More

    ಜಾತ್ರಾ ಮಹೋತ್ಸವಕ್ಕೆ ದೇವರ ಪೆಟ್ಟಿಗೆ ರವಾನೆ

    ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದಿಂದ ಗುರುವಾರ ಮಳವಳ್ಳಿ ಮಂಟೇಸ್ವಾಮಿ ಮಠದ ಪೀಠಾಧಿಕಾರಿ ವರ್ಷಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸು ಅವರು ಕೆ.ಆರ್.ನಗರ ತಾಲೂಕಿನ ಕಪ್ಪಡಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ದೇವರ ಪೆಟ್ಟಿಗೆ ಮತ್ತು ಮೀಸಲು ಬುಟ್ಟಿಯ ಸಾಮಾಗ್ರಿಗಳೊಡನೆ ತೆರಳಿದರು.

    ಕಪ್ಪಡಿಯಲ್ಲಿ 26 ದಿನಗಳವರೆಗೆ ನಡೆಯುವ ರಾಚಪ್ಪಾಜಿ ಜಾತ್ರಾ ಮಹೋತ್ಸವವನ್ನು ಸಂಪ್ರದಾಯದಂತೆ ವರ್ಷಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸು ಅವರು ಮಠದ ಆವರಣದಲ್ಲಿರುವ ಮಂಟೇಸ್ವಾಮಿ ಗದ್ದುಗೆಗೆ ವಿಶೇಷ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸಂಜೆಯ ನಂತರ ಮಂಟೇಸ್ವಾಮಿ ಒಳಮಾಳಿಗೆ ಗದ್ದುಗೆಗೆ ಹೋಗಿ ಕುರುಬನಕಟ್ಟೆ ಕ್ಷೇತ್ರದ ವರುಣಲಿಂಗ ರಾಜೇಅರಸು ಅವರಿಂದ ರುದ್ರಾಕ್ಷಿ ಮಾಲೆ ಹಾಗೂ ದೇವರ ಪೆಟ್ಟಿಗೆಯನ್ನು ಪಡೆದುಕೊಂಡು ಶ್ರೀಮಠಕ್ಕೆ ಧಾವಿಸಿ ನಡುಮನೆ ಗೌರಿ ಅಜಾರದಲ್ಲಿ ಕುಳಿತರು.

    ಈ ವೇಳೆ ಬಿ.ಜಿ.ಪುರ ಮಠದ ಕುಟುಂಬ ಸದಸ್ಯರು ಧೂಪದ ಆರತಿ ಮಾಡಿ ನಮಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪೀಠಾಧಿಪತಿ ಜ್ಞಾನಾನಂದ ಚನ್ನರಾಜೇ ಅರಸು ಅವರು ಕಪ್ಪಡಿ ಜಾತ್ರೆಯನ್ನು ಯಶಸ್ವಿಯಾಗಿ ಆಚರಣೆ ಮಾಡಿಕೊಂಡು ಬರುವಂತೆ ಶುಭ ಹಾರೈಸಿ ಬೀಳ್ಕೊಟ್ಟರು.

    ಮಳವಳ್ಳಿ ಮಠದ ಬಸವನ ಜತೆಗೆಯಲ್ಲಿ ಛತ್ರಿ, ಚಾಮರ, ತಮಟೆ ವಾದ್ಯಗಳೊಡನೆ ದೇವರ ಪೆಟ್ಟಿಗೆಯನ್ನು ಹೊತ್ತು ರಾಜ ಬೀದಿಯ ಮೂಲಕ ಮುಟ್ಟನಹಳ್ಳಿ ತೋಪಿನವರೆಗೆ ನೂರಾರು ಭಕ್ತ ಸಮೂಹದೊಡನೆ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಗ್ರಾಮದ ಮನೆಗಳ ಕುಟುಂಬ ಸಮೇತರಾಗಿ ದೇವರ ಪೆಟ್ಟಿಗೆಗೆ ಪೂಜೆ ಸಲ್ಲಿಸಿ ಭಕ್ತಿಯಿಂದ ನಮಿಸಿದರು. ಅಂದು ರಾತ್ರಿ ತೋಪಿನಲ್ಲಿರುವ ದೊಡ್ಡಮ್ಮ ತಾಯಿ ದೇವಸ್ಥಾನದ ಪ್ರಾಂಗಣದಲ್ಲಿ ವಾಸ್ತವ್ಯ ಹೂಡಿದರು. ಮರುದಿನ ದೊಡ್ಡಮ್ಮ ತಾಯಿ ಗದ್ದುಗೆಗೆ ಪೂಜೆ ಸಲ್ಲಿಸಿ ಕಪ್ಪಡಿ ಕ್ಷೇತ್ರದೆಡೆಗೆ ಪ್ರಯಾಣ ಬೆಳೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts