More

    ವೋಟಿಗಾಗಿ ಗಿಫ್ಟ್ ಭಾಗ್ಯ!; ನೀತಿಸಂಹಿತೆ ಜಾರಿಗೆ ಮುನ್ನ ಮತದಾರರಿಗೆ ಕೊಡುಗೆಗಳ ಮಹಾಪೂರ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ವಿಧಾನಸಭೆ ಚುನಾವಣೆಗೆ ಇನ್ನೂ ಎರಡು- ಮೂರು ತಿಂಗಳು ಬಾಕಿ ಇರುವಾಗಲೇ ಮತದಾರರಿಗೆ ‘ಚುನಾವಣಾ ಪೂರ್ವ ಉಡುಗೊರೆ’ಗಳು ವ್ಯವಸ್ಥಿತವಾಗಿ ಲಭ್ಯವಾಗುತ್ತಿವೆ. ಅನೇಕ ಕಡೆ ಸುಗ್ಗಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಮಧ್ಯ ವಯಸ್ಕ ಮತದಾರರನ್ನು ಸೆಳೆಯಲು ‘ಪ್ರವಾಸ ಭಾಗ್ಯ’, ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ‘ಉದ್ಯೋಗ ಭಾಗ್ಯ’, ಗೃಹಿಣಿಯರ ಮನದಲ್ಲಿ ನೆಲೆ ನಿಲ್ಲಲು ‘ಕುಕ್ಕರ್ ಭಾಗ್ಯ’ ಮತ್ತು ‘ಸೀರೆ ಭಾಗ್ಯ’, ಕಾರ್ವಿುಕರು ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ‘ಜಾಕೆಟ್ ಭಾಗ್ಯ’, ಹೆಣ್ಣು ಮಕ್ಕಳ ವಿಶ್ವಾಸ ಗೆಲ್ಲಲು ‘ಮೂಗುಬೊಟ್ಟು ಭಾಗ್ಯ’ ಸೇರಿ ಬಗೆಬಗೆಯ ಕಸರತ್ತು ಚಾಲ್ತಿಯಲ್ಲಿವೆ. ವಿಧಾನಸಭೆ ಚುನಾವಣೆಗೆ ಅವಧಿಪೂರ್ವವಾಗಿ ಮತದಾರರ ಮನವೊಲಿಸಲು ಸ್ಪರ್ಧಾಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಈ ಹಿಂದೆ ಚುರುಮುರಿ, ಚಹಾದಲ್ಲಿ ಪ್ರಚಾರ ಮುಗಿಸಿ ಚುನಾವಣೆ ಗೆಲ್ಲುತ್ತಿದ್ದ ಅಭ್ಯರ್ಥಿಗಳು, ಮುಂಬರುವ ಚುನಾವಣೆಗೆ ತಿಂಗಳು ಮುಂಚಿತವಾಗಿ ಕೋಟಿ ಕೋಟಿ ಹಣ ಖರ್ಚು ಮಾಡುವ ವಾತಾವರಣ ಸೃಷ್ಟಿಯಾಗಿದೆ.

    ತರಾತುರಿ ಏಕೆ?: ಏಪ್ರಿಲ್ ಕೊನೆ ಅಥವಾ ಮಾರ್ಚ್​ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಮತದಾರರಿಗೆ ಉಡುಗೊರೆ ನೀಡುವುದು ಅಥವಾ ಹಣ ಹಂಚಿಕೆ ಮಾಡುವುದು ಕಷ್ಟ ಎಂದು ಭಾವಿಸಿ ಈಗಲೇ ಅಭ್ಯರ್ಥಿಗಳು ಕಾರ್ಯಾಚರಣೆಗಿಳಿಸಿದ್ದಾರೆ. ಈಗಲೇ ಎರಡು-ಮೂರು ಸುತ್ತುಗಳಲ್ಲಿ ಹಂಚಿಕೆ ಮಾಡಿ ವಾತಾವರಣ ತಮ್ಮ ಪರವಾಗಿ ಮಾಡಿಕೊಳ್ಳುವ ಪ್ರಯತ್ನ ಬಹುತೇಕ ಕ್ಷೇತ್ರಗಳಲ್ಲಿ ನಡೆದಿದೆ.

    ಧಾರ್ವಿುಕ ಕ್ಷೇತ್ರಕ್ಕೆ ಪ್ರವಾಸ: ಧಾರ್ವಿುಕ ಪ್ರವಾಸ ಈ ಹೊತ್ತಿನ ಟ್ರೆಂಡ್ ಎನಿಸಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ತಿರುಪತಿ, ಶೃಂಗೇರಿ, ಓಂ ಶಕ್ತಿ, ಹೊರನಾಡು ಕ್ಷೇತ್ರಕ್ಕೆ ಪ್ರವಾಸ ಕಳಿಸಲಾಗುತ್ತಿದೆ. ಒಂದು ಬಾರಿಗೆ ಒಂದೆರಡು ಸಾವಿರ ಮತದಾರರನ್ನು ಗುರುತಿಸಿ ಪ್ರವಾಸಕ್ಕೆ ಕಳಿಸಲಾಗುತ್ತಿದೆ. ಬಸ್ ವ್ಯವಸ್ಥೆ, ಊಟೋಪಚಾರ ಜತೆಗೆ ತಮ್ಮ ಆಪ್ತರನ್ನು ಸಹ ನಿಯೋಜಿಸುತ್ತಿದ್ದಾರೆ. ಧಾರ್ವಿುಕ ಪ್ರವಾಸದ ಮೂಲಕ ಈ ಮತದಾರರನ್ನು ಭಾವನಾತ್ಮಕವಾಗಿ ಹಿಡಿತದಲ್ಲಿಡುವ ಕೆಲಸ ನಡೆದಿದೆ. ಪ್ರವಾಸದ ವೇಳೆ ಪ್ರಚಾರಕ್ಕೆ ಕಳಿಸಿದ ನಾಯಕನ ಹೆಸರನ್ನು ಪದೇ ಪದೆ ಪ್ರಸ್ತಾಪಿಸಿ ಮತದಾರರ ಮನದಲ್ಲಿ ನೆಲೆಯೂರಿಸುವ ಕೆಲಸವೂ ನಡೆದಿದೆ. ಈ ಪ್ರಯತ್ನದ ಮತ್ತೊಂದು ಭಾಗವಾಗಿ ಧಾರ್ವಿುಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶ್ರೀನಿವಾಸ ಕಲ್ಯಾಣ, ಅಣ್ಣಮ್ಮ ದೇವಿ ಉತ್ಸವ ಆಯೋಜಿಸಿ ಪ್ರಸಾದ ವಿತರಣೆಯ ನೆಪದಲ್ಲಿ ಸೀರೆ, ಪಂಚೆ ವಿತರಣೆಯನ್ನೂ ಮಾಡಲಾಗುತ್ತಿದೆ.

    ಪ್ರತಿಷ್ಠೆ ಪೈಪೋಟಿ: ಎದುರಾಳಿ ಅಭ್ಯರ್ಥಿ ಮೇಲೆ ಪೈಪೋಟಿಗೆ ಬಿದ್ದವರಂತೆ ಮತದಾರರಿಗೆ ಉಡುಗೊರೆ ನೀಡುತ್ತಿದ್ದಾರೆ. ಸಂಕ್ರಾಂತಿ ನೆಪದಲ್ಲಿ ಸೀರೆ, ಪಾತ್ರೆಗಳನ್ನು ನೀಡಿದ್ದು, ಬೆಂಗಳೂರಿನ ಹೊರ ವಲಯದ ಕೆಲವು ಕ್ಷೇತ್ರದಲ್ಲಿ ಮೂಗುತಿಯನ್ನೂ ಹಂಚಿರುವ ಉದಾಹರಣೆ ಇದೆ. ಶ್ರೀಮಂತ ಸ್ಪರ್ಧಾಕಾಂಕ್ಷಿಗಳು ಕಣಕ್ಕಿಳಿಯಲು ವೇದಿಕೆ ಸಜ್ಜುಗೊಳಿಸುವ ಅಬ್ಬರ ನೋಡಿ ಹಾಲಿ ಶಾಸಕರು ಕಂಗಾಲಾಗಿದ್ದಾರೆ. ಲಕ್ಷಿ್ಮೕ ಹೆಬ್ಬಾಳ್ಕರ್ 3 ಸಾವಿರ ಕೊಟ್ಟರೆ ನಾನು ಆರು ಸಾವಿರ ಕೊಡುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ತಾಜಾ ಉದಾಹರಣೆಯಾಗಿದೆ.

    ಆಯೋಗ ಹೇಳೋದೇನು?: ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಅಭ್ಯರ್ಥಿಯು ಪ್ರತಿ ದಿನದ ವೆಚ್ಚದ ಮಾಹಿತಿಯನ್ನು ಆಯೋಗಕ್ಕೆ ನೀಡಬೇಕಾಗುತ್ತದೆ. ಅಕ್ರಮಗಳಲ್ಲಿ ಸಿಕ್ಕಿಕೊಂಡರೆ ಉತ್ತರ ಕೊಡಬೇಕಾಗುತ್ತದೆ. ಆದರೆ, ನೀತಿ ಸಂಹಿತೆ ಜಾರಿಯಾಗುವ ಮುನ್ನ ಆಮಿಷ ನಿಯಂತ್ರಣ ಅಸಾಧ್ಯ ಎಂಬುದು ಚುನಾವಣಾ ಆಯೋಗದ ಅಧಿಕಾರಿಗಳ ವಿವರಣೆಯಾಗಿದೆ. ಇಷ್ಟರ ನಡುವೆಯೂ ಆದಾಯ ತೆರಿಗೆ ಇಲಾಖೆ ಹಣದ ಹರಿವಿನ ಬಗ್ಗೆ ಗಮನ ವಹಿಸಿರುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

    ಕೆಲ ಉದಾಹರಣೆಗಳು

    • ಬೆಂಗಳೂರಿನ ಕಾವೇರಿಪುರ ವಾರ್ಡ್​ನ ಎರಡು ಸಾವಿರ ನಿವಾಸಿಗಳನ್ನು ಸಚಿವರೊಬ್ಬರು ಧರ್ಮಸ್ಥಳ, ಹೊರನಾಡು ಪ್ರವಾಸಕ್ಕೆ ಕಳಿಸಿಕೊಟ್ಟಿದ್ದಾರೆ.
    • ಮಾಗಡಿಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ಮಹಿಳೆಯರಿಗೆ ಮೂಗುತಿ ಉಡುಗೊರೆ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
    • ವಿದ್ಯಾರಣ್ಯಪುರದಲ್ಲಿ ಕ್ರೀಡಾ ಹಬ್ಬ ನಡೆಸಿದರೆ, ಬ್ಯಾಟರಾಯನಪುರದಲ್ಲಿ ಶ್ರೀನಿವಾಸ ಕಲ್ಯಾಣ ನೆರವೇರಿತು. ಟ್ಯಾಲೆಂಟ್ ಹಂಟ್ ಕೂಡ ನಡೆದಿತ್ತು.
    • ಜನವರಿಯಲ್ಲಿ ಬೆಂಗಳೂರಿನ ಕಾಂಗ್ರೆಸ್ ಶಾಸಕರೊಬ್ಬರು ಸಂಪೂರ್ಣ ರಾಮಾಯಣ ಅಥವಾ ಮುದ್ರಿಕಾ ಪ್ರದಾನ ಎಂಬ ಪೌರಾಣಿಕ ನಾಟಕಕ್ಕೂ ವ್ಯವಸ್ಥೆ ಮಾಡಿದ್ದರು.
    • ರಾಜಾಜಿನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಒಂದೂವರೆ ಸಾವಿರ ಮತದಾರರನ್ನು ಭಾನುವಾರ ಧಾರ್ವಿುಕ ಪ್ರವಾಸಕ್ಕೆ ಕಳಿಸಿಕೊಟ್ಟರು.
    • ಬೆಳಗಾವಿ ಜಿಲ್ಲೆಯಲ್ಲಿ ಸ್ಟೀಲ್ ಡಬ್ಬಿ, ಕುಕ್ಕರ್ ವಿತರಣೆ ಜೋರಾಗಿ ನಡೆದಿದ್ದರೆ, ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರು ಒಂದೇ ದಿನ 1.25 ಕೋಟಿ ರೂ. ಖರ್ಚು ಮಾಡಿದರು.
    • ಹೊಸಕೋಟೆಯಲ್ಲಿ ಓಂ ಶಕ್ತಿ, ಅಯ್ಯಪ್ಪಸ್ವಾಮಿ ಪ್ರವಾಸಕ್ಕೆ ಕಳಿಸಿಕೊಡಲಾಗಿತ್ತು.
    • ದಾಸರಹಳ್ಳಿ ಜೆಡಿಎಸ್ ಶಾಸಕರು ಅತೀ ಹೆಚ್ಚಿನ ಪ್ರಮಾಣದಲ್ಲಿ ಓಂ ಶಕ್ತಿಗೆ ಕಳಿಸಿಕೊಟ್ಟಿದ್ದಾರೆ.
    • ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರು ಭಾನುವಾರ ಜಾಕೆಟ್ ಹಾಗೂ ಕುಕ್ಕರ್ ಹಂಚಿಕೆ ಮಾಡಿದ್ದಾರೆ. ಎದುರಾಳಿ ಅಭ್ಯರ್ಥಿ ಉದ್ಯೋಗ ಮೇಳ ನಡೆಸುತ್ತಿದ್ದಾರೆ.
    • ಜೆಡಿಎಸ್ ಟಿಕೆಟ್ ಆಕಾಂಕ್ಷಿಯೊಬ್ಬರು ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಬೆಂಗಳೂರಿನ ಗಿರಿನಗರ, ಶ್ರೀನಿವಾಸ ನಗರಕ್ಕೆ ಪ್ರತಿನಿತ್ಯ ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ.
    • ಮತದಾರರ ಮೊಬೈಲ್​ಗೆ ಒಟಿಪಿ ಕಳಿಸಿ ಅದನ್ನು ತೋರಿಸಿದವರಿಗೆ ಗಿಫ್ಟ್ ಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ.

     

    ಗಂಡ-ಹೆಂಡಿರ ಜಗಳ ಚೂರಿ ಇರಿಯುವ ತನಕ; ಟೀ ಕೇಳಿದ್ದಕ್ಕೆ ಪತಿಗೆ ಚಾಕು ಚುಚ್ಚಿದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts