More

    ಸರ್ಕಾರ ನಿಗದಿಪಡಿಸಿದ ದರದಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸಚಿವ ಲಕ್ಷ್ಮಣ ಸವದಿ ಸಲಹೆ

    ರಾಯಚೂರು: ಖಾಸಗಿ ಆಸ್ಪತ್ರೆಗಳ ವೈದ್ಯರು ಸರ್ಕಾರ ನಿಗದಿಪಡಿಸಿದ ದರದಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸಲಹೆ ನೀಡಿದರು.

    ಸ್ಥಳೀಯ ಐಎಂಎ ಸಭಾಂಗಣದಲ್ಲಿ ಶನಿವಾರ ಐಎಂಎ ಪದಾಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆ ವೈದ್ಯರ ಸಭೆ ನಡೆಸಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ರಾಯಚೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಉತ್ತಮ ಸೇವೆ ನೀಡುವ ಮಾದರಿಯಾಗಿವೆ. ಕರೊನಾ ಸೋಂಕಿನಿಂದ ಕೆಟ್ಟದಾದ ದಿನಗಳನ್ನು ಎದುರಿಸಬೇಕಾಗಿದೆ. ವೈದ್ಯರಿಂದಲೇ ಸಮಸ್ಯೆ ಪರಿಹಾರ ಸಾಧ್ಯವಿದೆ. ಜನರ ಗೌರವ, ಪ್ರೀತಿ ವಿಶ್ವಾಸವನ್ನು ಗಳಿಸುವ ಮೂಲಕ ಸಮರ್ಪಕ ಸೇವೆಯನ್ನು ಒದಗಿಸಬೇಕಿದೆ. ಲಸಿಕೆ ಸೇರಿದಂತೆ ಎಲ್ಲ ಸೌಕರ್ಯ ಒದಗಿಸಲು ಸರ್ಕಾರ ಸಿದ್ಧವಿದೆ. ಏನೇ ಸಮಸ್ಯೆಯಿದ್ದರೂ ಚರ್ಚಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

    ವೈದ್ಯರು ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಮುಂದಿನ ಒಂದು ತಿಂಗಳ ನಾವೆಲ್ಲರೂ ಕರೊನಾ ಜತೆ ಹೋರಾಟ ಮಾಡಬೇಕು. ಕರೊನಾ ವಿರುದ್ಧ್ದ ಹೋರಾಟ ಮಾಡಬೇಕು ಹೊರತು ರೋಗಿ ವಿರುದ್ಧ ಅಲ್ಲ. ಸೋಂಕಿತ ವ್ಯಕ್ತಿಯಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕು ಎಂದು ಲಕ್ಷ್ಮಣ ಸವದಿ ಹೇಳಿದರು.

    ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಕೊರತೆಯಿಲ್ಲ. ಬೇಡಿಕೆ ಹೆಚ್ಚಾದರೂ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ಧವಿದೆ. ಕೆಲ ಸಿಬ್ಬಂದಿ ರೆಮ್‌ಡಿಸಿವಿರ್ ಚುಚ್ಚುಮದ್ದನ್ನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪವಿದೆ. ಖಾಸಗಿ ಆಸ್ಪತ್ರೆ ವೈದ್ಯರು ಅವಕಾಶ ನೀಡದೇ ನಿಗಾವಹಿಸಬೇಕು. ರೆಮ್‌ಡಿಸಿವಿರ್ ಚುಚ್ಚುಮದ್ದು ಯಾರಿಗೆ ಅವಶ್ಯಕತೆಯಿದೆ ಎಂಬುದನ್ನು ವೈದ್ಯರೇ ನಿರ್ಧರಿಸಿ ಬಳಕೆ ಮಾಡಬೇಕು. ಸಿಟಿ ಸ್ಕಾೃನ್‌ಗೆ ಸರ್ಕಾರ 1,500 ರೂ, ಎಕ್ಸ್‌ರೇಗೆ 150 ರೂ ನಿಗದಿಪಡಿಸಿದೆ. ಕರೊನಾ ಮೊದಲ ಅಲೆ ಸಂದರ್ಭ ಕೇವಲ ನಾಲ್ಕು ಆಸ್ಪತ್ರೆಗಳಿಂದ ಮಾತ್ರ ಸಹಕಾರ ಪಡೆಯಲಾಗಿತ್ತು. ಈಗ ಯಾರು ಬೇಡಿಕೆ ಸಲ್ಲಿಸಿದರೂ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದರು.

    ನಗರದ ಶಾಸಕ ಡಾ.ಶಿವರಾಜ ಪಾಟೀಲ್‌ಮಾತನಾಡಿದರು. ಸಭೆಯಲ್ಲಿ ಶಾಸಕ ಕೆ.ಶಿವನಗೌಡ ನಾಯಕ, ಜಿ.ಪಂ. ಸಿಇಒ ಶೇಖ್ ತನ್ವೀರ್ ಆಸೀಫ್, ಡಿಎಚ್‌ಒ ಡಾ.ರಾಮಪ್ಪ, ಐಎಂಎ ಅಧ್ಯಕ್ಷ ಡಾ.ರಾಮಪ್ಪ, ಕಾರ್ಯದರ್ಶಿ ಡಾ.ನಾಗರಾಜ ಭಾಲ್ಕಿ ಹಾಗೂ ಪದಾಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆ ವೈದ್ಯರು ಇದ್ದರು.

    ರಾಯಚೂರು ಜಿಲ್ಲೆಗೆ 17 ಸಾವಿರ ರೆಮ್‌ಡಿಸಿವಿರ್ ಚುಚ್ಚುಮದ್ದು ಸರಬರಾಜು ಮಾಡಲಾಗುತ್ತ್ತಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ತರಹದ ರೆಮ್‌ಡಿಸಿವಿರ್ ಕೊರತೆ ಆಗುವುದಿಲ್ಲ. ಮುಂದಿನ ಎರಡು ದಿನಕ್ಕೆ ಆಗುವ 24 ಟನ್ ಅಕ್ಸಿಜನ್ ನಮ್ಮಲ್ಲಿ ಲಭ್ಯವಿದೆ.
    | ಡಾ.ಶಿವರಾಜ ಪಾಟೀಲ್ ನಗರದ ಶಾಸಕ ರಾಯಚೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts