನ್ನು ಸಚಿವ ಸಂಪುಟ ಸಭೆ ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರ ಕೈಗೊಂಡಿದೆ.

    ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, ಉಗ್ರಾಣ ನಿರ್ಮಾಣ ಅಪೂರ್ಣಗೊಂಡು ಆರ್ಥಿಕ ಅಶಿಸ್ತು ಕಂಡು ಬಂದಿತ್ತು. ಅದರ ಜತೆ ಹಲವಾರು ಅಧಿಕಾರಿಗಳು ಬಹಳಷ್ಟು ಅವ್ಯವಹಾರ ಎಸಗಿರುವುದು, ಕಾನೂನು ಬಾಹಿರ ಕೃತ್ಯ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ನಿರ್ಣಯಿಸಲಾಗಿದೆ ಎಂದರು.

    ಯಾವ ಯಾವ ಅಧಿಕಾರಿಗಳು: ಐಎಎಸ್ ಅಧಿಕಾರಿಗಳಾದ ರಾಜೇಶ್​ಗೌಡ, ಜಯವಿಭವಸ್ವಾಮಿ, ಎಸ್.ನವೀನ್​ಕುಮಾರ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಹನುಮಂತರಾಯಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್. ಅಲಿಪುರ ವಿರುದ್ಧ ಹಾಗೂ ಕಾಮಗಾರಿ ವಿಳಂಬಕ್ಕೆ ಕಾರಣರಾದ ಸಹಕಾರ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

    ಆರೋಪ ಏನು?: ಅಧಿಕಾರಿಗಳು ಉಗ್ರಾಣ ಅಪೂರ್ಣಗೊಳ್ಳಲು ಹಾಗೂ ವಿಳಂಬಕ್ಕೆ ಕಾರಣರಾಗಿರುವುದಲ್ಲದೆ, ಗುತ್ತಿಗೆದಾರರಿಗೆ ನಿಯಮ ಮೀರಿ ಹಣ ಪಾವತಿ ಮಾಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಶೇ.80 ಹಣವನ್ನು ಮುಂಗಡ ನೀಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

    ಮೆದುಳಿನ ಆರೋಗ್ಯಕ್ಕೆ ವಿಶಿಷ್ಟ ಯೋಜನೆ: ನಿಮ್ಹಾನ್ಸ್ ಸಹಯೋಗದೊಂದಿಗೆ ಮೆದುಳಿನ ಆರೋಗ್ಯ, ಆರೈಕೆ ಸೇವೆಗಳನ್ನು ಉತ್ತೇಜಿಸಲು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಬ್ರೇನ್ ಹೆಲ್ತ್ ಇನಿಶಿಯೇಟಿವ್ ಎಂಬ ವಿಶಿಷ್ಟವಾದ ಯೋಜನೆಯನ್ನು 25 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಯಶಸ್ವಿಯಾದ ಬಳಿಕ ರಾಜ್ಯಾದ್ಯಂತ ಹಬ್ ಮತ್ತು ಸ್ಪೋಕ್ಸ್ ಮಾದರಿಯಲ್ಲಿ ಬ್ರೇನ್ ಹೆಲ್ತ್ ಕ್ಲೀನಿಕ್​ಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

    ಯೋಜನೆಯ ಉದ್ದೇಶಗಳು: ನರಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಹಂತಗಳಲ್ಲಿ ಸಮಾನ ಆರೈಕೆಗಾಗಿ ತನ್ಮೂಲಕ ಮೆದುಳು ಆರೋಗ್ಯವನ್ನು ರಕ್ಷಿಸಲು ಸಾಕ್ಷ್ಯ ಆಧಾರಿತ ಮಾದರಿಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಸಾಲಿನಲ್ಲಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ 10 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಬ್ರೇನ್ ಹೆಲ್ತ್ ಕ್ಲಿನಿಕ್​ಗಳನ್ನು 25 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು.

    ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ: ರಕ್ತಹೀನತೆಮುಕ್ತ (ಅನಿಮಿಯಾ ಮುಕ್ತ) ಪೌಷ್ಟಿಕ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಣೆಗೆ ಸಾಮೂಹಿಕ ತಪಾಸಣೆ. ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಬಲಪಡಿಸುವುದು, ಪೂರಕವಾಗಿ ಕಬ್ಬಿಣಾಂಶ ಫೋಲಿಕ್ ಆಮ್ಲ ನೀಡುವಿಕೆ ಮತ್ತು ಜಂತು ಹುಳುವಿನ ನಿವಾರಣೆ ಯೋಜನೆ ಉದ್ದೇಶ. ರಾಜ್ಯದ 102 ತಾಲೂಕುಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಊಟ ಒದಗಿಸಲು ಒಟ್ಟು 185.74 ಕೋಟಿ ರೂ.ವೆಚ್ಚದಲ್ಲಿ ರಕ್ತಹೀನತೆಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

    ಯೋಜನೆ ಜಾರಿ ಉದ್ದೇಶ: ಶೇ.57.2 ಮಹಿಳೆಯರು ಮತ್ತು ರಕ್ತ ಹೀನತೆಯಿಂದ ಬಳಲುತ್ತಿರುವವರು, ಶೇ.52.2 ಗರ್ಭಿಣಿಯರು, ಶೇ.67.1 ಹದಿಹರೆಯದ ಹೆಣ್ಣುಮಕ್ಕಳು, ಸಂತಾನೋತ್ಪತ್ತಿ ವಯಸ್ಸಿನ (15-49 ವರ್ಷ) ಮಹಿಳೆಯರಲ್ಲಿ ಶೇ.47.8, 6-9 ವರ್ಷ ವಯಸ್ಸಿನ ಶೇ.65.5 ಮಕ್ಕಳು, ಹದಿಹರೆಯದ ಮಕ್ಕಳಲ್ಲಿ ರಕ್ತ ಹೀನತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ.

    ನೂತನ ನೀತಿಗೆ ಒಪ್ಪಿಗೆ: ಗೃಹ ಮಂಡಳಿ ಅನುಪಾತದಡಿ ಭೂಮಿ ಪಾಲುದಾರಿಕೆ ಪಡೆಯಲು ರೂಪಿಸಿರುವ ನೂತನ ನೀತಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಗೃಹ ಮಂಡಳಿ ಮತ್ತು ಭೂ ಮಾಲೀಕರ ಅನುಪಾತವನ್ನು ಪ್ರಕರಣದಿಂದ ಪ್ರಕರಣಕ್ಕೆ ನಿಗದಿಪಡಿಸಲು ಈ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಏಕ ರೂಪದ ನೀತಿ ಇತ್ತು.

    ಇದರಿಂದ ಕೆಲವು ಕಡೆ ಭೂ ಮಾಲೀಕರಿಗೆ ಅನ್ಯಾಯವಾಗುತ್ತದೆ ಎಂಬ ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ಏಕರೂಪದ ನೀತಿಯನ್ನು ಕೈಬಿಟ್ಟು ಪ್ರಕರಣವಾರು ಅನುಪಾತ ನಿರ್ಣಯಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

    862 ಕೋಟಿ ಪರಿಷ್ಕೃತ ಅಂದಾಜು

    ರಾಜ್ಯದಲ್ಲಿ 163 ಉಗ್ರಾಣಗಳ ನಿರ್ಮಾಣ ಕಾರ್ಯ ಹಾಗೂ 89 ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 87 ಉಗ್ರಾಣ ಹಾಗೂ 40 ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ 862.37 ಕೋಟಿ ರೂಪಾಯಿ ಪರಿಷ್ಕೃತ ಅಂದಾಜು ಮಾಡಲಾಗಿದೆ. ಮಧ್ಯಸ್ಥಿಕೆ ತೀರ್ಪಿನ ಪ್ರಕಾರ ಸಂಧಾನದಲ್ಲಿ ಒಪ್ಪಿರುವಂತೆ ಗುತ್ತಿಗೆದಾರರಿಗೆ ಪಾವತಿ ಮಾಡಲು 126.34 ಕೋಟಿ ರೂ., ಮಧ್ಯಸ್ಥಿಕೆ ಕ್ಲೇಮು 434.95 ಕೋಟಿ ರೂ. ಇದೆ. 2023-24ನೇ ಸಾಲಿನಲ್ಲಿ ಗುತ್ತಿಗೆದಾರರಿಗೆ ಮೊದಲಿನ ಕಾಮಗಾರಿಗಳಿಗೆ ಪಾವತಿಸಲು 129.09 ಕೋಟಿ ರೂ., ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಗೊಳಿಸಲು 80 ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿದೆ ಎಂದು ವಿವರಿಸಿದರು.

    ಮುಖ್ಯಾಂಶಗಳು

    • ಬಳ್ಳಾರಿ ನಗರದ ಪಾರ್ವತಿ ನಗರ ಬಡಾವಣೆಯಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ವಣಕ್ಕೆ 121.90 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.
    • ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ತೈಲಗೆರೆ ಗ್ರಾಮದಲ್ಲಿ 27 ಎಕರೆ 2 ಗುಂಟೆ ಜಮೀನನ್ನು ಶೇ.50:50 ಅನುಪಾತದಲ್ಲಿ, ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಗಂಗಾಪುರ, ಕೋಳಾರ, ಚೆನ್ನೇನಹಳ್ಳಿ, ಮಾರಸಂಡಹಳ್ಳಿ ಮತ್ತು ಗುಡ್ಡದಚೆನ್ನೇನಹಳ್ಳಿ ಗ್ರಾಮಗಳಲ್ಲಿ 111 ಎಕರೆ 17 ಗುಂಟೆ ಜಮೀನನ್ನು ಶೇ.50:50 ಅನುಪಾತದಲ್ಲಿ ಹಾಗೂ ಉಳಿದ ಎಲ್ಲ ಪ್ರದೇಶಗಳಲ್ಲಿ ಶೇ.60:40ರ ಅನುಪಾತದ ಪಾಲುದಾರಿಕೆಯಡಿ ಭೂ ಮಾಲಕರಿಂದ ಜಮೀನು ಪಡೆದು ವಸತಿ ಯೋಜನೆ ಕೈಗೊಳ್ಳಲು ಒಪ್ಪಿಗೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts