More

    ಎರಡನೇ ದಿನವೂ ರಸ್ತೆಗಿಳಿಯದ ಸರ್ಕಾರಿ ಬಸ್

    ಹಾವೇರಿ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನವೂ ಮುಂದುವರಿಯಿತು. ಶನಿವಾರ ಜಿಲ್ಲೆಯ ಎಲ್ಲ ಘಟಕಗಳ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.

    ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಯಾವುದೇ ಬಸ್​ಗಳು ಸಂಚಾರ ಮಾಡಲಿಲ್ಲ. ಶುಕ್ರವಾರದಿಂದಲೇ ಬಸ್​ಗಳ ಸಂಚಾರ ಸ್ಥಗಿತಗೊಂಡಿರುವ ವಿಷಯ ಗೊತ್ತಿದ್ದ ಪ್ರಯಾಣಿಕರು ಬಸ್ ನಿಲ್ದಾಣದತ್ತ ಸುಳಿಯಲಿಲ್ಲ. ಬದಲಾಗಿ ಖಾಸಗಿ ವಾಹನಗಳ ಮೊರೆ ಹೋದರು.

    ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಬಸ್ ನಿಲಾಣದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗಕ್ಕೆ ಸೇರಿದ ಮಹಿಳಾ ಸಿಬ್ಬಂದಿ, ನೌಕರರು ಧರಣಿ ಆರಂಭಿಸಿದರು. ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಸರ್ಕಾರದ ಯಾವುದೇ ಸೌಲಭ್ಯ ಇಲ್ಲದೇ ನಮ್ಮ ಕುಟುಂಬ ಬೀದಿಗೆ ಬರುವಂತಾಗಿದೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರ ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

    ಬೇರೆ ಊರುಗಳಿಂದ ನಗರಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಸಾರಿಗೆ ಸಿಬ್ಬಂದಿ ಮುಷ್ಕರದ ಬಿಸಿ ತಟ್ಟಿದ್ದು, ಬಸ್ ಇಲ್ಲದೇ ತಮ್ಮ ಊರುಗಳಿಗೆ ತೆರಳಲು ಅನೇಕರು ಪರದಾಡುತ್ತಿದ್ದರು. ಕೆಲ ಪ್ರಯಾಣಿಕರು ಸಾರಿಗೆ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ಮುಷ್ಕರ ಮಾಡುವುದಾದರೆ ಮುಂಚಿತವಾಗಿ ಸಾರ್ವಜನಿಕವಾಗಿ ತಿಳಿಸಬೇಕಿತ್ತು. ದಿಢೀರ್ ಮುಷ್ಕರ ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಹುಬ್ಬಳ್ಳಿ, ಗದಗ, ರಾಣೆಬೆನ್ನೂರು, ದಾವಣಗೆರೆ, ಹಾನಗಲ್ಲ, ಶಿರಸಿ ಮತ್ತಿತರ ಕಡೆ ಖಾಸಗಿ ವಾಹನಗಳನ್ನು ಬಿಡಲಾಗುತ್ತಿದೆ. ಆದರೆ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು, ಪ್ರಯಾಣ ದರ ಹೊರೆಯಾದರೂ ಅನಿವಾರ್ಯವಾಗಿ ಜನರು ಬೇರೆ ಬೇರೆ ಊರುಗಳಿಗೆ ಪ್ರಯಾಣ ಬೆಳೆಸುತ್ತಿರುವುದು ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts