More

    ಸರ್ಕಾರದ ಮಾರ್ಗಸೂಚಿ ಪಾಲಿಸಿ

    ಬೆಳಗಾವಿ: ಕರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಲಾಕ್‌ಡೌನ್ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ತಾವೆಲ್ಲರೂ ಪಾಲಿಸಬೇಕು. ಅಲ್ಲದೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೆ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಮನವಿ ಮಾಡಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ತಬ್ಲಿಘಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರು ಹಾಗೂ ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ ಸೋಂಕು ಕಂಡು ಬಂದಿದೆ. ಹೀಗಾಗಿ ಅವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದರು.

    ಕ್ವಾರಂಟೈನ್‌ನಲ್ಲಿ ಇದ್ದವರು ನಿಗದಿತ ಅವಧಿ ಪೂರ್ಣಗೊಳ್ಳುವವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವೈದ್ಯರು ಮತ್ತು ಸಿಬ್ಬಂದಿ ಜತೆ ಸಹಕರಿಸುವಂತೆ ಅವರಿಗೆ ತಾವುಗಳು ತಿಳಿವಳಿಕೆ ನೀಡಬೇಕು ಎಂದು ಸಮಾಜದ ಮುಖಂಡರಿಗೆ ತಿಳಿಸಿದರು.

    ಮನೆಯಲ್ಲೇ ಪ್ರಾರ್ಥಿಸಿ: ಪವಿತ್ರ ರಮ್ಜಾನ್ ಮಾಸದ ಹಿನ್ನೆಲೆಯಲ್ಲಿ ಸಮಾಜದ ಜನರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಕರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಸಮಾಜದ ಜನರಿಗೆ ಮನವರಿಕೆ ಮಾಡಬೇಕು ಎಂದರು.

    ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಪೊಲೀಸರು ಲಾಕ್‌ಡೌನ್ ಸಂದರ್ಭದಲ್ಲಿ ಜನಸಂಚಾರ ನಿರ್ಬಂಧಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ತಾವುಗಳೂ ಸಹ ಪೊಲೀಸರಿಗೆ ಸಹಕರಿಸಬೇಕು ಎಂದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts