More

    ಹಾವಾಡಿಗರಿಗೆ ಜಾತಿ ಪ್ರಮಾಣ ಪತ್ರ ನೀಡಿ

    ತರೀಕೆರೆ: ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ ಗ್ರಾಮದ ಸರ್ವೇ ನಂ.108ರಲ್ಲಿ ವಾಸಿಸುತ್ತಿರುವ ಜಾಗವನ್ನು ಪರಿಶೀಲಿಸಿ, ಮನೆ ನಿರ್ಮಿಸಿಕೊಳ್ಳಲು ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಡಾ. ಕೆ.ಜೆ.ಕಾಂತರಾಜ್ ಅವರು ತಹಸೀಲ್ದಾರ್ ತನುಜಾ ಸವದತ್ತಿ ಅವರಿಗೆ ಸೂಚಿಸಿದರು.

    ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಪವಿಭಾಗೀಯ ಮಟ್ಟದ ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅರಳಿಕೊಪ್ಪದ ಸ.ನಂ 74ರ ಜಾಗ ಪರಿಶೀಲಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
    ಸಭೆ ಆರಂಭವಾಗುತ್ತಿದ್ದಂತೆ ದಲಿತ ಮುಖಂಡ ರಾಮು ಮಾತನಾಡಿ, ಅಲೆಮಾರಿ ಹಾವಾಡಿಗ ಸಮುದಾಯದ ಹತ್ತಾರು ಕುಟುಂಬಗಳು ವಾಸಿಸುತ್ತಿದ್ದು, ಆ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ಸ್ಥಳೀಯ ಆಡಳಿತ ಜಾತಿ ಪ್ರಮಾಣ ಪತ್ರ ಕೇಳುತ್ತಿದೆ. ಸ.ನಂ 108ರ ಜಾಗದಲ್ಲಿ ನೆಲೆಕಂಡುಕೊಂಡಿರುವ ಕುಟುಂಬಗಳಿಗೆ ಸೂಕ್ತ ದಾಖಲೆ ಇಲ್ಲದ ಕಾರಣ ಕಂದಾಯ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಅಲೆದಾಡಿಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು. ಅಲ್ಲದೆ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಸ.ನಂ 74ರಲ್ಲಿ ಎಸ್ಸಿ-ಎಸ್ಟಿ ಸಮುದಾಯದವರು ವಾಸಿಸುತ್ತಿದ್ದಾರೆ. ಅರ್ಹರನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು. ಹಂಚಿಕೆ ಮಾಡಿದ ಜಾಗದಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
    ದಲಿತ ಸಮಾಜದ ತಾಲೂಕು ಅಧ್ಯಕ್ಷ ಡಿ.ಎನ್.ಸುನೀಲ್ ಮಾತನಾಡಿ, ಜಗತ್ತು ಎಷ್ಟೇ ಮುಂದುವರಿದರೂ ಅಸ್ಪಶ್ಯತೆ ನಿವಾರಣೆ ಆಗದಿರುವುದು ಬೇಸರ ಮೂಡಿಸುತ್ತದೆ. ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ನಾಲ್ಕೈದು ದಿನಗಳ ಹಿಂದೆ ನಡೆದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಗೊಲ್ಲರಹಟ್ಟಿಯ ದೇಗುಲದಲ್ಲಿ ಪೂಜೆ ಸಲ್ಲಿಸಲು ದಲಿತರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ಕೆ.ಜೆ.ಕಾಂತರಾಜ್, ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅವರ ನಿರ್ದೇಶನದಂತೆ ದೇಗುಲ ಪ್ರವೇಶಿಸಲು ಬೇಕಾದ ವ್ಯವಸ್ಥೆ ಮಾಡಲಾಗುವುದು ಎಂದರು.
    ದಲಿತ ಮುಖಂಡ ಜಿ.ಟಿ.ರಮೇಶ್ ಮಾತನಾಡಿ, ಅಜ್ಜಂಪುರ ತಾಲೂಕಿನ ಗೆಜ್ಜಗೊಂಡನಹಳ್ಳಿಯಲ್ಲಿ ಸ್ಮಶಾನದ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಲಭ್ಯವಿರುವ ಸ್ಮಶಾನ ದೂರ ಇದೆ. ಗ್ರಾಮ ಸನಿಹದ ಸ.ನಂ 35 ರಲ್ಲಿ ಸ್ಮಶಾನಕ್ಕೆ ಅಗತ್ಯವಾದಷ್ಟು ಜಾಗವಿದ್ದು, ಅಲ್ಲೇ ಸ್ಮಶಾನದ ಜಾಗ ಕಲ್ಪಿಸಿಕೊಡಬೇಕು. ಹಲವು ಬಾರಿ ಮನವಿ ಮಾಡಿದರೂ, ಜಂಟಿ ಸರ್ವೇ ನಡೆಸಿ ಜಾಗದ ಸಂಪೂರ್ಣ ಮಾಹಿತಿ ನೀಡಬೇಕಾದ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸ್ಪಂದಿಸುತ್ತಿಲ್ಲ ಎಂದು ದೂರಿದರು. ಎಸಿ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ, ತಕ್ಷಣವೇ ಗೆಜ್ಜಗೊಂಡನಹಳ್ಳಿ ಗ್ರಾಮದ ಸಮಸ್ಯೆ ಇತ್ಯರ್ಥಪಡಿಸಲು ಕಾರ್ಯೋನ್ಮುಖರಾಗಬೇಕು ಎಂದು ಅಜ್ಜಂಪುರ ತಹಸೀಲ್ದಾರ್ ಶಿವಶರಣ ಕಟ್ಟೋಳಿಗೆ ಸೂಚಿಸಿದರು.
    ನಿವೇಶನ ಹಂಚಿಕೆಗೆ ಜಂಟಿ ಸರ್ವೇ ಮಾಡಿ: ಬೇಲೇನಹಳ್ಳಿ ದಲಿತ ಕಾಲನಿಯಲ್ಲಿ ಐದಾರು ದಶಕಗಳಿಂದ ನೆಲೆಸಿರುವ ಕುಟುಂಬಗಳಿಗೆ ಸ್ಮಶಾನ ಸೌಲಭ್ಯವಿಲ್ಲ. ತಕ್ಷಣವೇ ಅಲ್ಲಿನ ಸ್ಥಿತಿಗತಿ ಅವಲೋಕಿಸಿ ಬೇಲೇನಹಳ್ಳಿ ಗ್ರಾಪಂ ವ್ಯಾಪ್ತಿಯ ಎಚ್.ತಿಮ್ಮಾಪುರ ಗ್ರಾಮಠಾಣಾದ 5 ಎಕರೆ ಜಾಗ ಸ್ಮಶಾಸನಕ್ಕೆ ಮೀಸಲಿಡಬೇಕು. ಅಲ್ಲಿ ದಿನೇದಿನೆ ವಿಭಜನೆ ಆಗುತ್ತಿರುವ ಕುಟುಂಬಗಳಿಗೆ ನಿವೇಶನ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಕೆ.ನಾಗರಾಜ್ ಆಗ್ರಹಿಸಿದರು. ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್ ಮಾತನಾಡಿ, ಹುರಳಿಹಳ್ಳಿ ಸ.ನಂ.73ರ ಜಾಗ ಗೋಮಾಳಕ್ಕೆ ಸೇರಿದ್ದು, ಅಲ್ಲಿ ನಿವೇಶನ ಹಂಚಿಕೆಗೆ ಕಾನೂನಿನ ತೊಡಕಾಗಬಹುದು ಸಭೆ ಗಮನಕ್ಕೆ ತಂದರು. ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಕೆ.ನಾಗರಾಜ್ ಮಾತನಾಡಿ, ಆ ಜಾಗ ಸರ್ಕಾರಿ ಜಾಗವೇ ಹೊರತು ಗೋಮಾಳವಲ್ಲ ಎಂದರು. ಸಮಸ್ಯೆ ಆಲಿಸಿದ ಡಾ. ಕೆ.ಜೆ.ಕಾಂತರಾಜ್ ತಕ್ಷಣವೇ ಜಂಟಿ ಸರ್ವೇ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತರೀಕೆರೆ ತಹಸೀಲ್ದಾರ್ ವಿ.ಎಸ್.ರಾಜೀವ್‌ಗೆ ಸೂಚಿಸಿದರು.
    ದ್ಯಾಂಪುರದಲ್ಲಿ ಬೌದ್ಧ ವಿಹಾರ: ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ತಾಲೂಕಿನ ನಂದಿ ಹೊಸಳ್ಳಿ ಗ್ರಾಮದ ಸ.ನಂ 34ರಲ್ಲಿ 10 ಎಕರೆ ಸರ್ಕಾರಿ ಜಾಗವಿದೆ. ಆ ಜಾಗವನ್ನು ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಸ್ಥಾಪನೆಗೆ, ದ್ಯಾಂಪುರ ಗ್ರಾಮದ ಸ.ನಂ 13ರ ಜಾಗವನ್ನು ಬೌದ್ಧ ವಿಹಾರ ನಿರ್ಮಾಣಕ್ಕೆ ಮೀಸಲಿಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಆರ್‌ಎ್ಒ ಪ್ರದೀಪ್, ನಂದಿ ಹೊಸಳ್ಳಿ ಗ್ರಾಮಕ್ಕಿಂತ ಪಟ್ಟಣ ಸಮೀಪದ ದೋರನಾಳು ಸ.ನಂ.225ರಲ್ಲೇ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಸೂಕ್ತ ಜಾಗವಿದ್ದು, ಅದನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ಈಗಾಗಲೇ ತಾಲೂಕಿನ ದ್ಯಾಂಪುರ ಗ್ರಾಮದ ಸ.ನಂ 13ರಲ್ಲಿ 5 ಎಕರೆ ಜಾಗ ಬೌದ್ಧವಿಹಾರ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಪರಿಶೀಲಿಸಿ ದೋರನಾಳು ಗ್ರಾಮದ ಸ.ನಂ 225 ಅಥವಾ ನಂದಿ ಹೊಸಳ್ಳಿ ಸ.ನಂ 34ರಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಸ್ಥಾಪನೆಗೂ ಜಾಗ ಮೀಸಲಿಡುವ ಬಗ್ಗೆ ಚಿಂತಿಸಲಾಗುವುದು ಎಂದು ಭರವಸೆ ನೀಡಿದರು.
    ಸಭೆಯಲ್ಲಿ ಡಿವೈಎಸ್ಪಿ ಡಾ.ಹಾಲಮೂರ್ತಿ ರಾವ್, ತರೀಕೆರೆ ತಹಸೀಲ್ದಾರ್ ವಿ.ಎಸ್.ರಾಜೀವ್, ನ.ರಾ.ಪುರ ತಹಸೀಲ್ದಾರ್ ತನುಜ ಸವದತ್ತಿ, ಪುರಸಭೆ ಮುಖ್ಯಾಕಾರಿ ಎಚ್.ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜುನಾಥ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts