More

    ಮಹಿಳಾ ಮತ ಸೆಳೆಯಲು ನಾನಾ ಕಸರತ್ತು

    ಹಾವೇರಿ: 2ನೇ ಹಂತದ ಗ್ರಾಪಂ ಚುನಾವಣೆಗೆ ಭಾನುವಾರ(ಡಿ. 27) ಮತದಾನ ನಡೆಯಲಿದ್ದು, ಮತದಾರರ ಮನವೊಲಿಕೆ ಅದರಲ್ಲಿಯೂ ಮಹಿಳಾ ಮತದಾರರನ್ನು ಸೆಳೆಯಲು ಕಣದಲ್ಲಿರುವ ಅಭ್ಯರ್ಥಿಗಳು ನಾನಾ ಕಸರತ್ತು ಆರಂಭಿಸಿದ್ದಾರೆ.

    ಜಿಲ್ಲೆಯ 4 ತಾಲೂಕುಗಳ 105 ಗ್ರಾಪಂಗಳ 1,386 ಸ್ಥಾನಗಳಿಗೆ 4,969 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಸರಾಸರಿ ಒಂದು ಸ್ಥಾನಕ್ಕೆ ನಾಲ್ವರಂತೆ ಅಖಾಡದಲ್ಲಿದ್ದು, ಜಿದ್ದಾಜಿದ್ದಿ ಜೋರಾಗಿದೆ.

    ಮಹಿಳಾ ಸಂಘಗಳಿಗೆ ಮಣೆ: ಪ್ರತಿಯೊಂದು ಗ್ರಾಮದಲ್ಲಿರುವ ವಿವಿಧ ಮಹಿಳಾ ಸಂಘಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. 10ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಸಂಘಗಳನ್ನು ಗುರುತಿಸಿ ಸಂಘಕ್ಕೆ ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ಅಭ್ಯರ್ಥಿಗಳು ತಮ್ಮ ಕಡೆಗೆ ಸೆಳೆಯಲು ನಾನಾ ತಂತ್ರಗಳನ್ನು ನಡೆಸಿರುವುದು ಕಂಡುಬಂದಿದೆ.

    ಚಹಾಕೂಟದ ವ್ಯವಸ್ಥೆ: ಪ್ರತಿದಿನ ರಾತ್ರಿ ಗ್ರಾಮದ ಹೊರವಲಯ ಹಾಗೂ ದಾಭಾಗಳಲ್ಲಿ ಬಾಡೂಟ, ಮದ್ಯದ ಪಾರ್ಟಿ ಮಾಡುವ ಮೂಲಕ ಯುವಕರ ಮತಗಳನ್ನು ಸೆಳೆಯುತ್ತಿರುವ ಅಭ್ಯರ್ಥಿಗಳು. ಈಗ ಮಹಿಳಾ ಸಂಘಗಳ ಕಡೆಗೆ ಮುಖ ಮಾಡಿದ್ದಾರೆ. ಮಹಿಳಾ ಸಂಘಗಳ ಸದಸ್ಯರನ್ನು ಒಂದೆಡೆ ಸೇರಿಸಿ ಚಹಾಕೂಟದ ವ್ಯವಸ್ಥೆಯನ್ನು ಮಾಡುವ ಮೂಲಕ ಸೀರೆ, ಕುಕ್ಕರ್, ಬೆಳ್ಳಿ ಉಂಗುರ, ಬೆಳ್ಳಿ ನಾಣ್ಯಗಳ ಉಡುಗೊರೆ ನೀಡುತ್ತಿರುವುದು ತಿಳಿದುಬಂದಿದೆ.

    ಬಂಪರ್ ಆಫರ್: ಒಬ್ಬ ಅಭ್ಯರ್ಥಿ ಊಟ ಮುಗಿಸಿಕೊಂಡು ಬರುತ್ತಲೇ ಮತ್ತೊಬ್ಬ ಅಭ್ಯರ್ಥಿಯ ಆಹ್ವಾನ ಮತದಾರರಿಗೆ ಬಂಪರ್ ಆಫರ್ ರೀತಿ ಬರುತ್ತಿದೆ. ಹೀಗಾಗಿ ಅನೇಕರು ಸರದಿ ಪ್ರಕಾರ ಬಾಡೂಟಕ್ಕೆ ತೆರಳುತ್ತಿದ್ದಾರೆ.

    ಕತ್ತಲ ರಾತ್ರಿ ಕರಾಮತ್ತು ಇಂದು

    ಡಿ. 27ರಂದು ನಡೆಯುವ ಮತದಾನದ ಹಿಂದಿನ ದಿನ ಡಿ. 26ರಂದು ರಾತ್ರಿ ಕತ್ತಲ ರಾತ್ರಿ ಕರಾಮತ್ತಿಗೆ ಅಭ್ಯರ್ಥಿಗಳು ಭರದ ಸಿದ್ಧತೆ ನಡೆಸಿದ್ದಾರೆ. ಪುರುಷರಿಗೆ ಮದ್ಯ, ಹಣದ ಉಡುಗೊರೆ ಸೇರಿದಂತೆ ಮತದಾರರ ಮನವೊಲಿಕೆಗೆ ಸಾಧ್ಯವಿರುವ ಎಲ್ಲ ಕಸರತ್ತನ್ನು ನಡೆಸಲಿದ್ದು, ಅದಕ್ಕೆ ಪೂರಕವಾಗಿರುವ ಸಾಮಗ್ರಿಗಳನ್ನೆಲ್ಲಾ ಅಭ್ಯರ್ಥಿಗಳು ಗೌಪ್ಯ ಸ್ಥಳದಲ್ಲಿ ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಆಪ್ತ ಸ್ನೇಹಿತರ ಮೂಲಕ ಅವುಗಳನ್ನು ಮತದಾರರ ಮನೆಬಾಗಿಲಿಗೆ ತಲುಪಿಸಲು ಶುಕ್ರವಾರ ರಾತ್ರಿಯಿಡೀ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಸಂಚರಿಸಲು ಸಜ್ಜಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts