More

    ಪಾತಕಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಿ

    ವಿಜಯಪುರ: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದು ತೀವ್ರ ಖಂಡನೀಯ. ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಕೃತ್ಯ ಎಸಗಿದ ಪಾತಕಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.

    ಘಟನೆ ಖಂಡಸಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪದಾಧಿಕಾರಿಗಳು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಕೆಲಕಾಲ ಪ್ರತಿಭಟಿಸಿದರು. ಪಾತಕಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

    ಒಕ್ಕೂಟದ ಅಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಮಣಿಪುರದಲ್ಲಿ ಕಳೆದ 80 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಘರ್ಷ ಅತ್ಯಂತ ಗಂಭೀರ ಸ್ವರೂಪ ಪಡೆಯುತ್ತಿದ್ದು, ಕೇಂದ್ರ ಸರ್ಕಾರವಾಗಲಿ, ಅಲ್ಲಿನ ರಾಜ್ಯ ಸರ್ಕಾರವಾಗಲೀ ಯಾವುದೇ ದಿಟ್ಟ ಕ್ರಮಗಳನ್ನು ಕೈಗೊಳ್ಳದಿರುವುದು ಖಂಡನೀಯ. ಎರಡು ಬುಡಕಟ್ಟುಗಳ ಮಧ್ಯೆ ನಡೆದ ಸಂಘರ್ಷ ಅತಿರೇಕಕ್ಕೆ ಹೋಗಿ ಒಂದು ಬುಡಕಟ್ಟಿನ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅವರ ಮೇಲೆ ಅಮಾನವೀಯವಾಗಿ ಗುಂಪು ಅತ್ಯಾಚಾರವೆಸಗಿ ಕ್ರೂರತ್ವ ಮೆರೆದ ಘಟನೆ ನಾಗರಿಕ ಸಮುದಾಯ ತಲೆತಗ್ಗಿಸುವಂತಾಗಿದೆ ಎಂದರು.

    ಐತಿಹಾಸಿಕ ಹಾಗೂ ಭೌಗೋಳಿಕ ವಿಶೇಷತೆಗಳಿಂದ ಪ್ರವಾಸಿಗಳ ಆಕರ್ಷಣೀಯ ಕೇಂದ್ರ ಬಿಂದುವಾದ ಮಣಿಪುರದಲ್ಲಿಂದು ನಿರಂತರ ಕೋಮುಗಲಭೆಗಳಿಂದ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋಮು ಹಿಂಸಾಚಾರದಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ನಿರ್ಗತಿಕರಾಗಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮಣಿಪುರ ರಾಜ್ಯ ಸರ್ಕಾರಗಳು ಮೂಕ ಪ್ರೇಕ್ಷಕವಾಗಿರುವುದು ಅತ್ಯಂತ ಖಂಡನೀಯ ಎಂದರು.

    ಸ್ಲಂ ಅಭಿವೃದ್ಧಿ ಮುಖಂಡ ಅಕ್ರಂ ಮಾಶ್ಯಾಳಕರ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಮಾರಕವಾದ ಕೋಮು ಸಂಘರ್ಷವನ್ನು ಈ ಕೂಡಲೇ ತಡೆಗಟ್ಟುವುದರೊಂದಿಗೆ ಸಾಮಾನ್ಯ ಜನರ ಅಮೂಲ್ಯ ಜೀವಗಳನ್ನು ಉಳಿಸಲು ಹಾಗೂ ಶಾಂತಿಯ ಮರುಸ್ಥಾಪನೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮಣಿಪುರದಲ್ಲಿ ಕೋಮು ದ್ವೇಷವನ್ನು ಹರಡುತ್ತಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವುದರ ಜತೆಗೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪಾತಕಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

    ಮುಖಂಡರಾದ ಸಿ.ಎ. ಘಂಟೆಪ್ಪಗೊಳ, ಸಿದ್ದಲಿಂಗ ಬಾಗೇವಾಡಿ, ನಿರ್ಮಲಾ ಹೊಸಮನಿ, ಬಾಳು ಜೇವೂರ, ವಿದ್ಯಾವತಿ ಅಂಕಲಗಿ, ಐ.ಕೆ. ಹುಲಕಟ್ಟಿ, ಎ.ಎಚ್. ಜಾವೀದ, ಅತುಲಾ ದ್ರಾಕ್ಷಿ, ಭುವನೇಶ್ವರಿ, ಸಿ.ಬಿ. ಪಾಟೀಲ, ರಾಜೇಶ್ವರಿ ಮಠಪತಿ, ದಸ್ತಗೀರ ಉಕ್ಕಲಿ, ಭರತಕುಮಾರ ಎಚ್.ಟಿ, ಸಿದ್ಧರಾಮ ಹಿರೇಮಠ, ಸಿಸ್ಟರ್ ಜಯಾ, ಬ್ರದರ್ ಚೇತನ, ರವಿ ದೊಡಮನಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts