More

    ನಿರುದ್ಯೋಗಿಗಳಾದ ಕಾರ್ಮಿಕರು

    ಡಿ.ಬಿ. ಕುಪ್ಪಸ್ತ ಗೊಳಸಂಗಿ
    ಕೂಲಿ ಅರಸಿ ದೂರದ ಪಶ್ಚಿಮ ಬಂಗಾಳದಿಂದ ಕೂಡಗಿ ಎನ್‌ಟಿಪಿಸಿಗೆ ಬಂದಿದ್ದ 21ಕಾರ್ಮಿಕರಿಗೆ ಕರೊನಾದಿಂದ ಆಘಾತವಾಗಿದೆ. ಕಳೆದೆರಡು ವಾರಗಳಿಂದ ಇದ್ದ ಕೆಲಸವನ್ನು ಕಳೆದುಕೊಂಡು ಈ ಕಾರ್ಮಿಕರು ಬೀದಿಪಾಲಾಗಿದ್ದಾರೆ.
    ಎನ್‌ಟಿಪಿಸಿ ವ್ಯಾಪ್ತಿಯ ಪ್ರಸಾದ ಆ್ಯಂಡ್ ಕಂಪನಿಯಲ್ಲಿ ಕಟ್ಟಡ, ಗಾರೆ ಕೆಲಸವನ್ನರಸಿ ಮೂರು ತಿಂಗಳ ಹಿಂದಷ್ಟೇ ಬಂದಿದ್ದ 21ಜನ ಬಡ ಕಾರ್ಮಿಕರಿಗೆ ಕರೊನಾ ಬೇತಾಳನಂತೆ ಕಾಡಿದ್ದು, ಇದ್ದ ಕೆಲಸವನ್ನೂ ಕಳೆದುಕೊಂಡು ಹುಟ್ಟೂರು ತೊರೆದು ಬಂದಿರುವ ಇವರ ಬದುಕು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗಿದೆ.
    ಕರೊನಾ ಹಾವಳಿ ಹೆಚ್ಚಾಗುತ್ತಿರುವಂತೆ ಕಂಪನಿ ಇವರನ್ನೆಲ್ಲ ಕೆಲಸದಿಂದ ಕೈಬಿಟ್ಟಿದೆ. ತಮ್ಮಲ್ಲಿದ್ದ ಹಣದಲ್ಲಿ ಎರಡು ವಾರ ಅದ್ಹೇಗೋ ಕಳೆದ ಕಾರ್ಮಿಕರಿಗೆ ದಿಕ್ಕೇ ತೋಚದಂತಾದಾಗ ದೇವರಾಗಿ ಬಂದವರು ಪ್ರಾಂತ ರೈತ ಸಂಘದ ಪದಾಧಿಕಾರಿಗಳು. ತೊಂದರೆಯಲ್ಲಿರುವ ಕಾರ್ಮಿಕರನ್ನು ಕಂಡು ಸುದ್ದಿ ಮಾಧ್ಯಮದವರನ್ನು ಸಂಪರ್ಕಿಸಲು ಹೊರಟಾಗ ಎಚ್ಚೆತ್ತುಕೊಂಡ ಕಂಪನಿ ಮೇಲ್ವಿಚಾರಕರು ಕಾರ್ಮಿಕರನ್ನು ಕರೆದು ಮಾತನಾಡಿ ಲಾಕ್‌ಡೌನ್ ತೆರವುಗೊಂಡ ಬಳಿಕ ಮತ್ತೆ ನಿಮಗೆ ಕೆಲಸ ನೀಡಲಾಗುತ್ತಿದೆ. ಅಲ್ಲಿವರೆಗೆ ತೆಪ್ಪಗಿರಬೇಕು ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಈ ಎಚ್ಚರಿಕೆಯಿಂದ ನೋವು ನುಂಗಿ ನಗೆ ಚೆಲ್ಲಲು ಪ್ರಯತ್ನಿಸುವ ಕಾರ್ಮಿಕರು ತಮಗೇನೂ ಆಗಿಯೇ ಇಲ್ಲವೆಂದು ಮಾತು ಬದಲಾಯಿಸುತ್ತಿದ್ದಾರೆ.
    ಏತನ್ಮಧ್ಯೆ ‘ವಿಜಯವಾಣಿ’ ಪ್ರತಿನಿಧಿ ಎನ್‌ಟಿಪಿಸಿಯ ಹಿರಿಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ಪಶ್ಚಿಮ ಬಂಗಾಳದ 21 ಕಾರ್ಮಿಕರನ್ನು ಕೆಲಸದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಕರೊನಾ ಲಾಕ್‌ಡೌನ್ ತೆರವುಗೊಂಡ ಬಳಿಕ ಮತ್ತೆ ಸ್ಥಾವರದಲ್ಲಿ ಕೆಲಸ ನೀಡುತ್ತೇವೆ. ಅಲ್ಲಿಯವರೆಗೆ ವಾರಕ್ಕೆ ಪ್ರತಿಯೊಬ್ಬ ಕಾರ್ಮಿಕನಿಗೆ ಒಂದು ಸಾವಿರ ರೂ.ಊಟದ ಖರ್ಚಿಗಾಗಿ ಕಂಪನಿ ಭರಿಸಲಿದೆ ಎಂದರು.

    ಕರೊನಾ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದೇನೋ ಸರಿ. ಆದರೆ, ಇಲ್ಲಿಗೆ ಬಂದು ಕೆಲಸ ಕಳೆದುಕೊಂಡ 21 ಜನ ಕಾರ್ಮಿಕರಿಗೆ ಊಟೋಪಚಾರ ಜತೆಗೆ ಇತರೆ ಖರ್ಚನ್ನೂ ನಿಭಾಯಿಸಲು ಇನ್ನಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯಿಂದಲೇ ಅವರೆಲ್ಲರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗುವುದು.
    ರಾಮಣ್ಣ ಹಿರೇಗೋಳ, ತಾಲೂಕು ಅಧ್ಯಕ್ಷ, ಪ್ರಾಂತ ರೈತ ಸಂಘ, ಬಸವನಬಾಗೇವಾಡಿ

    ನಿರುದ್ಯೋಗಿಗಳಾದ ಕಾರ್ಮಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts