More

    ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿ ಆರಂಭಕ್ಕೆ ಸಕಲ ಸಿದ್ಧತೆ

    ಕಾರವಾರ: 2021 ರ ಜನವರಿ 1 ರಿಂದ ಜಿಲ್ಲೆಯಲ್ಲಿ ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ತರಗತಿ ಪ್ರಾರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಪ್ರಿಯಾಂಗಾ ಎಂ.ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆ, ಕಾಲೇಜ್​ಗಳನ್ನು ಸ್ವಚ್ಛತೆಗೆ ಸಂಬಂಧಪಟ್ಟ ಮುಖ್ಯಾಧ್ಯಾಪಕರು ಹಾಗೂ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ಸ್ಯಾನಿಟೈಸ್ ಮಾಡಿಸುವಂತೆ ಆಯಾ ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಲಾಗಿದೆ. ಶಾಲೆ, ಕಾಲೇಜ್​ಗಳ ಎಸ್​ಡಿಎಂಸಿ ಫಂಡ್​ನಿಂದ ಥರ್ಮಲ್ ಸ್ಕ್ರೀನರ್, ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸೋಪ್ ಕೊಳ್ಳಲು ಆದೇಶಿಸಲಾಗಿದೆ. ಪ್ರತಿ ಶಾಲೆಯಲ್ಲಿ ಒಂದು ಕೊಠಡಿಯನ್ನು ಐಸೋಲೇಶನ್ ಕೊಠಡಿಯಾಗಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

    6 ರಿಂದ 9 ರವರೆಗಿನ ಉಳಿದ ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲೇ ವಿದ್ಯಾಗಮ ಪ್ರಾರಂಭಿಸ ಲಾಗುತ್ತಿದೆ. ದಿನ ಬಿಟ್ಟು ದಿನ 15 ಜನ ವಿದ್ಯಾರ್ಥಿಗಳ ಗುಂಪು ಮಾಡಿ ಶಾಲೆಗಳಲ್ಲೇ ಪಾಠ ಮಾಡಲು ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ವಹಿಸಲಾಗಿದೆ ಎಂದರು.

    ಶಿಕ್ಷಕರಿಗೆ ಕೋವಿಡ್ ಪರೀಕ್ಷೆ: ಸರ್ಕಾರಿ ಶಾಲೆಗಳಲ್ಲಿ 6 ರಿಂದ 10 ನೇ ತರಗತಿಗಳಿಗೆ ಬೋಧಿಸುವ 24011 ಶಿಕ್ಷಕರು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ , 1569 ಶಿಕ್ಷಕರು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿದ್ದಾರೆ. ಸರ್ಕಾರಿ ಪಿಯು ಕಾಲೇಜ್​ಗಳಲ್ಲಿ 294 ಉಪನ್ಯಾಸಕರಿದ್ದಾರೆ. ಅವರೆಲ್ಲರಿಗೂ ಡಿ.28 ಹಾಗೂ 29 ರಂದು ಕ್ಯಾಂಪ್ ಮಾಡಿ ಕೋವಿಡ್ ಪರೀಕ್ಷೆ ಮಾಡಿಸಲಾಗುವುದು ಎಂದರು.

    ಜಿಲ್ಲೆಯಲ್ಲಿ 6 ರಿಂದ 10 ನೇ ತರಗತಿಯವರೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 32,439 ವಿದ್ಯಾರ್ಥಿಗಳು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 18,160 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಇದ್ದಾರೆ. ಪಿಯುನಲ್ಲಿ 13,549 ವಿದ್ಯಾರ್ಥಿಗಳಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಿ ಬರುವುದು ಕಡ್ಡಾಯವಾಗಿದೆ. ಅತಿಥಿ ಉಪನ್ಯಾಸಕರ ಅಗತ್ಯದ ಬಗ್ಗೆ ಪಟ್ಟಿ ಮಾಡಲಾಗಿದ್ದು, ಅವರನ್ನೂ ಒದಗಿಸುವುದಾಗಿ ಸರ್ಕಾರ ಸೂಚಿಸಿದೆ ಎಂದರು. ಡಿಡಿಪಿಐಗಳಾದ ಹರೀಶ ಗಾಂವಕರ್, ಸುಧಾಕರ ಶೆಟ್ಟಿ, ಡಿಡಿಪಿಯು ಎಸ್.ಎನ್. ಬಗಲಿ ಸುದ್ದಿಗೋಷ್ಠಿಯಲ್ಲಿದ್ದರು.

    ಒಪ್ಪಿಗೆ ಇದೆ ಎಂದಷ್ಟೇ ಸಾಕು

    ಶಾಲೆಗೆ ಮಕ್ಕಳು ಬರುವುದು ಕಡ್ಡಾಯವಲ್ಲ. ವಿದ್ಯಾರ್ಥಿಗಳು ಪಾಲಕರಿಂದ ಒಂದು ಒಪ್ಪಿಗೆ ಪತ್ರ ತನ್ನಿ ಎಂದು ಸೂಚಿಸಲಾಗಿದೆ. ಆದರೆ, ಕೆಲವು ಖಾಸಗಿ ಶಾಲೆಗಳು ‘ಮಕ್ಕಳಿಗೆ ಏನೇ ಆದರೂ ನಾವೇ ಜವಾಬ್ದಾರಿ’ ಎಂದು ಬರೆದುಕೊಡಬೇಕು ಎಂದು ಒತ್ತಾಯ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂಥ ಅವಶ್ಯಕತೆಯಿಲ್ಲ. ಮಕ್ಕಳನ್ನು ಶಾಲೆಗೆ ಕಳಿಸಲು ನಮ್ಮ ಒಪ್ಪಿಗೆ ಇದೆ ಎಂದಷ್ಟೇ ಸಾಕು. ಪತ್ರದ ಮಾದರಿಯನ್ನು ಇಲಾಖೆಯೇ ನೀಡಲಿದೆ ಎಂದು ಡಿಡಿಪಿಯ ಹರೀಶ ಗಾಂವಕರ್ ತಿಳಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts