More

    ಆಡಳಿತ ಚುಕ್ಕಾಣಿ ಹಿಡಿದ ಸಹಕಾರ ಭಾರತಿ, ಮಂತ್ರಿ ಹೆಬ್ಬಾರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ

    ವಿಜಯವಾಣಿ ಸುದ್ದಿಜಾಲ ಶಿರಸಿ: ಇಲ್ಲಿನ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್​ನ ನೂತನ ಅಧ್ಯಕ್ಷರಾಗಿ ಕಾರ್ವಿುಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಐದು ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಗರದ ಮಾರುಕಟ್ಟೆ ಪ್ರಾಂಗಣದಲ್ಲಿರುವ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಶನಿವಾರ ನಡೆಯಿತು. ಉಪಾಧ್ಯಕ್ಷರಾಗಿ ಮೋಹನದಾಸ ನಾಯಕ ಅವಿರೋಧವಾಗಿ ಆಯ್ಕೆಯಾದರು.

    ಬ್ಯಾಂಕ್​ನ 16 ನಿರ್ದೇಶಕರಲ್ಲಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಮೋಹನದಾಸ ನಾಯಕ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆಯ ಗಡುವು ಮುಗಿಯುವ ವೇಳೆಗೆ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಕೃತಿ ಬನ್ಸಾಲ್ ಘೊಷಿಸಿದರು.

    ಸಚಿವ ಹೆಬ್ಬಾರ 5ನೇ ಬಾರಿಗೆ ಕೆಡಿಸಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಮೋಹನದಾಸ ನಾಯಕ ಎರಡನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಹಿಡಿತದಲ್ಲಿದ್ದ ಕೆಡಿಸಿಸಿ ಬ್ಯಾಂಕ್ ಚುಕ್ಕಾಣಿ ಈ ಬಾರಿ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಒಟ್ಟು 16 ನಿರ್ದೇಶಕ ಸ್ಥಾನದಲ್ಲಿ ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ 12 ಸದಸ್ಯರು ಆಯ್ಕೆಯಾಗಿದ್ದು, ನಿಕಟಪೂರ್ವ ಅಧ್ಯಕ್ಷ ಎಸ್.ಎಲ್.ಘೊಟ್ನೇಕರ ಬಣದಿಂದ 4 ಸದಸ್ಯರು ಆಯ್ಕೆಯಾಗಿದ್ದಾರೆ.

    ಬ್ಯಾಂಕಿನ ಬೆಳವಣಿಗೆಗೆ ಪ್ರಯತ್ನಿಸುತ್ತೇನೆ…: ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡಿದ ಶಿವರಾಮ ಹೆಬ್ಬಾರ, ಬ್ಯಾಂಕ್​ನೊಳಗೆ ಪಕ್ಷದ ವಿಚಾರ ತರದೇ ಪಕ್ಷಾತೀತ ತಳಹದಿಯಲ್ಲಿ ಚುನಾವಣೆಯಲ್ಲಿ ಸಹ ಉತ್ತಮ ಸಂದೇಶ ನೀಡಿದ್ದೇವೆ. ಚುನಾವಣೆ ನಂತರ ಬ್ಯಾಂಕಿನ ಹಿತದೃಷ್ಟಿಯಿಂದ ಅವಿರೋಧ ಆಯ್ಕೆಯಾಗಿದೆ. ಹಿರಿಯರ ಮಾರ್ಗದರ್ಶನ ಪಡೆದು ಬ್ಯಾಂಕಿನ ಬೆಳವಣಿಗೆಗೆ ಪ್ರಯತ್ನಿಸುತ್ತೇನೆ. ಅಧಿಕಾರೇತರ ನಿರ್ದೇಶಕರು ಹಾಗೂ ಸಿಬ್ಬಂದಿಯನ್ನು ಜತೆಗೂಡಿ ಆಡಳಿತ ನಡೆಸಲಾಗುವುದು. ಇದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಸರ್ಕಾರದಿಂದ ಸಿಗಬೇಕಾದ ಸೌಲಭ್ಯವನ್ನು ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದರು.

    ಅಗತ್ಯ ಸಮಯ ನೀಡುವೆ…: ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗುವ ಜತೆ ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು ಕೆಡಿಸಿಸಿ ಅಧ್ಯಕ್ಷ ಗಾದಿಗೇರಿರುವುದು ಬ್ಯಾಂಕ್​ನ ಇತಿಹಾಸದಲ್ಲಿ ಪ್ರಥಮ. ಇದು ಒಂದೆಡೆ ಅನುದಾನ ತರುವಲ್ಲಿ ಅನುಕೂಲವಾದರೆ, ಇನ್ನೊಂದೆಡೆ ಸಚಿವ ಸ್ಥಾನ ಮತ್ತು ರಾಜಕೀಯ ಒತ್ತಡದಲ್ಲಿ ಬ್ಯಾಂಕ್ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ತೊಂದರೆ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ಶಿವರಾಮ ಹೆಬ್ಬಾರ ಮಾತನಾಡಿ, ‘ಪ್ರಸ್ತುತ ಸಚಿವನಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಸಾಕಷ್ಟು ಒತ್ತಡದ ಮಧ್ಯೆಯೂ ಅಭಿವೃದ್ಧಿ ಕಾರ್ಯ ಮಾಡಿಸುವ ತಂತ್ರ ಕರಗತವಾಗಿದೆ. ಅದೂ ಅಲ್ಲದೆ, ಈ ಹಿಂದೆ ಅಧ್ಯಕ್ಷರಾಗಿದ್ದ ಎಸ್.ಎಲ್. ಘೊಟ್ನೇಕರ ಅವರು ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ಮಾಡಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಕೂಡ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಒತ್ತಡ ಸಾಮಾನ್ಯ. ರಾಜ್ಯ ರಾಜಕೀಯದ ಜತೆ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೂ ಅಗತ್ಯ ಸಮಯ ನೀಡುತ್ತೇನೆ’ ಎಂದಿದ್ದಾರೆ.

    ಘೊಟ್ನೇಕರ ಸೈಡ್ಲೈನ್: ಅವಿರೋಧವಾಗಿ ಆಯ್ಕೆಗೊಂಡ ದಿನವೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯರೂ ಆಗಿರುವ ಹಾಲಿ ನಿರ್ದೇಶಕ ಎಸ್.ಎಲ್. ಘೊಟ್ನೇಕರ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮವರ ಸಹಕಾರ ಸಿಗದ ಕಾರಣ ಸುಮ್ಮನಾಗುವಂತಾಗಿತ್ತು. ಮೂರು ಬಾರಿ ಅಧ್ಯಕ್ಷರಾಗಿದ್ದ ಅವರು ಈ ಬಾರಿ ಸಹಕಾರ ಭಾರತಿಯ ವೇಗಕ್ಕೆ ಹಿನ್ನಡೆ ಅನುಭವಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕಾಂಗ್ರೆಸ್​ನವರಾದ ಮಂಕಾಳು ವೈದ್ಯ, ಶಿವಾನಂದ ಕಡತೋಕ, ಆರ್.ಎಂ. ಹೆಗಡೆ ಕೂಡ ಶಿವರಾಮ ಹೆಬ್ಬಾರ ಅವರಿಗೆ ಬೆಂಬಲ ಸೂಚಿಸಿದ ಕಾರಣ ನಾಮಪತ್ರ ಸಲ್ಲಿಸಲೂ ಆಗದಿರುವಂತಹ ಸನ್ನಿವೇಶ ನಿರ್ವಣವಾಗಿತ್ತು. ಇದರೊಟ್ಟಿಗೆ ಇಷ್ಟು ವರ್ಷ ಬೆಂಬಲವಾಗಿ ನಿಂತಿದ್ದ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಕೂಡ ಘೊಟ್ನೇಕರ ಅಧ್ಯಕ್ಷರಾಗುವಲ್ಲಿ ಪ್ರಯತ್ನಿಸಿಲ್ಲ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದ ವಾತಾವರಣ ನಿರ್ವಣವಾಗಿತ್ತು ಎಂಬುದು ಬಲ್ಲ ಮೂಲಗಳ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts