More

    ಭೂಸ್ವಾಧೀನಕ್ಕೆ ಸರ್ಕಾರದ ಆದೇಶ

    ಹುಬ್ಬಳ್ಳಿ: ಮೂರು ದಶಕಗಳಿಂದ ಸಂಪರ್ಕ ರಸ್ತೆ ಇಲ್ಲದೆ ಪರದಾಡುತ್ತಿದ್ದ ಇಲ್ಲಿಯ ಅಮರಗೋಳ ಮಹಾತ್ಮ ಗಾಂಧಿ ಆಶ್ರಯ ಬಡಾವಣೆಯ ಜನರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಂತಾಗಿದೆ. ರಸ್ತೆ ನಿರ್ವಣಕ್ಕೆ ಬೇಕಾದ ಅಗತ್ಯ ಜಮೀನು ಖರೀದಿಗೆ ಸರ್ಕಾರ ಅಸ್ತು ಎಂದಿದೆ.

    1991ರಲ್ಲಿ ರಚನೆಯಾದ ಆಶ್ರಯ ಬಡಾವಣೆಯ ಜನರು ಅತಿ ಚಿಕ್ಕ ನಾಲಾವನ್ನೇ ದಾರಿಯನ್ನಾಗಿ ಮಾಡಿಕೊಂಡು ಅದರಲ್ಲೇ ಸಂಚರಿಸುತ್ತಿದ್ದರು. ಮಳೆಗಾಲದಲ್ಲಿ ಮಾರ್ಗ ಬಂದ್ ಆಗಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು.

    ಸಂಪರ್ಕ ರಸ್ತೆಗಾಗಿ ಅಂದಿನಿಂದ ಇಂದಿನವರೆಗೆ ಸಾಕಷ್ಟು ಹೋರಾಟ, ಪ್ರತಿಭಟನೆ ನಡೆದರೂ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ. ಅಂದು ಬಡಾವಣೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಣ್ಣ ಕಾಲು ದಾರಿಯನ್ನೇ (ನಾಲಾ) ಮಾರ್ಗ ಮಾಡಿಕೊಳ್ಳಲಾಯಿತು. ಈಗ ಈ ಬಡಾವಣೆಯಲ್ಲಿ ಸುಮಾರು ಮೂರ್ನಾಲ್ಕು ಸಾವಿರ ಜನರು ವಾಸಿಸುತ್ತಿದ್ದಾರೆ. ಬಡಾವಣೆ ಪಕ್ಕದಲ್ಲೇ ಜಡ್ಜ್ ಕ್ವಾರ್ಟರ್ಸ್, ಕೆಎಚ್​ಬಿ ಕಾಲನಿಗಳು ಬಂದಿವೆ. ಇದರಿಂದ ಸಂಪರ್ಕ ರಸ್ತೆ ಅತ್ಯಂತ ಅವಶ್ಯಕವಾಗಿತ್ತು.

    ಶಾಸಕ ಅರವಿಂದ ಬೆಲ್ಲದ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಅವರಿಗೆ ಹಲವು ಬಾರಿ ಸ್ಥಳೀಯರು ಮನವಿ ಮಾಡಿದ್ದರು. ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕೆಂದು ಜನಪ್ರತಿನಿಧಿಗಳು ಸಹ ಚಿಂತನೆ ನಡೆಸಿದ್ದರು. ಮಹಾನಗರ ಪಾಲಿಕೆಯಲ್ಲಿ ಸಂಪರ್ಕ ರಸ್ತೆ ಕಲ್ಪಿಸುವ ಬಗ್ಗೆ ಠರಾವ್ ಆಗಿದ್ದರೂ ಯಾವುದೇ ಕ್ರಮ ಆಗಿರಲಿಲ್ಲ. ಸಂಪರ್ಕ ರಸ್ತೆಗೆ ಒಂದಿಷ್ಟು ಭೂಮಿಯ ಅಗತ್ಯವಿತ್ತು. ಆದರೆ, ನಾಲಾ ಅಕ್ಕಪಕ್ಕದಲ್ಲಿ ಖಾಸಗಿ ಜಮೀನುಗಳಿದ್ದವು. ಈ ಜಮೀನುಗಳ ಮಾಲೀಕರ ಮನವೊಲಿಸಬೇಕಾಗಿತ್ತು. ಇದನ್ನೆಲ್ಲ ಜನಪ್ರತಿನಿಧಿಗಳು ಮಾಡಿದರೂ ಅವರಿಗೆ ಕೊಡಬೇಕಾದ ಪರಿಹಾರ ನೀಡುವಲ್ಲಿ ತಾಂತ್ರಿಕ ತೊಂದರೆ ಎದುರಾಗಿತ್ತು.

    ಸದ್ಯದ ಮಾರುಕಟ್ಟೆ ಬೆಲೆಯಲ್ಲಿ ಜಮೀನು ಖರೀದಿ ಮಾಡುವುದು ಮಹಾನಗರ ಪಾಲಿಕೆಗೆ ಸಾಧ್ಯವಿರಲಿಲ್ಲ. ಸರ್ಕಾರದ ಬೆಲೆಗೆ ಮಾಲೀಕರು ಒಪ್ಪಿರಲಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಲವು ಸಭೆಗಳು ನಡೆದು ಬೆಲೆ ನಿರ್ಧಾರದ ಬಗ್ಗೆ ರ್ಚಚಿಸಲಾಗಿತ್ತು. ಕೊನೆಗೆ ಯೋಗ್ಯ ಬೆಲೆ ನೀಡುವ ತೀರ್ವನಕ್ಕೆ ಬಂದು ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಕಳಿಸಲಾಗಿತ್ತು. ಜಮೀನು ಮಾಲೀಕರು ಸಹ ಒಪ್ಪಿಗೆ ನೀಡಿದ್ದರು.

    ಇಲಾಖೆ ಆದೇಶ

    ಅಮರಗೋಳ ಗ್ರಾಮದ ಸರ್ವೆ ನಂಬರ್ 248ರಲ್ಲಿನ ಆಶ್ರಯ ಬಡಾವಣೆಗೆ ಸಂಪರ್ಕ ರಸ್ತೆ ಕಲ್ಪಿಸುವ ಸಲುವಾಗಿ ಗ್ರಾಮದ ಖಾಸಗಿ ಒಡೆತನದಲ್ಲಿರುವ 8 ಗುಂಟೆ 12 ಆಣೆ ಜಾಗ ಖರೀದಿಸಲು ತಗಲುವ ವೆಚ್ಚ 58.44 ಲಕ್ಷ ರೂ. ಮಹಾನಗರ ಪಾಲಿಕೆಯಿಂದ ಭರಿಸಲು ಸರ್ಕಾರ ಅನುಮೋದನೆ ನೀಡಿದೆ. 2021ರ ಮಾರ್ಚ್ 25 ರಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಈ ಆದೇಶ ಹೊರಡಿಸಿದ್ದಾರೆ.

    ಬಡಾವಣೆ ಜನರಿಗೆ ಅಗತ್ಯವಾಗಿದ್ದ ಸಂಪರ್ಕ ರಸ್ತೆಗಾಗಿ ನಿರಂತರ ಹೋರಾಟ ನಡೆದಿತ್ತು. ಇದೀಗ ಫಲ ಸಿಕ್ಕಿದೆ. ಶಾಸಕ ಅರವಿಂದ ಬೆಲ್ಲದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಸಹಕಾರದಿಂದ ಬೇಡಿಕೆ ಈಡೇರುತ್ತಿದೆ. ಭೂಮಿ ಖರೀದಿಗೆ ಮಹಾನಗರ ಪಾಲಿಕೆ ಮುಂದಿನ ಕ್ರಮ ಕೈಗೊಳ್ಳಬೇಕಿದೆ.

    | ಮಲ್ಲಿಕಾರ್ಜುನ ಹೊರಕೇರಿ

    ಪಾಲಿಕೆ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts