More

    ಯುವತಿಗೆ ಆಶ್ರಯ ನೀಡದ ಮಹಿಳಾ ನಿಲಯ, ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಆರೋಪ

    ಉಡುಪಿ:ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವತಿಗೆ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದ ಅಧಿಕಾರಿಗಳು ಆಶ್ರಯ ನೀಡದೆ ಅಮಾನವೀಯತೆ ತೋರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಆರೋಪಿಸಿದ್ದಾರೆ.

    ನಗರದ ಸರ್ವೀಸ್ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ 35 ವರ್ಷದ ಯುವತಿಯನ್ನು ಮಹಿಳಾ ಪೊಲೀಸರ ನೆರವು ಪಡೆದು ವಿಶು ಶೆಟ್ಟಿ ರಕ್ಷಣೆ ಮಾಡಿದ್ದಾರೆ. ಯುವತಿಗೆ ಸುರಕ್ಷಿತ ನೆಲೆ ಕಲ್ಪಿಸಲು ನಿಟ್ಟೂರಲ್ಲಿರುವ ರಾಜ್ಯ ಮಹಿಳಾ ನಿಲಯಕ್ಕೆ ಕರೆದುಕೊಂಡು ಹೋದಾಗ ಅಧಿಕಾರಿಗಳು ಸೇರಿಸಿಕೊಂಡಿಲ್ಲ. ಇದಕ್ಕೂ ಮೊದಲು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಯುವತಿಗೆ ಕೋವಿಡ್ ರ‌್ಯಾಪಿಡ್ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ. ಕೋವಿಡ್ ತಪಾಸಣಾ ಕೇಂದ್ರ ನೆಗಟಿವ್ ವರದಿಯನ್ನು ಮೌಖಿಕ ರೂಪದಲ್ಲಿ ನೀಡಿದ್ದರು. ಮಹಿಳಾ ನಿಲಯದ ಮೇಲ್ವಿಚಾರಕರು ಮೌಖಿಕ ವರದಿ ನಾವು ಸ್ವೀಕರಿಸುವುದಿಲ್ಲ. ಲಿಖಿತ ವರದಿ ಮಾತ್ರ ಮಾನ್ಯ ಮಾಡಲಾಗುವುದು ಎಂದು ಹೇಳಿ ಯುವತಿಗೆ ಆಶ್ರಯ ನೀಡಲು ನಿರಾಕರಿಸಿದ್ದಾರೆ ಎಂದು ವಿಶು ಶೆಟ್ಟಿ ಆರೋಪಿಸಿದ್ದಾರೆ.

    ಕೊನೆಗೆ ಸುರಕ್ಷತೆಯ ಕಾರಣದಿಂದ ಯುವತಿಯನ್ನು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಆಸ್ಪತ್ರೆಯಲ್ಲಿ ದಾಖಲುಪಡಿಸಿದ್ದಾರೆ. ಮಹಿಳಾ ನಿಲಯದ ಅಧಿಕಾರಿಗಳ ಅಮಾನವೀಯ ವರ್ತನೆ ಬೇಸರ ತರಿಸಿದೆ ಎಂದು ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.

    ಪ್ರತ್ಯೇಕ ವ್ಯವಸ್ಥೆಗೆ ಒಪ್ಪಲಿಲ್ಲ: ನಿಲಯದ 70ಕ್ಕೂ ಅಧಿಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ದೃಷ್ಟಿಯಿಂದ ಕೋವಿಡ್ ಪರೀಕ್ಷೆ ವರದಿ ಇಲ್ಲದವರನ್ನು ನಿಲಯಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಪ್ರತ್ಯೇಕ ವ್ಯವಸ್ಥೆ ಮಾಡುವ ಭರವಸೆ ನೀಡಿದರೂ ಅವರು ಒಪ್ಪಲಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts