More

    ಸಮರ್ಪಕ ವಿದ್ಯತ್ ನೀಡಿ ಬೆಳೆ ಉಳಿಸಿಕೊಡಿ

    ಕೆ.ಆರ್.ಪೇಟೆ: ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಮೂಲಕ ರೈತರ ಬೆಳೆಗಳನ್ನು ಉಳಿಸಿಕೊಡುವಂತೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಕಟ್ಟೆಕ್ಯಾತನಹಳ್ಳಿ ಭಾಗದ ರೈತರು ಶಾಸಕ ಎಚ್.ಟಿ.ಮಂಜು ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

    ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶಾಸಕರ ಗೃಹ ಕಚೇರಿಗೆ ಆಗಮಿಸಿದ ರೈತರು, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗುತ್ತಿರುವ ಬವಣೆಗಳನ್ನು ವಿವರಿಸಿದರು.

    ನಿತ್ಯ 7 ಘಂಟೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಸಮಸ್ಯೆಯಾಗಿದೆ. ಸರ್ಕಾರದ ಆದೇಶಗಳನ್ನು ಸೆಸ್ಕ್ ಅಧಿಕಾರಿಗಳು ಪಾಲಿಸುತ್ತಿಲ್ಲ. ಗಂಟೆಗೆ 5ರಿಂದ 10 ಬಾರಿ ವಿದ್ಯುತ್ ಕಡಿತವಾಗುತ್ತಿದೆ. ಇದರಿಂದ ಜಮೀನುಗಳಿಗೆ ನೀರು ಹಾಯಿಸಲು ಆಗುತ್ತಿಲ್ಲ. ಕಬ್ಬು ಮತ್ತಿತರ ಬೆಳೆಗಳು ಒಣಗುತ್ತಿವೆ ಎಂದು ಒಣಗುತ್ತಿರುವ ಕಬ್ಬಿನ ಗದ್ದೆಗಳ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಶಾಸಕರಿಗೆ ತೋರಿಸಿದರು.

    ಈ ಸಂಬಂಧ ಸೆಸ್ಕ್ ಅಧಿಕಾರಿಗಳಿಗೆ ಹತ್ತಾರು ಮನವಿ ಪತ್ರ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಭಾಗದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿ ಒಣಗುತ್ತಿರುವ ಬೆಳೆಗಳನ್ನು ಸಂರಕ್ಷಿಸದಿದ್ದರೆ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

    ಮನವಿ ಸ್ವೀಕರಿಸಿದ ಬಳಿಕ ಸೆಸ್ಕ್ ಅಧೀಕ್ಷಕ ಇಂಜಿನಿಯರ್‌ಗೆ ಕರೆ ಮಾಡಿದ ಶಾಸಕ ಎಚ್.ಟಿ.ಮಂಜು ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.

    ತಾಲೂಕಿನಲ್ಲಿ ಬರಗಾಲವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದಲ್ಲಿ ಕುಡಿಯುವ ಕೊಳವೆ ಬಾವಿಗೆ ಟಿಸಿ ಅಳವಡಿಸಿಲ್ಲ. ಅಘಲಯ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಜೋತು ಬಿದ್ದು ಜನರ ಕೈಗೆಟಕುವಂತಿದೆ. ಜತೆಗೆ ರೈತರಿಂದ ಸುಲಿಗೆ ಮಾಡಲಾಗುತ್ತಿದೆ. ರೈತರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸದಿದ್ದರೆ ಶಾಸಕನಾಗಿ ನಾನೇ ಬೀದಿಗಿಳಿದು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಕಟ್ಟೆಕ್ಯಾತನಹಳ್ಳಿ ಗ್ರಾಮದ ರೈತರಾದ ರಾಜು, ಕೆ.ಟಿ.ಚಂದ್ರೇಗೌಡ, ಚೇತನ್ ಕುಮಾರ್, ಕೆ.ಪಿ.ರವಿ, ದೇವರಾಜು, ಸುರೇಶ್, ತೀರ್ಥೇಗೌಡ, ಶಶಿಕುಮಾರ್, ಕೆ.ಟಿ.ಪ್ರಕಾಶ್, ಕೆ.ಆರ್.ಲೋಕೇಶ್, ಕಾಳೇಗೌಡ, ಕಾಂತರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಮನ್ ಮುಲ್ ನಿರ್ದೇಶಕ ಡಾಲು ರವಿ, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ತಾಲೂಕು ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯಕುಮಾರ್ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts