More

    ಮೂರನೇ ಅಲೆಗೆ ಸಜ್ಜಾಗಿ: ರಾಜ್ಯಗಳಿಗೆ ಕೇಂದ್ರ ಪತ್ರ; ಮೂಲಸೌಕರ್ಯ ಹೆಚ್ಚಳಕ್ಕೆ ಸೂಚನೆ

    ನವದೆಹಲಿ: ಕರೊನಾ ಸಾಂಕ್ರಾಮಿಕತೆಯ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಸಂಪೂರ್ಣವಾಗಿ ಸಜ್ಜಾಗುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಶನಿವಾರ ಸೂಚನೆ ನೀಡಿದೆ. ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವುದರ ಜೊತೆಯಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ವಿುಸುವಂತೆ ಹಾಗೂ ವೈದ್ಯಕೀಯ ಆಮ್ಲಜನಕ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಆಸ್ಪತ್ರೆಗಳಲ್ಲಿ ಈಗಾಗಲೇ ಲಭ್ಯವಿರುವ ಬೆಡ್​ಗಳಿಗೆ ಇನ್ನಷ್ಟು ಬೆಡ್ ಸೇರಿಸಿ ಒಳ ರೋಗಿಗಳ ನಿರ್ವಹಣೆ ಸಾಮರ್ಥ್ಯ ವೃದ್ಧಿಸಿಕೊಳ್ಳುವಂತೆ ರಾಜ್ಯ ಹಾಗೂ ಕೇಂದ್ರಾ ಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದಾರೆ.

    ಜಗತ್ತಿನಲ್ಲಿ ಕರೊನಾ ಮಹಾಮಾರಿಯ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿವೆ. ಹೊಸ ಮಾರಕ ಪ್ರಭೇದ ಒಮಿಕ್ರಾನ್ ಕೇಸ್​ಗಳ ಏರಿಕೆ ಹಿನ್ನೆಲೆಯಲ್ಲಿ ಒಟ್ಟಾರೆಯಾಗಿ ಕೋವಿಡ್ ಕೇಸ್​ಗಳು ಏರಿಕೆಯಾಗುತ್ತಿವೆ ಎಂದು ಭೂಷಣ್ ಪತ್ರದಲ್ಲಿ ಹೇಳಿದ್ದಾರೆ. ಭಾರತ ದಲ್ಲಿಯೂ ಕರೊನಾ ಕೇಸ್ ಸಂಖ್ಯೆ ಏರುಮುಖವಾಗಿದೆ. ಡಿಸೆಂಬರ್ 31ರಂದು 16,764 ಪ್ರಕರಣಗಳು ದೃಢಪಟ್ಟಿದ್ದು 70 ದಿನಗಳಲ್ಲೇ ಅಧಿಕ ದೈನಿಕ ಏರಿಕೆಯಾಗಿತ್ತು. ಶನಿವಾರ 22,000ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಪರಿಸ್ಥಿತಿ ಹದಗೆಡುತ್ತಿರುವುದರ ಸೂಚನೆಯಾಗಿದೆ.

    ಮೂರನೇ ಅಲೆಗೆ ಸಜ್ಜಾಗಿ: ರಾಜ್ಯಗಳಿಗೆ ಕೇಂದ್ರ ಪತ್ರ; ಮೂಲಸೌಕರ್ಯ ಹೆಚ್ಚಳಕ್ಕೆ ಸೂಚನೆಪ್ರಕರಣಗಳ ಏರಿಕೆಯಾಗುವುದ ರೊಂದಿಗೆ ಆರೋಗ್ಯ ಮೂಲ ಸೌಕರ್ಯದ ಮೇಲೆ ಒತ್ತಡ ಹೆಚ್ಚಾಗಲು ಆರಂಭವಾಗಬಹುದು ಎಂಬುದು ಕೇಂದ್ರದ ಕಳವಳವಾಗಿದೆ. ಸೌಮ್ಯ ವ್ಯಾಧಿ ಲಕ್ಷಣವಿರುವ ರೋಗಿಗಳನ್ನು ಇರಿಸಲು ಹಾಸ್ಟೆಲ್​ಗಳನ್ನು ಬಳಸಬಹುದು ಎಂದು ಕೇಂದ್ರ ಸಲಹೆ ಮಾಡಿದೆ. ಹಿಂದಿನ ಅಲೆಗಳ ವೇಳೆಯೂ ಕೆಲವು ರಾಜ್ಯಗಳಲ್ಲಿ ಈ ಕ್ರಮ ಅನುಸರಿಸಲಾಗಿತ್ತು.

    ‘ಫ್ಲೊರೋನಾ’ದ ಮೊದಲ ಕೇಸ್: ಕೋವಿಡ್-19 ಹಾಗೂ ಜ್ವರದ ಮಿಶ್ರಣದ ‘ಫ್ಲೊರೋನಾ’ ಎಂಬ ವ್ಯಾಧಿಯ ಪ್ರಥಮ ಪ್ರಕರಣ ಇಸ್ರೇಲ್​ನಲ್ಲಿ ದಾಖಲಾಗಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ. ಇದು ಕರೊನಾ ಮತ್ತು ಜ್ವರದ ಅವಳಿ ಸೋಂಕು ಆಗಿದೆ ಎಂದು ತಜ್ಞರನ್ನು ಉಲ್ಲೇಖಿಸಿ ಅದು ತಿಳಿಸಿದೆ. ಈ ನಡುವೆ, ಇಸ್ರೇಲ್​ನಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವ ಜನರಿಗೆ ಕರೊನಾ ಲಸಿಕೆಯ ನಾಲ್ಕನೇ ಡೋಸ್ ನೀಡುವ ಅಭಿಯಾನ ಶುಕ್ರವಾರ ಆರಂಭವಾಗಿದೆ.

    ಮಹಾನಗರಗಳಲ್ಲಿ ಅಲರ್ಟ್: ರಾಷ್ಟ್ರ ರಾಜಧಾನಿ ನವದೆಹಲಿ, ಹಣಕಾಸು ಕೇಂದ್ರ ಮುಂಬೈ ಮತ್ತು ಕೋಲ್ಕತ ಮೊದಲಾದ ಜನನಿಬಿಡ ಮೆಟ್ರೋ ನಗರಗಳಲ್ಲಿ ಸೋಂಕಿನ ಪ್ರಕರಣ ತೀವ್ರವಾಗಿ ಏರುತ್ತಿರುವುದು ದತ್ತಾಂಶಗಳ ವಿಶ್ಲೇಷಣೆಯಿಂದ ಗೊತ್ತಾಗಿದೆ.

    ರಾಜ್ಯಗಳಿಗೆ ಏನು ಸೂಚನೆ?

    • ಹೋಂ ಐಸೊಲೇಷನ್ ರೋಗಿಗಳ ನಿಗಾಕ್ಕೆ ವಿಶೇಷ ತಂಡಗಳ ರಚನೆ.
    • ಕಾಲ್ ಸೆಂಟರ್, ಕಂಟ್ರೋಲ್ ರೂಂ ಸ್ಥಾಪನೆ.
    • ಗ್ರಾಮೀಣ ಪ್ರದೇಶಗಳ ಮೇಲೆ ಹೆಚ್ಚಿನ ಗಮನ.
    • ಮಕ್ಕಳ ಪ್ರಕರಣಗಳ ಮೇಲೆಯೂ ಹೆಚ್ಚು ನಿಗಾ.
    • ಸಾರಿಗೆ ಸೌಲಭ್ಯ, ಆಕ್ಸಿಜನ್, ಔಷಧಿಗಳ ಲಭ್ಯತೆಗೆ ಕ್ರಮ.

    ಮಹಾರಾಷ್ಟ್ರದಲ್ಲಿ 80 ಸಾವಿರ ಮರಣ?: ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಜನವರಿ ಮೂರನೇ ವಾರದೊಳಗೆ ಉಲ್ಬಣವಾಗಲಿದ್ದು, ಸೋಂಕಿನ 80 ಲಕ್ಷ ಪ್ರಕರಣಗಳು ದಾಖಲಾಗಿ ಸುಮಾರು 80,000 ಜನರು ಅಸುನೀಗಬಹುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಮೂರನೇ ಅಲೆ ವೇಳೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಗಾಧವಾಗಿರಲಿದೆ ಎಂದು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಪ್ರದೀಪ್ ವ್ಯಾಸ್ ಆತಂಕ ವ್ಯಕ್ತಪಡಿಸಿದ್ದಾರೆ. 80 ಲಕ್ಷ ಪ್ರಕರಣಗಳು ದಾಖಲಾದರೆ ಸಾವಿನ ಪ್ರಮಾಣ ಶೇಕಡ ಒಂದು ಎಂದು ಲೆಕ್ಕ ಹಾಕಿದರೂ ಕನಿಷ್ಠ 80 ಸಾವಿರ ಜನರು ಮೃತಪಡಲಿದ್ದಾರೆ ಎಂದು ವ್ಯಾಸ್ ಹೇಳಿದ್ದಾರೆ. 3ನೇ ಒಮಿಕ್ರಾನ್ ಅಲೆಯಿಂದ ತೀವ್ರ ಸ್ವರೂಪದ ವ್ಯಾಧಿ ಉಂಟಾಗದು ಎಂಬ ವಿವರಣೆಯಿಂದ ‘ಮೈ ಮರೆಯಬೇಡಿ’ ಎಂದವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಲಸಿಕೆ ನೀಡಿಕೆ ಹೆಚ್ಚಿಸಿ ಜನರ ಪ್ರಾಣ ಉಳಿಸಿ ಎಂದು ಮನವಿ ಮಾಡಿದ್ದಾರೆ.

    ಸಚಿವ, ಶಾಸಕರಿಗೆ ಕರೊನಾ: ದೇಶದಲ್ಲೇ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣ ದಾಖಲಾಗಿರುವ ಮಹಾರಾಷ್ಟ್ರದಲ್ಲಿ 10ಕ್ಕೂ ಹೆಚ್ಚು ಸಚಿವರು ಮತ್ತು 20ಕ್ಕೂ ಅಧಿಕ ಶಾಸಕರು ಕರೊನಾ ಪಾಸಿಟಿವ್ ಆಗಿದ್ದು ಆತಂಕ ಸೃಷ್ಟಿಯಾಗಿದೆ. ಇದುವರೆಗೆ ಒಟ್ಟು 30 ಮಂತ್ರಿ ಹಾಗೂ ಶಾಸಕರಲ್ಲಿ ಕರೊನಾ ದೃಢಪಟ್ಟಿದೆ ಎಂದಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯದಲ್ಲಿ ಸೋಂಕು ಹೆಚ್ಚಿದರೆ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ. ವಿಧಾನಸಭೆ ಅಧಿವೇಶನವನ್ನು ಮೊಟಕು ಗೊಳಿಸಿದ್ದನ್ನು ಪ್ರಸ್ತಾಪಿಸಿದ ಅವರು, ಒಮಿಕ್ರಾನ್ ತಳಿ ಹೆಚ್ಚು ವೇಗವಾಗಿ ಹರಡುವುದರಿಂದ ಎಚ್ಚರಿಕೆ ಅಗತ್ಯ ಎಂದು ಹೇಳಿದ್ದಾರೆ.

    ಆರ್​ಆರ್​ಆರ್ ಬಿಡುಗಡೆ ಮತ್ತೆ ಮುಂದಕ್ಕೆ; ಅವಕಾಶ ಬಳಸಿಕೊಳ್ಳುತ್ತಾನಾ ಭಿಮ್ಲಾ ನಾಯಕ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts