More

    ವೈಭವದ ಅಂಗಮಣಿ ಉತ್ಸವ, ಅಶ್ವವಾಹನೋತ್ಸವ

    ಮೇಲುಕೋಟೆ: ತವರುಮನೆಯ ಸಿರಿಯನ್ನು ಬಿಂಬಿಸುವ ಮೇಲುಕೋಟೆ ಶ್ರೀದೇವಿ-ಭೂದೇವಿಯರ ಪ್ರಖ್ಯಾತ ಅಂಗಮಣಿ ಉತ್ಸವ ಮತ್ತು ಚೆಲುವನಾರಾಯಣಸ್ವಾಮಿಯ ಅಶ್ವವಾಹನೋತ್ಸವ ಮಂಗಳವಾರ ರಾತ್ರಿ ವೈಭವದಿಂದ ನೆರವೇರಿತು. ಸಹಸ್ರಾರು ಭಕ್ತರು ಉತ್ಸವದ ವೈಭವವನ್ನು ಕಣ್ತುಂಬಿಕೊಂಡರು.

    ದೇವಿಯರ ವಿಶೇಷ ಅಲಂಕಾರ ಹಾಗೂ ಸಜ್ಜೆಹಟ್ಟಿ ಮಂಟಪದಲ್ಲಿ ಮಡಿಲು ತುಂಬುವ ವೈಭವವನ್ನು ಕಣ್ತುಂಬಿಕೊಂಡು ಭಕ್ತರು ತಡರಾತ್ರಿಯವರೆಗೆ ಕಾದಿದ್ದು, ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಅಶ್ವವಾಹನೋತ್ಸವದ ಮಂಟಪಕ್ಕೆ ಬಿರುಸಿನಿಂದ ಓಡೋಡಿ ಬರುವ ಉತ್ಸವದ ಸಂಭ್ರಮದ ಕ್ಷಣಗಳನ್ನು ಕಂಡು ಪುಳಕಿತರಾಗಿ ಹರ್ಷೋದ್ಗಾರ ಮಾಡಿದರು.

    ಶ್ರೀದೇವಿ, ಭೂದೇವಿಯರ ಉತ್ಸವ ರಾತ್ರಿ 8.15ಕ್ಕೆ ಆರಂಭವಾಗಿ 11.30 ಗಂಟೆಗೆ ಮುಕ್ತಾಯವಾಯಿತು. ಮಹಾಮಂಗಳಾರತಿ ನಂತರ ದೇವಾಲಯದ ಒಳಪ್ರಾಕಾರದಲ್ಲಿ ನಡೆದ ಉತ್ಸವ ನಡೆಮಡಿಯೊಂದಿಗೆ ಅಂಗಮಣಿ ಮಂಟಪಕ್ಕೆ ತಲುಪಿತು. ಅಲ್ಲಿ ದೇವಿಯರಿಗೆ ವೈವಿಧ್ಯಮಯ ಹಣ್ಣುಗಳಿಂದ ಮಡಿಲು ತುಂಬುವ ಕೈಂಕರ್ಯ ನೆರವೇರಿಸಲಾಯಿತು.

    ಸ್ಥಾನಾಚಾರ್ಯರಾದ ಕರಗಂ ನಾರಾಯಣ ಅಯ್ಯಂಗಾರ್ ಮತ್ತು ಸಜ್ಜೆಹಟ್ಟಿ ಗುರುಗಳಾದ ತಿರುನಾರಾಯಣ ಅಯ್ಯಂಗಾರ್ ಗುರುಪೀಠಗಳ ವತಿಯಿಂದ ಅಂಗಮಣಿ ಉತ್ಸವದ ಕೈಂಕರ್ಯಗಳು ನೆರವೇರಿದವು. ಅಂಗಮಣಿ ಮಂಟಪ ಸರಳ ವಿದ್ಯುತ್ ದೀಪಾಲಂಕಾರ ಮತ್ತು ತಳಿರು-ತೋರಣಗಳಿಂದ ಅಲಂಕೃತವಾಗಿತ್ತು.

    ಮೊಲ ಅಡ್ಡ ಉತ್ಸವದ ವಿಶೇಷ: ತವರು ಮನೆಗೆ ಹೋದ ದೇವಿಯರು ಬರುವುದು ತಡವಾದಾಗ ಕೋಪಗೊಂಡ ಚೆಲುವನಾರಾಯಣ ಕುದುರೆಯೇರಿ ಹೊರಟಾಗ ದಾರಿಮಧ್ಯೆ ಮೂರು ಸಲ ಮೊಲ ಬಂದು ಮತ್ತೆ ಸ್ವಾಮಿ ದೇವಾಲಯಕ್ಕೆ ಬರುವ ಆಚರಣೆಯ ಕ್ಷಣಗಳನ್ನು ವೀಕ್ಷಿಸಲು ಸುತ್ತಮುತ್ತಲ ಹಳ್ಳಿಗಳ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ರಾತ್ರಿ 11.30 ಕ್ಕೆ ಆರಂಭವಾದ ಅಶ್ವವಾಹನೋತ್ಸವ ತಡರಾತ್ರಿ ವೇಳೆಗೆ ಮುಕ್ತಾಯವಾಯಿತು.

    ಹಣ್ಣುಗಳ ತಟ್ಟೆಯ ವೈಭವ: ಅಂಗಮಣಿ ಉತ್ಸವದ ನಿಮಿತ್ತ ದೇವಿಯರಿಗೆ ಅರ್ಪಿಸಲು ಸಜ್ಜೆಹಟ್ಟಿ ಮತ್ತು ಕರಗಂ ಗುರುಪೀಠಗಳಲ್ಲಿ ಹಣ್ಣು, ಹೂ, ತರಕಾರಿಗಳನ್ನು ನೂರಾರು ತಟ್ಟೆಗಳಲ್ಲಿ ಜೋಡಿಸಿದ್ದು ಭಕ್ತರ ಕಣ್ಮನ ಸೆಳೆಯಿತು. ಸಂಜೆ 4 ಗಂಟೆಯಿಂದಲೇ ತಂಡೋಪತಂಡವಾಗಿ ಆಗಮಿಸುತ್ತಿದ್ದ ನೂರಾರು ಸಂಖ್ಯೆಯ ಭಕ್ತರು ತಟ್ಟೆವೀಕ್ಷಣೆ ಮಾಡಿದರು. ಬುಧವಾರ ದೇವಿಯರಿಗೆ ಅರ್ಪಿಸಲು ಜೋಡಿಸಿದ್ದ ಹಣ್ಣು-ತರಕಾರಿಗಳಿಂದ ರಸಾಯನ, ಕದಂಬ, ಪಾಯಸ ಮಾಡಿ ದೇಗುಲಕ್ಕೆ ಬಂದ ಎಲ್ಲ ಭಕ್ತರಿಗೆ ಪ್ರಸಾದರೂಪದಲ್ಲಿ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts