More

    ಮುಸ್ಲಿಮರಿಗೆ ನಾನು ಕೊಟ್ಟ ಶೇ.4 ಮೀಸಲಾತಿ ಮತ್ತೆ ಕೊಡಲಿ; ದೇವೇಗೌಡ ಸವಾಲು

    ಬೆಂಗಳೂರು: ಕುಮಾರಸ್ವಾಮಿ ಅವರ ಸರ್ಕಾರವನ್ನು ತೆಗೆದಿದ್ದು ಯಾರು? ಯಾವ ಕಾರಣಕ್ಕೆ ತೆಗೆದಿರಿ? ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಮುಂದಿನ ಚುನಾವಣೆಯಲ್ಲಿ ಉತ್ತರ ಸಿಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದರು.

    ಜೆ.ಪಿ.ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಜನ್ಮವಿದ್ದರೆ ಮುಸ್ಲಿಂಮರಲ್ಲಿ ಹುಟ್ಟುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಈಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಜತೆ ಜೆಡಿಎಸ್ ವಿಲೀನ ಅಂತ ಸಿದ್ದರಾಮಯ್ಯನವರೇ ತೀರ್ಮಾನ ಮಾಡಿಬಿಟ್ಟರು. ಮೋದಿಗೆ ಪೈಪೋಟಿ ನೀಡುವ ಸಮರ್ಥ ನಾಯಕ ಸಿದ್ದರಾಮಯ್ಯ ಎಂದು ಮಂಡ್ಯದ ನಾಯಕರೊಬ್ಬರು ಹೇಳಿದ್ದರು. ಜಾತ್ಯತೀತ ಎಂಬ ಪದ ಬಳಕೆ ಮಾಡುವ ನೈತಿಕತೆ ಜೆಡಿಎಸ್‌ಗೆ ಇಲ್ಲ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಹಾಗಾದರೆ, ಮುಸ್ಲಿಮರಿಗೆ ನಾನು ಕೊಟ್ಟಿದ್ದ ಶೇ.4 ಮೀಸಲಾತಿಯನ್ನು ಇವರು ಮತ್ತೆ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು.

    ಬಿಜೆಪಿ ಜತೆ ಕುಮಾರಸ್ವಾಮಿ ಸರ್ಕಾರ ಮಾಡಿದಾಗ ಈ ಮಂಡ್ಯದ ನಾಯಕ ಸಾರಿಗೆ ಮಂತ್ರಿ ಆಗಿದ್ದರು. ಅದು ಮರೆತು ಹೋಯ್ತ ಇವರಿಗೆ? ಎಂದು ಚಲುವರಾಯಸ್ವಾಮಿ ವಿರುದ್ಧ ಪರೋಕ್ಷವಾಗಿ ಗುಡುಗಿದರು.

    ಸಿದ್ದರಾಮಯ್ಯ ಆಡಳಿತ ವೈಖರಿಗೆ ಕಿಡಿ

    5 ಗ್ಯಾರಂಟಿ ಜನರಿಗೆ ತಲುಪಿದೆಯಾ ಇಲ್ಲವೇ ಎಂದು ನೋಡಲು 5 ಮಾಜಿ ಮಂತ್ರಿಗಳನ್ನು ನೇಮಕ ಮಾಡಿದ್ದೀರಿ. ಜಿಲ್ಲಾ ಮಟ್ಟದಲ್ಲೂ ಸಮಿತಿ ನೇಮಕ ಮಾಡುತ್ತಿದ್ದೀರಿ. 136 ಶಾಸಕರು, 20-25 ಎಂಎಲ್ಸಿಗಳು, 95 ಜನ ಬೋರ್ಡ್ ಅಧ್ಯಕ್ಷರು, ಅವರಿಗೆ ಸಂಪುಟ ದರ್ಜೆ, ಸಲಹೆಗಾರರಿಗೂ ಸಂಪುಟ ದರ್ಜೆ. ಈಗ ಪಕ್ಷದ ಕಾರ್ಯಕರ್ತರು, ಮುಖಂಡರ ನೇಮಕ ಆಗಿದೆ. ಇದು ಇವರ ಅಡಳಿತದ ವೈಖರಿ ಎಂದು ಸಿದ್ದರಾಮಯ್ಯ ಅವರನ್ನು ತರಾಟೆ ತೆಗೆದುಕೊಂಡರು.

    ಮೋದಿ ಬಗ್ಗೆ ಮಾತನಾಡಲು ನೀವು ಯಾರು?

    ಬೆಳಗ್ಗೆ ಎದ್ದರೆ ಮೋದಿ ಮೋದಿ ಅಂತಾರೆ. ಕೇಂದ್ರದಿಂದ ಹಣ ಬಂದಿಲ್ಲ ಎನ್ನುತ್ತಾರೆ. ಹಿಂದೆ ಮನಮೋಹನ್ ಸಿಂಗ್ ಏನು ಕೊಟ್ಟಿದ್ದರು? ಅದನ್ನು ಇವರು ಹೇಳಬೇಕು. ಅದಕ್ಕೂ ಮೊದಲು ವಾಜಪೇಯಿ ಅವರು ಏನು ಕೊಟ್ಡಿದ್ದಾರೆ ಹೇಳಿ. ಸಿದ್ದರಾಮಯ್ಯನವರೇ ಸತ್ಯ ಹೇಳಿ. ಮೋದಿ ಈ ದೇಶದಲ್ಲಿರುವ ಸಮರ್ಥ ನಾಯಕ ಅನ್ನುವುದನ್ನು ಇಲ್ಲ ಎನ್ನುವುದಕ್ಕೆ ಇವರು ಯಾರು? ಮೋದಿ ಅವರನ್ನು ಇಡೀ ವಿಶ್ವ ಒಪ್ಪಿದೆ. ಮಾತನಾಡಲು ಇತಿಮಿತಿ ಇರಬೇಕು ಎಂದು ಕಿಡಿಕಾರಿದರು.

    ಕಿರಿಯ ಅಧಿಕಾರಿಗೆ ಹಿರಿಯ ಹುದ್ದೆ

    ನಾನು ಯಾವುದೇ ಕಾಮಗಾರಿಯ ಎಲ್ ಒಸಿ ನೀಡಬೇಕಾದರೆ ಐದು ಪೈಸೆ ಪಡೆದಿದ್ದೇನೆ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 5 ಪೈಸೆ ತಗೊಳ್ಳೋದು ಎಲ್ಲಾದರೂ ಉಂಟೆ? ಅದು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುತ್ತಾ? ಅವರು ಒಬ್ಬರು ನೀರಾವರಿ ಕಾರ್ಯದರ್ಶಿಯನ್ನು ನೇಮಕ ಮಾಡಿದ್ದಾರೆ. ನಾನು ೆನ್ ಮಾಡಿದೆ ಫೋನ್ ರಿಸೀವ್ ಮಾಡಿಲ್ಲ. ನಾನು ಒಂದು ದೇಶದ ಸಣ್ಣ ರಾಜಕಾರಣಿ. ಪಾಪ ಅವರ ಕಾರ್ಯದರ್ಶಿ ಫೋನ್ ತೆಗೆದುಕೊಂಡಿಲ್ಲ. ಅವರು ಯಾರು ಅಂತ ಕೇಳಿದರೆ ಸಿದ್ದರಾಮಯ್ಯ ಅವರ ಸಂಬಂಧಿ ಅಂತ ಹೇಳುವುದಿಲ್ಲ. ಅವರು ಸಿದ್ದರಾಮಯ್ಯ ಅವರ ಸಮಾಜದವರು. ಆ ಹಿರಿಯ ಹುದ್ದೆಗೆ ಅತ್ಯಂತ ಕಿರಿಯ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಏಕೆ? ಎಂದು ಪ್ರಶ್ನಿಸಿದರು.

    ಈ ಮುದುಕಪ್ಪನಿಗೆ ಸ್ವಾಭಿಮಾನ ಇದೆ

    ಮಂಡ್ಯದ ನಾಯಕರೊಬ್ಬರು ತುಂಬ ಎತ್ತರಕ್ಕೆ ಬೆಳೆದಿದ್ದಾರೆ. ಆ ಮುದುಕಪ್ಪನನ್ನ ಕಟ್ಟಿಕೊಂಡು ಏನೇನೋ ಮಾಡಲು ಹೋಗುತ್ತಿದ್ದಾರೆ ಎನ್ನುತ್ತಾರೆ. ಈ ಮುದುಕಪ್ಪನಿಗೆ ಸ್ವಾಭಿಮಾನ ಇದೆ. ಈ ಪಕ್ಷ ಉಳಿಸುವುದು ಕಾವೇರಿ ನೀರಿಗಾಗಿ, ನಿಮಗೆ ಮಾತನಾಡುವ ಯೋಗ್ಯತೆ ಇಲ್ಲ. ಹೇಮಾವತಿ ಕಟ್ಟಿದವನು, ಹಾರಂಗಿ ಕಟ್ಟಿರುವವನು ನಿಮ್ಮ ಮುಂದೆ ಇದ್ದೇನೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಗುಡುಗಿದರು.
    ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts