More

    ಶಾಂತಿಗೆ ಧಕ್ಕೆ ತಂದರೆ ಗೂಂಡಾ ಕಾಯ್ದೆ

    ರಟ್ಟಿಹಳ್ಳಿ: ರಟ್ಟಿಹಳ್ಳಿ ಪಟ್ಟಣವನ್ನು ಪೊಲೀಸ್ ಇಲಾಖೆ ಸೂಕ್ಷ್ಮ ಪ್ರದೇಶವೆಂದು ಮತ್ತು ಗಂಭೀರವಾಗಿ ಪರಿಗಣಿಸಿದೆ. ಮತೀಯವಾಗಿ ಯಾವುದೇ ಗಲಭೆಗೆ ಸೃಷ್ಟಿಗೆ ಕಾರಣವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಹೇಳಿದರು.

    ಪಟ್ಟಣದ ಧರ್ಮಗಿರಿ ಮಠದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

    ಈಗಾಗಲೇ ಕೆಲವು ವ್ಯಕ್ತಿಗಳನ್ನು ಗುರುತಿಸಿದ್ದು, ಪುನಃ ಶಾಂತಿಗೆ ಧಕ್ಕೆ ಉಂಟು ಮಾಡಿದರೆ ಅವರ ಮೇಲೆ ಗಡಿಪಾರು ಅಥವಾ ಗೂಂಡಾ ಕಾಯ್ದೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಶಾಂತಿಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೆ ಪೊಲೀಸ್ ಪ್ರಕರಣ ದಾಖಲಾದರೆ, ಅವರು ಸರ್ಕಾರಿ ಅಥವಾ ಖಾಸಗಿ ನೌಕರಿಯಿಂದ ವಂಚಿತವಾಗಬೇಕಾಗುತ್ತಿದೆ. ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ. ಬ್ಯಾಂಕ್ ಮಾಹಿತಿಯನ್ನು ಫೋನ್‌ನಲ್ಲಿ ಬೇರಾರಿಗೂ ನೀಡಬೇಡಿ. ಈ ಬಗ್ಗೆ ನಿಮಗೆ ಯಾವುದೇ ಸಮಸ್ಯೆಗಳು ಇದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ನಿಮ್ಮ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ಧವಾಗಿದೆ. ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಎಂದರು.

    ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣಕ್ಕೆ ಮನವಿ: ಪಟ್ಟಣದ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಯುವಕರು ಬೆಳಂಬೆಳಗ್ಗೆ ಮದ್ಯಪಾನ ಮಾಡಿ ಅನಾರೋಗ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಪಟ್ಟಣದ ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ವ್ಯಾಪರಸ್ಥರು ರಸ್ತೆಯ ಮಧ್ಯಭಾಗದಲ್ಲಿ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರಿಗೆ ಸಂತೆಗೆ ಹೋಗಲು ಸಮಸ್ಯೆಯಾಗುತ್ತಿದೆ. ಜನದಟ್ಟಣೆಯಲ್ಲಿ ಪ್ರತಿ ವಾರ 8-10 ಮೊಬೈಲ್‌ಗಳ ಕಳ್ಳತನವಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಶ್ರೀನಿವಾಸ ಭೈರಪ್ಪನವರ, ಮನೋಜ ಗೋಣೆಪ್ಪನವರ ಹಾಗೂ ಮಂಜಣ್ಣ ಬಾಗೋಡಿ ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಡಾ.ಶಿವಕುಮಾರ ಗುಣಾರೆ, ಸಂತೆಯಲ್ಲಿ ಕ್ರಮಬದ್ಧವಾಗಿ ವ್ಯಾಪಾರ ನಡೆಯಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ವಾಹನ ನಿಲುಗಡೆಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಕೋರಿದರು.

    ಪಟ್ಟಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ಕುರಿತು ಅಬಕಾರಿ ಇಲಾಖೆಗೆ ಮಾಹಿತಿ ನೀಡಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸ್ಥಳೀಯ ಪಿಎಸ್‌ಐಗೆ ಎಸ್ಪಿ ಸೂಚಿಸಿದರು.

    ಸ್ಥಳೀಯ ನಿವಾಸಿ ಅಬ್ಬಾಸ ಗೋಡಿಹಾಳ ಮತ್ತು ಮಖಬುಲ್ಲಸಾಬ ಹಳ್ಳಿಯಾಳ ಮಾತನಾಡಿ, ಜು. 29ರಂದು ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಕೆಲವೇ ಪ್ರದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ. ಯಾವುದೇ ಮೆರವಣಿಗೆ ಇಲ್ಲದೇ ಅತ್ಯಂತ ಶಾಂತಿಯುತವಾಗಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

    ಡಿವೈಎಸ್‌ಪಿ ಎನ್. ಶ್ರೀಧರ, ಸಿಪಿಐ ಆರ್.ಆರ್. ಪಾಟೀಲ, ಪಿಎಸ್‌ಐ ಜಗದೀಶ ಜಿ., ಮಂಜು ಅಸ್ವಾಲಿ, ಶಂಭಣ್ಣ ಗೂಳಪ್ಪನವರ, ರಿಜ್ವಾನ್ ಕಲ್ಪನಹಳ್ಳಿ, ಜಾಕೀರ ಮುಲ್ಲಾ, ಸಾರ್ವಜನಿಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts