More

    ಅಂಕಣ, ಗಿರ್​ಮಿಟ್​; ಹೆಂಡ್ತಿ ಬಂದ್ಲ…. ಇನ್ನರ ಬಾಯಾಗಿನ ಬಟ್ಟ ತಗಿ 

    ನಮ್ಮ ದೋಸ್ತ ರಾಜಾಂದ ಹುಟ್ಟಾ ಒಂದ ಕೆಟ್ಟ ಚಟಾ ಇತ್ತ. ಅಂವಾ ಯಾವಾಗಲೂ ಎಡಗೈ ಹೆಬ್ಬಟ್ಟ ಬಾಯಾಗ ಇಟಗೊತಿದ್ದಾ. ಅಲ್ಲಾ ಹಂಗ ಅಂವಾ ಚೀಪತಿದ್ದನೋ ಕಡಿತಿದ್ದನೋ ಅದ ನಮಗ ಗೊತ್ತಿಲ್ಲಾ ಒಟ್ಟ ಅವನ ಹೆಬ್ಬಟ್ಟ ಮಾತ್ರ ಕಾಯಮ್ ಬಾಯಾಗ ಇರ್ತಿತ್ತ. ಅಂವಾ ಹಂಗ ಯಾವಾಗಲೂ ಹೆಬ್ಬಟ್ಟ ಬಾಯಾಗ ಇಟ್ಗೊಳೊದಕ್ಕ ನಾವ ದೋಸ್ತರೇಲ್ಲಾ ಅವಂಗ ‘ಹೆಬ್ಬಟ್ಟ ರಾಜಾ’ ಅಂತ ಕರಿತಿದ್ವಿ. ಅಲ್ಲಾ ಹಂಗ ಹೆಬ್ಬಟ್ಟ ಅಂತ ಸಾಲಿ-ಗಿಲಿ ಕಲಿಲಾರದವರಿಗೆ ಅಂತಾರ ಖರೇ ಆದರ ಇಂವಾ ಹೈಲಿ ಎಜುಕೇಟಡ್ ಹೆಬ್ಬಟ್ಟ ರಾಜಾ.

    ಅಂಕಣ, ಗಿರ್​ಮಿಟ್​; ಹೆಂಡ್ತಿ ಬಂದ್ಲ.... ಇನ್ನರ ಬಾಯಾಗಿನ ಬಟ್ಟ ತಗಿ ಯಾರ ಎಷ್ಟ ಹೇಳಿದರು, ಎಷ್ಟ ಡಾಕ್ಟರಗೆ ತೋರಿಸಿದರು ಆ ಚಟಾ ಏನ ಹೋಗಲಿಲ್ಲ. ಎಲ್ಲಾರೂ ಪಾಪ ಅವರವ್ವಗ ‘ನೀ ಅಂವಾ ಸಣ್ಣೊಂವ ಇದ್ದಾಗ ಆ ಚಟಾ ಬಿಡಸಬೇಕಿತ್ತ…ಈಗೇನ ಹೋಗಂಗಿಲ್ಲ ತೊಗೊ’ ಅಂತಿದ್ದರು. ಹಂಗ ಅಂವಾ ತನ್ನ ಬಟ್ಟ ತನ್ನ ಬಾಯಾಗ ಇಟಗೊಳೊದರಿಂದ ಬ್ಯಾರೇಯವರಿಗೇನ ಪ್ರಾಬ್ಲೇಮ್ ಆಗಿದ್ದಿಲ್ಲಾ ಆದರ ನೋಡೋರಿಗೆ ಅಸಂಯ್ಯ ಅನಸ್ತಿತ್ತ. ಅದು ಇಷ್ಟ ದೊಡ್ದೊಂವ ಆದ ಮ್ಯಾಲೆ. ಆದರ ಅಂವಾ ‘ನನ್ನ ಬಟ್ಟ ನನ್ನ ಬಾಯಿ’ ಅಂತ ಅದರ ಬಗ್ಗೆ ತಲಿಕೆಡಸಿಗೊಳ್ಳತಿದ್ದಿಲ್ಲಾ.

    ಮುಂದ ಅವಂದ ಮದ್ವಿ ವಯಸ್ಸಾತು ಅವರ ಮನ್ಯಾಗ ಕನ್ಯಾ ಹುಡಕಲಿಕತ್ತರು. ಹಂಗ ಒಳ್ಳೆ ಮನೆತನ, ಬಾಯಾಗ ಬಟ್ಟ ಇಟ್ಕೊಳೊದ ಒಂದ ಬಿಟ್ಟರ ಹುಡುಗನೂ ಭಾಳ ಛಲೊ. ಬ್ಯಾರೆ ಯಾ ಕೆಟ್ಟ ಚಟಾ ಇದ್ದಿದ್ದಿಲ್ಲಾ, ಹಿಂಗಾಗಿ ಕನ್ಯಾ ಫಿಕ್ಸ್ ಆತ ಅನ್ನರಿ.

    ಆದರ ಆ ಕನ್ಯಾದವರಿಗೆ ಇಂವಾ ಬಟ್ಟ ಬಾಯಾಗ ಇಟ್ಗೋಳೊದ ಗೊತ್ತಿದ್ದಿಲ್ಲಾ, ಪಾಪ ಅವರವ್ವಗರ ಎಲ್ಲೆ ಬೀಗರಿಗೆ ಗೊತ್ತಾಗಿ ಕನ್ಯಾ ಮುರಗಡೆ ಆಗ್ತದೋ ಅಂತ ಸಂಕಟ ಹತ್ತಿತ್ತ. ಅಕಿ ಮಾತ ಮಾತಿಗೆ ‘ಹೆಂಡ್ತಿ ಬಂದ್ಲ…. ಇನ್ನರ ಬಾಯಾಗಿನ ಬಟ್ಟ ತಗಿ’ ಅಂತ ಬೈದ ಬೈತಿದ್ಲು. ಆದರ ಈ ಮಗಾ ಮಾತ್ರ ಅದನ್ನೇನ ಬಿಡ್ತಿದ್ದಿಲ್ಲಾ, ಹಂಗ ಮಂದಿ ಮುಂದ ಕಂಟ್ರೋಲ್ ಮಾಡ್ತಿದ್ದಾ ಮತ್ತ ಆಮ್ಯಾಲೆ ಹೆಬ್ಬಟ್ಟ ಬಾಯಾಗ ಹೋಗ್ತಿತ್ತ.

    ನಾ ಅವರವ್ವಗ, ‘ಏ, ಮಾಮಿ, ಮದ್ವಿ ಆದ ಮ್ಯಾಲೆ ಹೆಂಡ್ತಿ ಬಾಯಾಗ ಬಟ್ಟ ಇಡ್ತಾನ, ಅಕಿ ಒಂದ ಎರಡ ಸಲ ಕಡದ್ಲ ಅಂದರ ನೋಡ, ಮುಂದ ಅಕಿ ಬಾಯಾಗ ಏನ ತನ್ನ ಬಾಯಾಗೂ ಇಟಗೊಳಂಗಿಲ್ಲ ತೊಗೊ’ ಅಂತ ಕಾಡಸ್ತಿದ್ದೆ, ಅದಕ್ಕ ಆ ಮಗಾ ‘ಲೇ…ನೀ ಬಾಯಿ ಮುಚ್ಚ ಮಗನ. ಹೆಂಡ್ತಿ ಬಾಯಾಗ ಬಟ್ಟ ಹಾಕಿ ಕಡಿಸ್ಗೊಳ್ಳಿಕ್ಕೆ ನಿನ್ನಂಗೇನ’ ಅಂತ ನಂಗ ಅಂತಿದ್ದಾ. ಅಲ್ಲಾ ನಾ ಯಾವಾಗ ನನ್ನ ಹೆಂಡ್ತಿ ಬಾಯಾಗ ಬಟ್ಟ ಹಾಕಿದ್ದೆಪಾ ಅನಸ್ತ..ಹೋಗಲಿ ಬಿಡ್ರಿ ಮತ್ತ ಇಲ್ಲೇ ನನ್ನ ಹೆಂಡ್ತಿನ್ನ ತರೋದ ಬ್ಯಾಡ.

    ಕಡಿಕೆ ಇವಂದ ಎಂಗೇಜಮೆಂಟ್ ಆಗಿ ಮದ್ವಿ ಡೇಟ ಫಿಕ್ಸ ಆತ. ಒಂದ ದಿವಸ ಆ ಹುಡಗಿ ಮಾಮಾಗ ಈ ಮಗಾ ಬಾಯಾಗ ಹೆಬ್ಬಟ್ಟ ಇಟ್ಗೊಳೊ ವಿಷಯ ಗೊತ್ತಾತ. ಹಂಗ ಮುಂದ ಅದ ಅವರ ಮಂದಿಗೇಲ್ಲಾ ಗೊತ್ತಾತ, ಅವರೇನ ಭಾಳ ಸಿರಿಯಸ್ ತೊಗೊಳಿಲ್ಲಾ. ಅಲ್ಲಾ ಜಗತ್ತಿನಾಗ ಹೆಂತಿಂತಾ ದೊಡ್ಡ ದೊಡ್ಡ ಚಟಾ ಮಾಡೊರ ಚಟಾ ಮುಚ್ಚಿಟ್ಟ ಸುಳ್ಳ ಹೇಳಿ ಮದ್ವಿ ಮಾಡ್ಕೋತಾರ ಇದೇನ ದೊಡ್ಡದ ಬಿಡ ಅಂತ ಸುಮ್ಮನಾದರು. ಅಲ್ಲಾ ಹಂಗ ವರಾ ಬಾಯಾಗ ಹೆಬ್ಬಟ್ಟ ಇಟ್ಗೊತಾನ ಅಂತ ಮದ್ವಿ ಮುರ್ಕೆಳೊದ ಸರಿ ಕಾಣ್ತಿದ್ದಿಲ್ಲಾ.

    ಆದರೂ ಆ ಹುಡಗಿ ಮಾಮಾ ಇವರವ್ವಗ ‘ಅಲ್ಲರಿ, ನೀವ ಸಣ್ಣೋರಿದ್ದಾಗ ಆ ಚಟಾ ಬಿಡಸಬೇಕಿತ್ತ’ ಅಂತ ತಮ್ಮ ಪೈಕಿ ಒಂದ ಸೇಮ ಕೇಸಿನ ಕಥಿ ಹೇಳಿದಾ. ಅವರ ಕಸೀನನೂ ಒಬ್ಬಂವ ಹಿಂದಕ ಬಾಯಾಗ ಬಟ್ಟ ಇಟ್ಗೊತಿದ್ದನಂತ. ಅದಕ್ಕ ಅವರ ಅವಂಗ ಸಣ್ಣಂವ ಇದ್ದಾಗ ಒಂದ ನಾಡಿ ಇಲ್ಲದ ಚಡ್ಡಿ ಹಾಕತಿದ್ದರಂತ….ಆ ನಾಡಿ ಇಲ್ಲದ ಚಡ್ಡಿ ಹಗಲಗಲಾ ಇಳಿತಿತ್ತ. ಆ ಹುಡುಗ ಅದನ್ನ ಹಿಡ್ಕೊಳಿಕ್ಕೆ ಸಟಕ್ಕನ ಬಾಯಾಗಿನ ಬಟ್ಟ ತಗದ ಎಡಗೈಲೆ ಚಡ್ಡಿ ಹಿಡ್ಕೊತಿದ್ದನಂತ….ಹಿಂಗ ಮಾಡಿ ಮಾಡಿ ಕಡಿಕೆ ಆ ಹುಡಗಾ ತಲಿ ಕೆಟ್ಟ ಬಾಯಾಗಿನ ಬಟ್ಟ ತಗದ ಚಡ್ಡಿ ಹಿಡಕೊಂಡ ಅಡ್ಡಾಡಲಿಕತ್ತನಂತ. ಅಲ್ಲಾ ಮತ್ತ ಪಾಪ ಆ ಹುಡಗನರ ಏನ ಮಾಡಬೇಕ? ಒಂದ ಬಾಯಾಗ ಬಟ್ಟರ ಇಟಗೊಬೇಕು ಇಲ್ಲಾ ಚಡ್ಡಿನರ ಹಿಡ್ಕೋಬೇಕ? ಒಟ್ಟ ಅವನ ಬಾಯಾಗ ಬಟ್ಟ ಇಡೋ ಚಟಾ ತಪ್ಪತಂತ.

    ಅದನ್ನ ಕೇಳಿ ‘ಏ, ನಮ್ಮ ರಾಜಾ ಹಂಗೇಲ್ಲಾ ಮಾಡ್ತಿದ್ದಿಲ್ಲ, ಅಂವಾ ನಾಡಿ ಬಿಟ್ಟ ಚಡ್ಡಿ ಇಳದರ ಇಳಿಲಿ, ನಾ ಏನ ಬಟ್ಟ ತಗೆಯೊಂವ ಅಲ್ಲಾ ಅಂತ ಅಂತಿದ್ದಾ’ ಅಂತ ನಾ ಚಾಷ್ಟಿ ಮಾಡಿದ್ದೆ. ಅಲ್ಲಾ ಒಂದಿಷ್ಟ ಹುಟ್ಟ ಚಟಾ ಇರ್ತಾವ ಅವು ಸುಟ್ಟರೋ ಹೋಗಂಗಿಲ್ಲಾ ಅಂತಾರಲಾ ಹಂಗ ನಮ್ಮ ರಾಜಾ ಇವತ್ತೂ ಬಾಯಾಗ ಹೆಬ್ಬಟ್ಟ ಇಟ್ಗೊತಾನ, ನಾವ ಇವತ್ತೂ ‘ಹೆಬ್ಬಟ್ಟ’ ರಾಜಾ ಅಂತನ ಕರಿತೇವಿ.

    ಅಲ್ಲಾ ಒಬ್ಬೊಬ್ಬರಿಗೆ ಒಂದೊಂದ ಥರಾ ಚಟಾ ಇರ್ತಾವ ಬಿಡ್ರಿ, ಏನ ಮಾಡ್ಲಿಕ್ಕೆ ಬರಂಗಿಲ್ಲಾ, ನಮ್ಮ ಇನ್ನೊಬ್ಬ ದೋಸ್ತಗ ಗಾದರಿ ತುರಿಸಿಗೊಳ್ಳೊ ಚಟಾ ಅದ. ಅಲ್ಲಾ ಮೊದ್ಲ ಗಾದರಿ ಎದ್ದರ ಇಷ್ಟ ತುರಿಸ್ಗೊತಿದ್ದಾ ಈಗ ಬರಬರತ ಗಾದರಿ ಏಳಲಿಲ್ಲಾಂದರೂ ಕೆರಕೊಂಡ ಕೆರಕೊಂಡ ಗಾದರಿ ಏಳಿಸ್ಗೊಳೊ ಚಟಾ ಆಗೇದ. ಅಂವಾ ಅಂತೂ ಇದರ ಬಗ್ಗೆ ಭಾರಿ ಹೇಳೊಂವಾ. ‘ದೋಸ್ತ ಈ ಗಾದರಿ ಬ್ಯಾರೆ, ಬ್ಯಾರೆ ಟೈಪ ಇರ್ತಾವ, ಇರಬಿ ಕಡದರ ಬ್ಯಾರೆ, ಗುಂಗಾಡ ಕಡದರ ಬ್ಯಾರೆ, ತಗಣಿ ಕಡದರ ಬ್ಯಾರೆ…ಹಂಗ ಪಿತಗಾದರಿ ಬ್ಯಾರೆ. ಪಿತಗಾದರಿ ಅಂತೂ ಅಗದಿ ಹಿಂತಿಂತಾವ ಇರ್ತಾವ’ ಅಂತಿದ್ದಾ.

    ಅವಂಗ ಒಟ್ಟ ಒಂದ ಗಾದರಿ ಎದ್ದರ ಸಾಕ, ಒಂದ ತಾಸ ಟೈಮ ಪಾಸ್..ಅದನ್ನ ತುರಿಸಿಗೊಂಡ ತುರಿಸಿಗೊಂಡ ಕನ್ನಡಿ ಒಳಗ ನೋಡ್ಕೊಂಡ ನೋಡ್ಕೊಂಡ ಮಜಾ ತೊಗೊತಿದ್ದಾ. ಹಂಗ ಗಾದರಿ ಕಾಣಲಾರದ ಜಗಾಕ್ಕ, ತುರಿಸಿಗೊಳ್ಳಿಕ್ಕೆ ಬರಲಾರದ ಜಗಾಕ್ಕ ಇದ್ದರಂತೂ ಮುಗದ ಹೋತ ಹೆಂಡ್ತಿ ಜೀವಾ ತಿಂದ ತಿಂದ ಅಕಿ ಕಡೆ ಗಾದರಿ ತುರಿಸಿಗೊತಿದ್ದಾ. ಅಕಿನರ ‘ನೀವೇನ ನಂಗ ನಿಮ್ಮ ಗಾದರಿ ತುರಸಲಿಕ್ಕೆ ಮಾಡ್ಕೊಂಡಿರೇನ’ ಅಂತ ತಲಿ ಕೆಟ್ಟ ಹಿಂಗ ತುರಸ್ತಾಳಲಾ, ಕೆಲವೊಮ್ಮೆ ಅಂತೂ ರಕ್ತ ಬರಬೇಕ ಹಂಗ ತುರಸ್ತಿದ್ಲು.

    ನಾ ‘ಲೇ ಟಿ.ಟಿ. ಇಂಜೆಕ್ಶನ್ ಮಾಡಿಸ್ಗೊ ಮಗನ…ಹೆಂಡ್ತಿ ಭಾಳ ನಂಜ ಅಂತ’ ಕಾಡಸ್ತಿದ್ದೆ. ಇನ್ನ ನಮ್ಮ ಹೆಬ್ಬಟ್ಟ ರಾಜಾ ಅಂತೂ ಅವಂಗ ‘ಏ…ನೀ ಹದಿನಾಲ್ಕ ಇಂಜೇಕ್ಶನ್ ಮಾಡಿಸ್ಗೊಬೇಕ’ ಅಂತ ಅನ್ನೋಂವಾ, ಕಡಿಕೆ ಅಂವಾ ತಲಿ ಕೆಟ್ಟ ‘ಲೇ…ನಾ ಏನ ನಿನ್ನಂಗ ಹೆಂಡ್ತಿ ಬಾಯಾಗ ಬಟ್ಟ ಇಟ್ಟ ಕಡಿಸ್ಗೊಳಂಗಿಲ್ಲಾ…ನೀ ಮಾಡಿಸ್ಗೊ ಇಂಜೇಕ್ಶನ್’ ಅಂತಿದ್ದಾ.

    ಹಿಂಗ ಒಬ್ಬೊಬ್ಬರದ ಒಂದೊಂದ ಚಟಾ ಇರ್ತಾವ ಬಿಡ್ರಿ…ಹಂಗ ನನಗೇನ ಕಡಮಿ ಇಲ್ಲಾ …ಆದರ ಅವ ಯಾವು ಇಷ್ಟ ಸಣ್ಣವಲ್ಲಾ, ಹಿಂಗಾಗಿ ಅವನ್ನೇಲ್ಲಾ ಇಲ್ಲೆ ಬರಿಲಿಕ್ಕೆ ಬರಂಗಿಲ್ಲ.

    ಅನ್ನಂಗ ಇನ್ನೊಂದ ಹೇಳೋದ ಮರತೆ ನಮ್ಮ ರಾಜಾನ ಹೆಂಡ್ತಿ ಮಾಮಾ ತಮ್ಮ ಕಸೀನಂದ ಬಾಯಾಗ ಬಟ್ಟ ಬಿಡಸಲಿಕ್ಕೆ ನಾಡಿ ಇಲ್ಲದ ಚಡ್ಡಿ ಹಾಕಿದ್ದ ಕಥಿ ಹೇಳಿದ್ದನಲಾ, ಆ ಮನಷ್ಯಾ ಮೊನ್ನೆ ಭೆಟ್ಟಿ ಆಗಿದ್ದಾ, ಅವಂಗ ಈಗೇನಿಲ್ಲಾ ಅಂದರು ಒಂದ ಅರವತೈದ ವರ್ಷ ಇರಬೇಕ. ಅಂವಾ ಇವತ್ತೂ ಎಡಗೈಲೆ ಟೊಂಕದಾಗ ಪ್ಯಾಂಟ ಹಿಡ್ಕೊಂಡ ಅಡ್ಡಾಡೋ ಚಟಾ ಅದ, ಹಂಗ್ಯಾಕ ಅಂತ ಕೇಳಿದರ ‘ಇಲ್ಲಾ ಅಂವಾ ಸಣ್ಣೊಂವ ಇದ್ದಾಗ ಬಾಯಾಗ ಹೆಬ್ಬಟ್ಟ ಇಟ್ಗೊತಿದ್ದನಂತ, ಅದನ್ನ ಬಿಡಸಲಿಕ್ಕೆ ಅವರ ಮನ್ಯಾಗ ಅವಂಗ ನಾಡಿ ಇಲ್ಲದ ಚಡ್ಡಿ ಹಾಕತಿದ್ದರು, ಅಂವಾ ಬಾಯಾಗಿನ ಬಟ್ಟ ತಗದ ಚಡ್ಡಿ ಹಿಡ್ಕೊಂಡ ಹಿಡ್ಕೊಂಡ ಇವತ್ತ ಬೆಲ್ಟ ಇದ್ದದ್ದ ಪ್ಯಾಂಟ ಹಾಕ್ಕೊಂಡರು ಕೈಲೆ ಟೊಂಕದಾಗಿನ ಪ್ಯಾಂಟ ಹಿಡಕೊಂಡ ಅಡ್ಡಾಡೊ ಚಟಾ ಅದ’ ಅಂತ ಹೇಳಿದರು. ಏನಂತರಿ ಇದಕ್ಕ? ಒಂದ ಚಟಾ ಬಿಡಸಲಿಕ್ಕೆ ಹೋಗಿ ಮತ್ತೊಂದ ಚಟಾ ಹಚಗೊಂಡರು ಅಂತಾರಲಾ ಹಂಗ ಆತ ಈ ಕಥಿ.

    ಮೊನ್ನೆ ನಮ್ಮ ಹೆಬ್ಬಟ್ಟ ರಾಜಾ ನಸೀಕಲೇ ಆರ ಗಂಟೆಕ್ಕ ಹುಬ್ಳಿ-ಧಾರಾವಡ ಒನ್ ಮುಂದ ಪಾಳೆ ಹಚ್ಚಿದ್ದಾ. ಯಾಕ ಅಂತ ಕೇಳಿದರ ಆಧಾರ ಕಾರ್ಡನಾಗ ಅಡ್ರೇಸ ಚೇಂಜ್ ಮಾಡಸಲಿಕ್ಕೆ ಅಂದಾ. ನಾ ಅವಂಗ ‘ಲೇ..ಮಗನ ನೀ ಅಡ್ರೇಸ್ ಏನ ಚೇಂಜ್ ಮಾಡಸ್ತಿ..ನನ್ನ ಕೇಳಿದರ ನೀ ವರ್ಷಾ ಹೊಸಾ ಆಧಾರ ಕಾರ್ಡ ಮಾಡಸಬೇಕ, ಹೆಬ್ಬಟ್ಟ ಬಾಯಾಗ ಇಟ್ಗೊಂಡ ಇಟ್ಗೊಂಡ ಥಂಬ್ ಇಂಪ್ರೆಶನ್ ವರ್ಷಾ ಚೆಂಜ್ ಆಗ್ತತಿರ್ತದ’ ಅಂತ ಹೇಳಿ ಬಂದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts