More

    ವಿಧಾನಪರಿಷತ್ ವಿದ್ಯಮಾನದ ಕುರಿತು ರಾಜ್ಯಪಾಲರ ಮೀನಮೇಷ

    ಬೆಂಗಳೂರು: ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ಮಂಡನೆ ವಿಚಾರವಾಗಿ ಮೇಲ್ಮನೆಯಲ್ಲಿ ನಡೆದ ಕೋಲಾಹಲ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಜಂಟಿ ನಿಯೋಗ ದೂರು ಸಲ್ಲಿಸಿ 24 ತಾಸು ಕಳೆದಿದ್ದರೂ ರಾಜಭವನದಿಂದ ಇನ್ನೂ ಯಾವುದೇ ಸಂದೇಶ ಬಂದಿಲ್ಲ. ರಾಜ್ಯಪಾಲರ ಮೀನಮೇಷದಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಕಾನೂನು ಹೋರಾಟದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಬೆಳವಣಿಗೆಯಿಂದಾಗಿ ರಾಜಭವನದತ್ತಲೇ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ಆಸಕ್ತರ ಚಿತ್ತ ನೆಟ್ಟಿದೆ. ಕಾನೂನು ತಜ್ಞರ ಜತೆಗೆ ರಾಜ್ಯಪಾಲರು ರ್ಚಚಿಸಿದ್ದರೂ ಅವಸರದ ತೀರ್ಮಾನ ಬೇಡವೆಂಬ ನಿಲುವು ತಳೆದಿದ್ದಾರೆ ಎಂದು ಮೂಲಗಳು ಹೇಳಿವೆ. ಪರಿಷತ್ ಅಧಿವೇಶನವನ್ನು ಮತ್ತೊಮ್ಮೆ ಕರೆಯಲು ನಿರ್ದೇಶಿಸಿ, ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆಗೆ ಅವಕಾಶ ಕೊಡಬೇಕೆಂದು ರಾಜ್ಯಪಾಲರಿಗೆ ಮನವಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಮನವಿ ಮಾಡಿಕೊಂಡಿವೆ.

    ಅಧಿಕಾರದ ಜಿಜ್ಞಾಸೆ: ವಿಧಾನಪರಿಷತ್ ಅಧಿವೇಶನ ಕರೆದು, ನಿರ್ದಿಷ್ಟ ವಿಷಯದ ಬಗ್ಗೆ ರ್ಚಚಿಸಲು ಅವಕಾಶ ಕೊಡಬೇಕೆಂದು ನಿರ್ದೇಶಿಸುವ ಅಧಿಕಾರ ರಾಜ್ಯಪಾಲರಿಗೆ ಇದೆಯೇ? ಎಂಬ ಜಿಜ್ಞಾಸೆಯೂ ರಾಜಭವನ ಸಂದೇಶ ವಿಳಂಬಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ನಿಯಮದ ಪ್ರಕಾರ, ಮತ್ತೊಮ್ಮೆ ಅಧಿವೇಶನ ಕರೆಯಬೇಕೆಂದು ಸೂಚಿಸಬಹುದೇ ಹೊರತು ಇಂತಹ ವಿಷಯ ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂದು ರಾಜ್ಯಪಾಲರು ಆದೇಶಿಸಲಾಗದು. ಮಂಗಳವಾರದ ಅಹಿತಕರ ಘಟನೆ ಕುರಿತು ಸಭಾಪತಿಯಿಂದ ರಾಜ್ಯಪಾಲರು ವಿವರ ಕೇಳಿಲ್ಲ, ರಾಜಭವನಕ್ಕೂ ಕರೆಯಿಸಿ ಕೊಂಡಿಲ್ಲ. ಕಾನೂನಾತ್ಮಕ ಕಗ್ಗಂಟುಗಳು ಸಡಿಲವಾದ ಬಳಿಕವಷ್ಟೇ ರಾಜ್ಯಪಾಲರು ಮುಂದಿನ ಹೆಜ್ಜೆಯಿಡುವ ಸಾಧ್ಯತೆಗಳಿವೆ.

    ಸೂಚನೆಗೆ ಕಾದಿರುವ ಬಿಜೆಪಿ

    ರಾಜ್ಯಪಾಲರ ನಿರ್ಣಯ ನೋಡಿಕೊಂಡು ಮುಂದಿನ ಹೆಜ್ಜೆಯಿಡಲು ಬಿಜೆಪಿ ನಿರ್ಧರಿಸಿದೆ. ರಾಜಭವನದಿಂದ ಹೊರಡುವ ಸಂದೇಶಕ್ಕಾಗಿ ಕಾದಿದೆ. ಕಾನೂನು ಸಂಸದೀಯ ವ್ಯವಹಾರಗಳು ಇನ್ನಿತರ ಹಿರಿಯ ಸಚಿವರನ್ನು ಬುಧವಾರ ಸಂಜೆ ಕರೆದು ರ್ಚಚಿಸಿ ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದೆಂದು ಬುಧವಾರ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ ಬಿಎಸ್​ವೈ ಹೇಳಿದಂತಹ ಯಾವುದೇ ಸಭೆ ನಡೆದಿಲ್ಲವೆಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ. ಹೀಗಾಗಿ ರಾಜ್ಯಪಾಲರ ನಿರ್ಧಾರ ಹೊರಬಿದ್ದ ಮೇಲೆ ಚಟುವಟಿಕೆಗಳು ಮತ್ತೆ ಗರಿಗೆದರುವ ನಿರೀಕ್ಷೆಯಿದೆ. ಕಾನೂನು ಹೋರಾಟದ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸಿದೆ. ಬಿಜೆಪಿ ಈ ನಡೆಯಿಟ್ಟರೆ ಕಾಂಗ್ರೆಸ್ ಕೂಡ ಕಾನೂನು ಸಮರಕ್ಕೆ ಸಿದ್ಧ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಹಿರಿಯ ಮನೆ, ಚಿಂತಕರ ಛಾವಡಿಗೆ ಮಂಗಳವಾರದ ಘಟನೆ ಒಂದು ಕಪ್ಪುಚುಕ್ಕೆಯಾಗಿದೆ. ರಾಜ್ಯದ ಜನತೆ ನಮ್ಮನ್ನು ಎಂದಿಗೂ ಕ್ಷಮಿಸಲಾರರು. ನಮ್ಮ ಮೇಲೆ ಇಟ್ಟ ಭರವಸೆಯನ್ನು ಕಳೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಸದನದ ಗೌರವಕ್ಕೆ ಧಕ್ಕೆ ಬರದಂತೆ ನಾವೆಲ್ಲರೂ ನಡೆದುಕೊಳ್ಳಲು ಪ್ರಯತ್ನ ಮಾಡುತ್ತೇವೆ. ಆದ್ದರಿಂದ ಈ ಘಟನೆ ಬಗ್ಗೆ ರಾಜ್ಯದ ಜನ ಕ್ಷಮಿಸಬೇಕು.

    | ಬಸವರಾಜ ಹೊರಟ್ಟಿ ಮೇಲ್ಮನೆ ಹಿರಿಯ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts