More

    ಘಟ್ಟಿ ಬಸವಣ್ಣ ಯೋಜನೆಗೆ ಭೂ ಕಂಟಕ

    ಬೆಳಗಾವಿ: ನೂರಾರು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಕಲ್ಪಿಸುವ ಘಟ್ಟಿ ಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆಗೆ ಭೂ ಸ್ವಾಧೀನ ಸಂಕಷ್ಟ ಎದುರಾಗಿದೆ. ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಅರಣ್ಯ ಇಲಾಖೆಗೆ ಪರ್ಯಾಯವಾಗಿ 1271.25 ಹೆಕ್ಟೇರ್ ಭೂಮಿ ನೀಡಬೇಕಿದೆ. ಇದು ಮಹತ್ವದ ಯೋಜನೆ ಆರಂಭಗೊಳ್ಳಲು ವಿಳಂಬವಾಗುತ್ತಿದೆ.

    ಗೋಕಾಕ ತಾಲೂಕಿನ ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲೆಯ ಸಂಗಮ ಪ್ರದೇಶದ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಆಣೆಕಟ್ಟು ನಿರ್ಮಿಸಿ, ಸುತ್ತಮುತ್ತಲಿನ 131 ಗ್ರಾಮಗಳಿಗೆ ನೀರಾವರಿ ಸೌಕರ್ಯ ಕಲ್ಪಿಸುವ ಯೋಜನೆ ಇದಾಗಿದೆ.

    ಮಹತ್ವದ ಯೋಜನೆ: ಹುಕ್ಕೇರಿ, ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ ಗೋಕಾಕ ತಾಲೂಕಿನ ಸುತ್ತಮುತ್ತಲಿನ ಆಯ್ದ ಕೆರೆ ತುಂಬಿಸುವುದು, ಕಾರ್ಖಾನೆಗಳಿಗೆ ನೀರು ಒದಗಿಸುವುದೂ ಯೋಜನೆಯಲ್ಲಿದೆ. ಅಲ್ಲದೆ, ಗೋಕಾಕ ನಗರವನ್ನು ಮಾರ್ಕಂಡೇಯ ನದಿಯ ಪ್ರವಾಹದಿಂದ ರಕ್ಷಿಸಲು ಸಹ ಯೋಜನೆ ರೂಪಿಸಲಾಗಿದ್ದು, ಮಹತ್ವದ್ದಾಗಿದೆ.

    638.07 ಹೆಕ್ಟೇರ್ ಭೂಮಿ: ಈಗಾಗಲೇ ಜಲಸಂಪನ್ಮೂಲ ಇಲಾಖೆಯು ಕುಡಿಯುವ ನೀರು ಸರಬರಾಜು ಯೋಜನೆಗೆ ಒಟ್ಟು 638.07 ಹೆಕ್ಟೇರ್ ಭೂಮಿ ಗುರುತಿಸಿದೆ. ಇದರಲ್ಲಿ ಅರಣ್ಯ ಪ್ರದೇಶದ 553.96 ಹೆಕ್ಟೇರ್ ಮತ್ತು ಅರಣ್ಯೇತರ 84.11 ಹೆಕ್ಟೇರ್ ಪ್ರದೇಶವಿದೆ. ಹೀಗಾಗಿ ಈ ಯೋಜನೆಗೆ ಅಧಿಕ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಸ್ವಾಧೀನ ಪಡಿಸಿಕೊಳ್ಳಬೇಕಾಗಿದ್ದು, ಅರಣ್ಯ ಇಲಾಖೆಗೆ ಪರ್ಯಾಯವಾಗಿ ಎರಡುಪಟ್ಟು ಹೆಚ್ಚಿನ ಭೂಮಿ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಅಂತಿಮಗೊಂಡಿಲ್ಲ.

    ಡೀಮ್ಡ್ ಅರಣ್ಯ ಪ್ರದೇಶಕ್ಕೆ ಸೂಚನೆ: ಯೋಜನೆಗೆ ಪರಿಹಾರತ್ಮಕವಾಗಿ ನೆಡುತೋಪು ಬೆಳೆಸಲು ಗೋಕಾಕ, ಸವದತ್ತಿ ಮತ್ತು ರಾಮದುರ್ಗ ಅರಣ್ಯ ವಲಯಗಳ ವ್ಯಾಪ್ತಿಯಲ್ಲಿ 1271.25 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶ ನಿರ್ಮಿಸಲು ಚಿಂತಿಸಲಾಗಿದೆ. 2020ರ ಅಕ್ಟೋಬರ್ 16ರಂದು ಜಲಸಂಪನ್ಮೂಲ ಇಲಾಖೆಯು ಗೋಕಾಕ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಯೋಗ್ಯತಾ ಪ್ರಮಾಣ ಪತ್ರ ನೀಡುವಂತೆ ಸೂಕ್ತ ನಿರ್ದೇಶನ ನೀಡಲು ಪ್ರಧಾನ ಮುಖ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದೆ. ಆದರೆ, ಅರಣ್ಯ ಇಲಾಖೆಯಿಂದ ಸಮರ್ಪಕ ಮಾಹಿತಿ ಬಂದಿಲ್ಲ ಎನ್ನಲಾಗುತ್ತಿದೆ.

    990 ಕೋಟಿ ರೂಪಾಯಿ ಅನುಮೋದನೆ: ಈಗಾಗಲೇ ರಾಜ್ಯ ಸರ್ಕಾರವು ಘಟ್ಟಿ ಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆಗೆ 990 ಕೋಟಿ ರೂಪಾಯಿಯನ್ನು ಆಡಳಿತಾತ್ಮಕ ಅನುಮೋದನೆ ನೀಡಿದೆ. ಆದರೆ, ಭೂಮಿ ಸ್ವಾಧೀನ ಇನ್ನಿತರ ಕಾರಣಗಳಿಂದ ಕಾರ್ಯರೂಪಕ್ಕೆ ಬಂದಿಲ್ಲ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ನೂರಾರು ಕೋಟಿ ರೂಪಾಯಿ ವೆಚ್ಚದ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

    ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಘಟ್ಟಿ ಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಟೆಂಡರ್ ಕರೆದಿಲ್ಲ. ಅರಣ್ಯ ಇಲಾಖೆಯು ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಿದೆ. ಕೆಲ ನಿಯಮಗಳ ಪ್ರಕಾರ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಡವಾಗಿದೆ. ಭೂ ಸ್ವಾಧೀನಕ್ಕೆ ಎಲ್ಲಿಯೂ ಸಮಸ್ಯೆ ಉಂಟಾಗಿಲ್ಲ. ನಿಗದಿತ ಅವಧಿಯಲ್ಲಿ ಯೋಜನೆ ಕಾಮಗಾರಿ ಮುಗಿಯಲಿದೆ.
    |ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವ

    ಘಟ್ಟಿ ಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆಗೆ ಅರಣ್ಯ ಪ್ರದೇಶದ ಭೂ ಸ್ವಾಧೀನ ಮಾಡಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಡೀಮ್ಡ್ ಭೂಮಿ ನೀಡಬೇಕಾಗಿದೆ. ಸರ್ಕಾರ ಮಟ್ಟದಲ್ಲಿ ಅರಣ್ಯ ಇಲಾಖೆಗೆ ನಿರ್ದೇಶನ ಬಂದಿದ್ದು, ಶೀಘ್ರದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
    | ಅರವಿಂದ ಕಣಗಲಿ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಅಭಿಯಂತ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts